Skip to content
Opens in a new window
Listen to this chapter • 3:53

[1] ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡೆದುಕೊಳ್ಳುವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನ ತೋರಿಸುವವನೂ ಆಗಿದ್ದಾನೆ ಎಂದು ಹೇಳಲ್ಪಡುವ ಆ ಪೌಲನೆಂಬ ನಾನು ಕ್ರಿಸ್ತನ ಶಾಂತ ಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವುದೇನಂದರೆ,

[2] ಯಾರು ನಮ್ಮನ್ನು ಲೋಕ ರೀತಿಯಾಗಿ ಜೀವಿಸುವವರೆಂದು ಎಣಿಸುತ್ತಾರೋ ಅವರೊಂದಿಗೆ ದಿಟ್ಟತನದಿಂದಲೇ ಇರಬೇಕೆಂದು ಅಂದುಕೊಂಡಿದೇನೆ. ನಾವು ನಿಮ್ಮೊಂದಿಗಿರುವಾಗ ಅಂಥ ದಿಟ್ಟತನವನ್ನು ತೋರಿಸುವುದಕ್ಕೆ ಅವಕಾಶವುಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

[3] ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ.

[4] ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.

[5] ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು,

[6] ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಪ್ರತಿಕಾರವನ್ನು ನೀಡುವುದಕ್ಕೆ ಸಿದ್ಧರಾಗಿದ್ದೇವೆ.

[7] ನೀವು ಬಾಹ್ಯವಾದುದ್ದುನ್ನು ಮಾತ್ರ ನೋಡುತ್ತೀರಿ. ಯಾವನಾದರೂ ತನ್ನನ್ನು ಕ್ರಿಸ್ತನವನೆಂದು ಒಪ್ಪಿಕೊಂಡರೆ ಅವನು ಆಲೋಚನೆಮಾಡಿಕೊಂಡು ತಾನು ಹೇಗೆ ಕ್ರಿಸ್ತನವನೋ ಹಾಗೆ ನಾವೂ ಕ್ರಿಸ್ತನವರೆಂದು ತಿಳಿದುಕೊಳ್ಳಲಿ.

[8] ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾಚಿಕೆಪಡಬೇಕಾಗಿರುವುದಿಲ್ಲ. ಆದರೆ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಕಟ್ಟುವುದಕ್ಕಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟಿರುವವನು.

[9] ನಾನು ಪತ್ರಿಕೆಗಳಿಂದ ನಿಮ್ಮನ್ನು ಹೆದರಿಸುತ್ತಿದ್ದೆನೆಂದು ತಿಳಿದುಕೊಳ್ಳಬೇಡಿರಿ.

[10] “ಅವನಿಂದ ಬಂದ ಪತ್ರಿಕೆಗಳು ಕಠೋರವಾದವುಗಳೂ, ಪ್ರಬಲವಾದವುಗಳೂ ಆಗಿವೆ. ಆದರೆ ದೈಹಿಕವಾಗಿ ಅವನು ದುರ್ಬಲನು ಅವನ ಮಾತುಗಳು ನಿಂದಾತ್ಮಕವಾದವುಗಳೆಂದು ಕೆಲವರು ಹೇಳುತ್ತಾರಲ್ಲಾ.”

[11] ಅಂಥವರು, ನಾವು ದೂರದಲ್ಲಿರುವಾಗ ಪತ್ರಿಕೆಗಳ ಮೂಲಕ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕಾರ್ಯದಲ್ಲಿಯೂ ಅಂಥವರಾಗಿಯೇ ಇದ್ದೇವೆಂದು ತಿಳಿದುಕೊಳ್ಳಲಿ.

[12] ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವುದಕ್ಕಾಗಲಿ ಅವರೊಂದಿಗೆ ಹೋಲಿಸುವುದಕ್ಕಾಗಲಿ ನಾನು ಇಷ್ಟಪಡುವುದಿಲ್ಲ. ಅವರಂತೂ ತಮ್ಮತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮ್ಮನ್ನು ತಮಗೇ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ.

[13] ನಾವಾದರೋ ನಮ್ಮ ಯೋಗ್ಯತೆಗೆ ಮೀರಿ ಹೊಗಳಿಕೊಳ್ಳದೇ ದೇವರು ನಮಗೆ ನೇಮಿಸಿರುವಂಥ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಈ ಮೇರೆಯೊಳಗಿದ್ದು ನಿಮ್ಮ ತನಕ ಬಂದಿದ್ದೇವೆ.

[14] ನಾವು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ಇತರರಿಗಿಂತ ಮೊದಲು ನಿಮ್ಮ ಬಳಿಗೆ ಬಂದದ್ದರಿಂದ ನಿಮ್ಮ ಮೇಲೆ ಅಧಿಕಾರವಿಲ್ಲದವರಂತೆ ಮೇರೆಯನ್ನು ಅತಿಕ್ರಮಿಸಿಹೋಗುತ್ತಿಲ್ಲ.

[15] ನಾವು ಮಿತಿಗಳನ್ನು ಮೀರಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತೆಗೆದುಕೊಂಡು, ಇವು ನಮ್ಮವು ಎಂದು ಹಿಗ್ಗುವವರಲ್ಲ. ಆದರೆ ನಿಮ್ಮ ನಂಬಿಕೆಯು ಹೆಚ್ಚಿದಾಗೆಲ್ಲಾ ನಿಮ್ಮ ಮೂಲಕ ನಮ್ಮ ಮಿತಿಯು ಇನ್ನೂ ವಿಸ್ತರಿಸಿತು.

[16] ನಿಮಗೆ ಆಚೆಯಿರುವ ಸೀಮೆಗಳಲ್ಲಿಯೂ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವಷ್ಟೇ. ಮತ್ತೊಬ್ಬರ ಜಾಗದಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವುದಿಲ್ಲ.

[17] “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.”

[18] ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ. ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.

2 ಕೊರಿಂಥದವರಿಗೆ — Chapters