Skip to content
Opens in a new window
Listen to this chapter • 4:16

[1] ಭೂಮಿಯ ಮೇಲಿರುವ ನಮ್ಮ ಈ ದೇಹವೆಂಬ ಗುಡಾರವು ಅಳಿದುಹೊದರೂ, ದೇವರಿಂದ ನಿರ್ಮಿತವಾಗಿರುವ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು; ಅದು ಮನುಷ್ಯನ ಕೈಗಳಿಂದ ಕಟ್ಟಿರುವ ಮನೆಯಲ್ಲ ಬದಲಾಗಿ ಶಾಶ್ವತವಾದ ಮನೆಯಾಗಿದೆ.

[2] ನಾವು ಈ ದೇಹದಲ್ಲಿರುವವರೆಗೆ ನರಳುತ್ತಾ; ಪರಲೋಕದಿಂದ ದೊರಕುವ ನಮ್ಮ ನಿವಾಸವನ್ನು ದೇಹದ ಮೇಲೆ ನಾವು ಎಂದು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ.

[3] ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು.

[4] ಏಕೆಂದರೆ, ಈ ದೇಹವೆಂಬ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ; ಬದಲಾಗಿ ಅದರ ಮೇಲೆ ಧರಿಸಿಕೊಳ್ಳಬೇಕೆಂಬುದೇ. ಆದ್ದರಿಂದ ನಶ್ವರವಾದದ್ದು ಅಳಿದುಹೋಗಿ ಅಮರವಾದದ್ದು ಉಳಿಯುವಂತೆ ಅಪೇಕ್ಷಿಸುತ್ತೇವೆ.

[5] ಆ ಸ್ಥಿತಿಗಾಗಿ ನಮ್ಮನ್ನು ಸಿದ್ಧಗೊಳಿಸಿರುವಾತನು ದೇವರೇ; ಅದಕ್ಕಾಗಿ ಆತನು ಪವಿತ್ರಾತ್ಮನನ್ನು ನಮಗೆ ಸಂಚಕಾರವಾಗಿ ನೀಡಿದ್ದಾನೆ.

[6] ಹೀಗಿರುವುದರಿಂದ ನಾವು ಯಾವಾಗಲೂ ನಂಬಿಕೆಯುಳ್ಳವರಾಗಿರಬೇಕು; ದೇಹದಲ್ಲಿ ವಾಸಿಸುವವರೆಗೂ ಕರ್ತನಿಂದ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆ

[7] ನಾವು ನೋಡುತ್ತಾ ನಡೆಯದೇ, ನಂಬುವವರಾಗಿಯೇ ನಡೆಯುತ್ತೇವೆ.

[8] ಇದನ್ನು ಕುರಿತು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿ ಇರುವುದೇ ಉತ್ತಮವೆಂದು ಎಣಿಸುವವರಾಗಿದ್ದೇವೆ.

[9] ಆದ್ದರಿಂದ ನಾವು ದೇಹವೆಂಬ ಮನೆಯಲ್ಲಿದ್ದರೂ ಸರಿಯೇ ಅಥವಾ ಅದನ್ನು ಬಿಟ್ಟಿದ್ದರೂ ಸರಿಯೇ, ಕರ್ತನನ್ನು ಮೆಚ್ಚಿಸುವವರಾಗಿರಬೇಕೆಂಬುದೇ ನಮ್ಮ ಗುರಿಯಾಗಿದೆ.

[10] ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.

[11] ಆದ್ದರಿಂದ, ಕರ್ತನಲ್ಲಿ ಭಯವುಳ್ಳವರಾಗಿರಬೇಕೆಂದು ನಾವು, ಮನುಷ್ಯರನ್ನು ಒಡಂಬಡಿಸುತ್ತೇವೆ. ನಾವು ಎಂಥವರೆಂದು ದೇವರಿಗೆ ಪ್ರಕಟವಾಗಿದ್ದೇವೆ. ಅದು ನಿಮ್ಮ ಮನಸ್ಸಾಕ್ಷಿಗೆ ಕೂಡಾ ಗೊತ್ತಾಗಿದೆ ಎಂದು ನಂಬಿಕೊಂಡಿದ್ದೇನೆ.

[12] ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.

[13] ನಮಗೆ ಬುದ್ಧಿಭ್ರಮಣೆಯಾಗಿದ್ದರೆ ಅದು ದೇವರ ಮಹಿಮೆಗಾಗಿಯೇ; ಹಾಗೂ ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ಪ್ರಯೋಜನಕ್ಕಾಗಿಯೇ.

[14] ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ.

[15] ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು.

[16] ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಮ್ಮೆ ಕ್ರಿಸ್ತನನ್ನು ನಾವು ಹೀಗೇ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಆ ರೀತಿಯಾಗಿ ಪರಿಗಣಿಸುವುದಿಲ್ಲ.

[17] ಆದ್ದರಿಂದ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.

[18] ಇವೆಲ್ಲವುಗಳು ದೇವರಿಂದಲೇ ಉಂಟಾದದ್ದು. ದೇವರು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಂಧಾನಪಡಿಸಿಕೊಂಡು, ಸಂಧಾನಮಾಡುವ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ;

[19] ಹೇಗೆಂದರೆ, ಕ್ರಿಸ್ತನಲ್ಲಿ ದೇವರು ಜಗತ್ತನ್ನು ತನ್ನೊಡನೆ ಸಂಧಾನಮಾಡಿಕೊಳ್ಳುತ್ತಿದ್ದಾನೆ; ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ಹಾಕದೇ, ಈ ಸಂಧಾನದ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಅದನ್ನು ನಮ್ಮ ಮೇಲೆ ಹೊರಿಸಿದ್ದಾನೆ.

[20] ಆದ್ದರಿಂದ ನಾವು ಕ್ರಿಸ್ತನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾನೆ. ದೇವರೊಡನೆ ನೀವು ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತೇವೆ.

[21] ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತ ಯೇಸುವಿನಲ್ಲಿ ನಾವು ನೀತಿವಂತರಾಗಬೇಕೆಂದು ದೇವರು ಹೀಗೆ ಮಾಡಿದರು.

2 ಕೊರಿಂಥದವರಿಗೆ — Chapters