Skip to content
Opens in a new window
Listen to this chapter • 3:33

[1] ನಮ್ಮನ್ನು ನಾವೇ ಮತ್ತೆ ಹೊಗಳಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿಮ್ಮಿಂದ ಪಡೆದುಕೊಳ್ಳಬೇಕೋ?

[2] ಸ್ವತಃ “ನೀವೇ ನಮ್ಮ ಯೋಗ್ಯತಾ ಪತ್ರ” ಅದು ನಮ್ಮ ಹೃದಯಗಳಲ್ಲೇ ಬರೆದಿದೆ ಆ ಪತ್ರವನ್ನು ಎಲ್ಲರೂ ಬಲ್ಲರು. ಎಲ್ಲರೂ ಓದುತ್ತಾರೆ.

[3] ನೀವು, ನಮ್ಮ ಸೇವೆಯ ಫಲವಾಗಿ, ಕ್ರಿಸ್ತನು ನಮ್ಮ ಕೈಯಿಂದ ಬರೆಸಿಕೊಟ್ಟ ಪತ್ರವಾಗಿದ್ದೀರೆಂಬದು ಪ್ರತ್ಯಕ್ಷಪಡಿಸಿದ್ದೀರಿ. ಅದು ಮಸಿಯಿಂದ ಬರೆದದ್ದಲ್ಲ. ಜೀವವುಳ್ಳ ದೇವರ ಆತ್ಮನಿಂದಲೇ ಬರೆದದ್ದು. ಕಲ್ಲಿನ ಹಲಿಗೆಯ ಮೇಲಲ್ಲಾ, ಮನುಷ್ಯನ ಹೃದಯಗಳೆಂಬ ಹಲಿಗೆಗಳ ಮೇಲೆ ಬರೆದದ್ದು.

[4] ನಮಗೆ ಇಂಥ ಭರವಸೆಯು ಕ್ರಿಸ್ತನ ಮೂಲಕವೇ ದೇವರಲ್ಲಿದೆ.

[5] ನಮ್ಮಿಂದಲೇ ಏನಾದರೂ ಉಂಟಾಯಿತೆಂದು ತೀರ್ಮಾನಿಸಿಕೊಳ್ಳುವುದಕ್ಕೆ ನಮಗೆ ನಾವೇ ಯೋಗ್ಯರಲ್ಲ ನಮಗಿರುವ ಯೋಗ್ಯತೆಯೂ ದೇವರಿಂದಲೇ ಬಂದದ್ದು.

[6] ಆತನು ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ನಮಗೆ ಅನುಗ್ರಹಿಸಿದ್ದಾನೆ. ಈ ಒಡಂಬಡಿಕೆಯು ಲಿಖಿತರೂಪವಾಗಿರದೆ ದೇವರಾತ್ಮ ಸಂಬಂಧವಾದದ್ದು ಆಗಿದೆ. ಲಿಖಿತ ರೂಪವಾದ ಒಡಂಬಡಿಕೆಯು ಮರಣವನ್ನುಂಟು ಮಾಡುತ್ತದೆ. ದೇವರಾತ್ಮ ಸಂಬಂಧವಾದದ್ದು ಜೀವವನ್ನುಂಟುಮಾಡುತ್ತದೆ.

[7] ಕಲ್ಲಿನ ಮೇಲೆ ಕೊರೆಯಲಾದ ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿದ್ದಾಗಿತ್ತು. ಆ ಮಹಿಮೆಯಿಂದ ಮೋಶೆಯ ಮುಖವನ್ನು ಆವರಿಸಿದ್ದ ಮಹಿಮೆಯೂ ಕುಂದಿಹೋಗುವಂಥದ್ದಾಗಿದ್ದರೂ ಆ ಮಹಿಮೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿ ನೋಡಲು ಇಸ್ರಾಯೇಲರಿಗೆ ಆಗಲಿಲ್ಲ.

[8] ಹೀಗಿದ್ದ ಮೇಲೆ ದೇವರಾತ್ಮಸಂಬಂಧವಾದ ಈ ಸೇವೆಯು ಇನ್ನೆಷ್ಟು ಮಹಿಮೆಯಿಂದ ಇರಬೇಕಲ್ಲವೇ?

[9] ಅಪರಾಧ ನಿರ್ಣಯಕ್ಕೆ ಸಾಧನವಾಗಿರುವ ಸೇವೆಯು ಮಹಿಮೆಹೊಂದಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೆಷ್ಟೋ ಅಧಿಕ ಮಹಿಮೆಯುಳ್ಳದ್ದಾಗಿ ಇರತ್ತದಲ್ಲವೋ?

[10] ಅಧಿಕವಾದ ಮಹಿಮೆಯುಳ್ಳದ್ದು ಬಂದದ್ದರಿಂದ ಮೊದಲಿದ್ದ ಮಹಿಮೆಯು ಅದರ ಎದುರು ಮಹಿಮೆಯಿಲ್ಲದಂತಾಯಿತು.

[11] ಅಳಿದು ಹೋಗುವಂಥದ್ದೇ, ಅಷ್ಟು ಪ್ರಭಾವವುಳ್ಳದ್ದಾಗಿದ್ದರೆ ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಹೆಚ್ಚಾದ ಪ್ರಭಾವವುಳ್ಳದ್ದಾಗಿರಬೇಕಲ್ಲವೋ?

[12] ನಮಗೆ ಇಂಥ ಭರವಸೆ ಇರುವುದರಿಂದಲೇ ನಾವು ಇಷ್ಟು ಧೈರ್ಯದಿಂದ ಇದ್ದೇವೆ.

[13] ಕುಂದಿಹೋಗುವಂಥ ಮಹಿಮೆಯು ಕುಂದಿಹೋಗುವುದನ್ನು ಇಸ್ರಾಯೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಿದ್ದನು. ನಾವು ಮೋಶೆಯಂತೆ ಮಾಡುವುದಿಲ್ಲ.

[14] ಆದರೆ ಆ ಜನರ ಬುದ್ಧಿಗೆ ಮಂಕು ಕವಿದಿತ್ತು. ಈ ದಿನದವರೆಗೂ ಹಳೇ ಒಡಂಬಡಿಕೆಯು ಓದುವಾಗೆಲ್ಲಾ ಅದೇ ಮಂಕಿನ ಮುಸುಕು ಕವಿದಿದೆ. ಅದನ್ನು ಕ್ರಿಸ್ತ ಯೇಸುವಿನ ಮುಖಾಂತರವೇ ತೆರೆಯಲು ಸಾಧ್ಯ.

[15] ಈ ದಿನದವರೆಗೂ ಮೋಶೆಯ ಧರ್ಮಶಾಸ್ತ್ರವು ಓದುವಾಗೆಲ್ಲಾ ಮುಸುಕು ಅವರ ಹೃದಯವನ್ನು ಮುಚ್ಚಿರುತ್ತದೆ.

[16] ಅವರ ಹೃದಯವು ಕರ್ತನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆಯಲ್ಪಡುವುದು.

[17] ಆ ಕರ್ತನು ದೇವರಾತ್ಮನೇ. ಕರ್ತನ ಆತ್ಮನು ಇರುವಲ್ಲಿ ಸ್ವಾತಂತ್ರ್ಯವಿರುತ್ತದೆ.

[18] ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ನಾವೆಲ್ಲರೂ ಕರ್ತನ ದಾನವಾಗಿರುವ ಆತ್ಮದ ಮಹಿಮೆಯಿಂದ ಅಧಿಕ ಮಹಿಮೆಗೆ ಹೋಗುತ್ತಾ, ಆ ಮಹಿಮೆಯ ಸಾರೂಪ್ಯವುಳ್ಳವರೇ ಆಗುತ್ತೇವೆ. ಇದು ಆತ್ಮನಾಗಿರುವ ಕರ್ತನ ಕಾರ್ಯವೇ ಸರಿ.

2 ಕೊರಿಂಥದವರಿಗೆ — Chapters