Skip to content
Opens in a new window
Listen to this chapter • 3:21

[1] ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೆನೆಂದರೆ; ದೇವರಿಂದ ಪಡೆದ ಕೃಪೆಯನ್ನು ವ್ಯರ್ಥಮಾಡಬೇಡಿರಿ.

[2] “ಸುಪ್ರಸನ್ನತೆಯ ಕಾಲದಲ್ಲಿ ನಿನ್ನ ಮನವಿಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯ ಮಾಡಿದೆನು” ಎಂದು ದೇವರು ಹೇಳುತ್ತಾನಲ್ಲಾ. ನೋಡಿ, ಈಗಲೇ ಆ ಸುಪ್ರಸನ್ನತೆಯ ಕಾಲವು; ಇಂದೇ ಆ ರಕ್ಷಣೆಯ ದಿನ.

[3] ನಮ್ಮ ಸೇವೆಯು ಯಾರ ಮುಂದೆಯೂ ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಅಡ್ಡಿಯನ್ನು ಒಡ್ಡಲಿಲ್ಲ.

[4] ಬದಲಾಗಿ, ಎಲ್ಲಾ ವಿಷಯಗಳಲ್ಲಿ ದೇವರ ಸೇವಕರೆಂದು ನಮ್ಮ ಸೇವೆಯನ್ನು ಸಮ್ಮತ ಮಾಡಿಕೊಂಡು, ನಾವು ಸಂಕಟದಲ್ಲಿಯೂ, ಕೊರತೆಗಳಲ್ಲಿಯೂ, ಇಕ್ಕಟ್ಟುಗಳಲ್ಲಿಯೂ, ಪೆಟ್ಟುಗಳಲ್ಲಿಯೂ,

[5] ದೊಂಬಿ, ಕಲಹ, ಸೆರೆಮನೆ, ಶಿಕ್ಷೆ ಇವುಗಳನ್ನು ಅನುಭವಿಸಿದ್ದೇವೆ. ಮೈಮುರಿದು ಕೆಲಸ ಮಾಡಿದ್ದೇವೆ. ನಿದ್ದೆಗೆಟ್ಟು ಬಳಲಿದ್ದೇವೆ; ಹಸಿವಿನಲ್ಲಿ ಸೊರಗಿದ್ದೇವೆ; ಈ ಎಲ್ಲಾ ವಿಷಯಗಳಲ್ಲಿ ಬಹು ಸಮಾಧಾನವನ್ನು ತೋರಿಸಿದ್ದೇವೆ.

[6] ಶುದ್ಧಮನಸ್ಸು, ಜ್ಞಾನ, ದೀರ್ಘಶಾಂತಿ, ದಯೆ, ಪವಿತ್ರಾತ್ಮ, ನಿಷ್ಕಪಟವಾದ ಪ್ರೀತಿ,

[7] ಸತ್ಯವಾಕ್ಯ, ದೇವರ ಮಹತ್ವ ಇವುಗಳಿಂದ ಕೂಡಿದವರಾಗಿ, ಎಡಬಲಗೈಗಳಲ್ಲಿ ನೀತಿಯೆಂಬ ಆಯುಧಗಳನ್ನು ಧರಿಸಿಕೊಂಡಿದ್ದೇವೆ.

[8] ನಾವು ಮಾನ ಮತ್ತು ಅವಮಾನ, ಕೀರ್ತಿ ಮತ್ತು ಅಪಕೀರ್ತಿಗಳಲ್ಲಿಯೂ ಸೇವೆಮಾಡಿದ್ದೇವೆ. ಸತ್ಯವಂತರಾದರೂ ಮೋಸಗಾರರೆನಿಸಿಕೊಂಡಿದ್ದೇವೆ.

[9] ನಾವು ಪ್ರಸಿದ್ಧರಾಗಿದ್ದರೂ ಅಪರಿಚಿತರೆನ್ನಿಸಿಕೊಂಡು ಸೇವೆ ಮಾಡಿದ್ದೇವೆ. ಸಾಯುವವರಾಗಿ ತೋರಿದರೂ, ಬದುಕಿದ್ದೇವೆ! ನೋಡಿ, ಶಿಕ್ಷೆಗೆ ಗುರಿಯಾದರೂ ಕೊಲ್ಲಲ್ಪಡದವರಾಗಿದ್ದೇವೆ,

[10] ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.

[11] ಕೊರಿಂಥದವರೇ, ಬಿಚ್ಚುಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡನೆ ಮಾತನಾಡಿದ್ದೇವೆ.

[12] ನಮ್ಮಲ್ಲಿ ಸಂಕುಚಿತ ಭಾವನೆಯೇನೂ ಇಲ್ಲ. ಇದು ಇರುವುದಾದರೆ ನಿಮ್ಮಲ್ಲೇ.

[13] ಆದ್ದರಿಂದ ಮಕ್ಕಳಿಗೆ ಹೇಳುವಂತೆ ಹೇಳುತ್ತಿದ್ದೇವೆ; ನಾವು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿದಂತೆ, ನೀವು ನಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿರಿ.

[14] ನೀವು ಕ್ರಿಸ್ತ ನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಿಯಾಗಬೇಡಿರಿ. ಧರ್ಮಕ್ಕೂ, ಅಧರ್ಮಕ್ಕೂ ಸಹವಾಸವೇನು?

[15] ಬೆಳಕಿಗೂ, ಕತ್ತಲೆಗೂ ಅನ್ಯೋನ್ಯತೆಯೇನು? ಕ್ರಿಸ್ತನಿಗೂ ಸೈತಾನನಿಗೂ ಒಪ್ಪಂದವೇನು? ವಿಶ್ವಾಸಿಗೂ ಅವಿಶ್ವಾಸಿಗೂ ಪಾಲುಗಾರಿಕೆಯೇನು?

[16] ದೇವ ಮಂದಿರಕ್ಕೂ, ವಿಗ್ರಹಗಳಿಗೂ ಒಪ್ಪಿಗೆಯೇನು? ನಾವು ದೇವರೇ ಹೇಳಿರುವಂತೆ ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ, “ನಾನು ಅವರಲ್ಲಿ ವಾಸಮಾಡುವೆನು, ಅವರ ನಡುವೆಯೇ ನಾ ತಿರುಗಾಡುವೆನು ಅವರಿಗೆ ನಾನೇ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು” ಎಂದು ಹೇಳಿದ್ದಾನೆ.

[17] ಆದ್ದರಿಂದ, “ಅನ್ಯಜನರನ್ನು ಬಿಟ್ಟು ಹೊರಬನ್ನಿರಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ” ಎಂದು ಕರ್ತನು ಹೇಳುತ್ತಾನೆ.

[18] ಇದಲ್ಲದೆ, “ನಾನು ನಿಮ್ಮನ್ನು ಸ್ವೀಕರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ, ಕುಮಾರಿಯರು ಆಗಿರುವಿರೆಂದು” ಸರ್ವಶಕ್ತನಾದ ಕರ್ತನು ಹೇಳುತ್ತಾನೆ.

2 ಕೊರಿಂಥದವರಿಗೆ — Chapters