[1] ಇನ್ನೊಮ್ಮೆ ನಿಮ್ಮ ಬಳಿಗೆ ಬಂದು, ನಿಮ್ಮನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆ.
[2] ನಾನೇ ನಿಮ್ಮನ್ನು ದುಃಖಪಡಿಸಿದರೆ, ನನ್ನನ್ನು ಸಂತೋಷಪಡಿಸುವವರು ಯಾರು? ನನ್ನಿಂದ ದುಃಖಕ್ಕೆ ಒಳಗಾದ ನೀವೇ ಅಲ್ಲವೇ?
[3] ಆದಕಾರಣ ನಾನು ಆ ಪತ್ರವನ್ನು ಬರೆದದ್ದು: ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮೆಲ್ಲರ ಸಂತೋಷವೆಂದು ನೀವು ಭಾವಿಸುತ್ತೀರೆಂದು ನಂಬಿದ್ದೇನೆ.
[4] ನಿಮ್ಮ ಮೇಲೆ ನನಗಿರುವ ಅಧಿಕವಾದ ಪ್ರೀತಿಯನ್ನು ನೀವು ತಿಳಿದುಕೊಳ್ಳಬೇಕೆಂತಲೇ ನಾನು ಬಹಳವಾಗಿ ಕಣ್ಣೀರಿಡುತ್ತಾ ಹೃದಯದ ಬಹು ಸಂಕಟದಿಂದಲೂ ವ್ಯಾಕುಲದಿಂದಲೂ ನಿಮಗೆ ಬರೆದೆನೇ ಹೊರತು ನಿಮ್ಮನ್ನು ನೋಯಿಸುವುದಕ್ಕಾಗಿಯಲ್ಲ.
[5] ಮನಸ್ಸಿಗೆ ನೋವುಂಟುಮಾಡಿದವನು ಒಬ್ಬನು ನಿಮ್ಮಲ್ಲಿ ಇದ್ದರೂ ಅವನು ನನ್ನನ್ನು ಮಾತ್ರ ದುಃಖಪಡಿಸದೆ ನಿಮ್ಮಲ್ಲಿ ಬಹುಜನರನ್ನೂ ನೋಯಿಸಿದ್ದಾನೆ. ಆ ದುಃಖವು ಎಲ್ಲರಲ್ಲಿಯೂ ಉಂಟಾಯಿತೆಂದು ನಾನು ಹೇಳುವುದಿಲ್ಲ.
[6] ಇಂಥವನಿಗೆ ನಿಮ್ಮಲ್ಲಿ ಬಹುಜನರಿಂದಾದ ಆ ಶಿಕ್ಷೆಯೇ ಸಾಕು.
[7] ಇನ್ನೂ ಅವನನ್ನು ಶಿಕ್ಷಿಸದೇ ಮನ್ನಿಸಿರಿ, ಸಂತೈಸಿರಿ. ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿ ಹೋಗುವನು.
[8] ಆದ್ದರಿಂದ ಅವನಿಗೆ ನಿಮ್ಮ ಪ್ರೀತಿಯನ್ನು ತೋರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
[9] ಎಲ್ಲಾ ವಿಷಯದಲ್ಲೂ ನೀವು ವಿಧೇಯರಾಗಿದ್ದೀರೋ ಎಂದು ನಿಮ್ಮ ಗುಣವನ್ನು ಪರೀಕ್ಷಿಸಿ ತಿಳಿದುಕೊಳ್ಳಬೇಕೆಂಬುವ ಉದ್ದೇಶದಿಂದಲೇ ಹೀಗೆ ಬರೆದೆನು.
[10] ನೀವು ಯಾರನ್ನು ಕ್ಷಮಿಸುತ್ತೀರೋ ನಾನು ಸಹ ಅವನನ್ನು ಕ್ಷಮಿಸುತ್ತೇನೆ. ನಿಮಗೋಸ್ಕರವೇ ಅವನನ್ನು ಕ್ರಿಸ್ತನ ಸನ್ನಿಧಾನದಲ್ಲಿ ಕ್ಷಮಿಸಿದ್ದೇನೆ.
[11] ಸೈತಾನನು ನಮ್ಮನ್ನು ವಂಚಿಸಬಾರದೆಂದು ಹೀಗೆ ಮಾಡಿದೆನು. ಅವನ ಕುತಂತ್ರಗಳನ್ನು ನಾವು ಚೆನ್ನಾಗಿ ತಿಳಿದಿದ್ದೇವಲ್ಲಾ.
[12] ದೇವರು ನನಗಾಗಿ ಬಾಗಿಲನ್ನು ತೆರೆದಿದ್ದಾನೆಂದು ಯೋಚಿಸಿ ಕ್ರಿಸ್ತನ ಸುವಾರ್ತೆಯನ್ನು ಸಾರುವುದಕ್ಕಾಗಿ ನಾನು ತ್ರೋವ ಪಟ್ಟಣಕ್ಕೆ ಬಂದೆನು.
[13] ಆದರೂ ನನ್ನ ಸಹೋದರ ತೀತನು ನನಗೆ ಅಲ್ಲಿ ಸಿಕ್ಕಲಿಲ್ಲವಾದ ಕಾರಣ ನನ್ನ ಮನಸ್ಸಿಗೆ ಸಮಾಧಾನವಿಲ್ಲದೆ ಅಲ್ಲಿದ್ದವರಿಗೆ ವಂದಿಸಿ ಅಲ್ಲಿಂದ ಹೊರಟು ಮಕೆದೋನ್ಯಕ್ಕೆ ಬಂದೆನು.
[14] ಕ್ರಿಸ್ತನ ಮುಖಾಂತರ ನಮ್ಮನ್ನು ವಿಜಯೋತ್ಸವದತ್ತ ನಡೆಸುವ ಹಾಗೂ ನಮ್ಮ ಮೂಲಕವಾಗಿ ತನ್ನ ಜ್ಞಾನವೆಂಬ ಸುವಾಸನೆಯನ್ನು ಎಲ್ಲಾ ಸ್ಥಳಗಳಲ್ಲಿ ಹರಡಿಸಿದ ದೇವರಿಗೆ ಸ್ತೋತ್ರವಾಗಲಿ.
[15] ರಕ್ಷಣಾ ಮಾರ್ಗದಲ್ಲಿರುವವರಲ್ಲಿಯೂ ಮತ್ತು ನಾಶನದ ಮಾರ್ಗದಲ್ಲಿರುವವರಲ್ಲಿಯೂ ನಾವು ದೇವರಿಗೆ ಕ್ರಿಸ್ತನ ಪರಿಮಳವಾಗಿದ್ದೇವೆ.
[16] ನಾವು ವಿನಾಶಮಾರ್ಗದಲ್ಲಿರುವವರಿಗೆ ಮೃತ್ಯುಕಾರಕ ಗಂಧ; ರಕ್ಷಣಾಮಾರ್ಗದಲ್ಲಿರುವವರಿಗೆ ಸಜೀವದಾಯಕ ಸುಗಂಧ. ಇಂಥ ಕಾರ್ಯಗಳಿಗೆ ಯಾರು ಯೋಗ್ಯರು?
[17] ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ, ಕ್ರಿಸ್ತ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.