Skip to content
Opens in a new window
Listen to this chapter • 4:13

[1] ನಮ್ಮ ರಕ್ಷಕನಾದ ದೇವರ ನಮ್ಮ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತ ಯೇಸುವಿನ ಆಜ್ಞೆಯ ಮೇರೆಗೆ ನೇಮಿಸಲ್ಪಟ್ಟ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು

[2] ನಂಬಿಕೆಯ ವಿಷಯದಲ್ಲಿ ನಿಜಕುಮಾರನಾಗಿರುವ ತಿಮೊಥೆಯನಿಗೆ ಬರೆಯುವುದೇನೆಂದರೆ, ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಕರುಣೆಯೂ ಶಾಂತಿಯೂ ಉಂಟಾಗಲಿ.

[3] ನಾನು ಮಕೆದೋನ್ಯಕ್ಕೆ ಹೋಗುತ್ತಿದ್ದಾಗ ನೀನು ಎಫೆಸದಲ್ಲೇ ಇದ್ದುಕೊಂಡು ಅಲ್ಲಿರುವ ಕೆಲವರಿಗೆ, ನೀವು ಬೇರೆ ಉಪದೇಶವನ್ನು ಮಾಡಬಾರದೆಂತಲೂ,

[4] ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, ವಂಶಾವಳಿಗಳೂ ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ.

[5] ಶುದ್ಧಹೃದಯ, ಒಳ್ಳೆಯ ಮನಸ್ಸಾಕ್ಷಿ, ಪ್ರಾಮಾಣಿಕವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ ಪ್ರೀತಿಯೇ ದೇವಾಜ್ಞೆಯ ಗುರಿಯಾಗಿದೆ.

[6] ಕೆಲವರು ಈ ಗುರಿಯನ್ನು ಬಿಟ್ಟು ವ್ಯರ್ಥವಾದ ವಿಚಾರಗಳ ಕಡೆಗೆ ತಿರುಗಿಕೊಂಡಿದ್ದಾರೆ.

[7] ಅವರು ಧರ್ಮೋಪದೇಶಕರಾಗಬೇಕೆಂದು ಬಯಸುತ್ತಿದ್ದರೂ ತಾವು ಹೇಳುವುದಾಗಲಿ, ತಾವು ದೃಢವಾಗಿ ಮಾತನಾಡುವ ವಿಷಯವಾಗಲಿ ಇಂಥದೆಂದು ತಿಳಿಯದವರಾಗಿದ್ದಾರೆ.

[8] ಧರ್ಮಶಾಸ್ತ್ರವು ಒಳ್ಳೆಯದೆಂದು ಬಲ್ಲೆವು. ಆದರೆ ಅದನ್ನು ಅದರ ಉದ್ದೇಶಕ್ಕೆ ತಕ್ಕ ಹಾಗೆ ಉಪಯೋಗಿಸಬೇಕು.

[9] ಧರ್ಮಶಾಸ್ತ್ರವು ನೀತಿವಂತರಿಗೋಸ್ಕರ ಅಲ್ಲ, ಆದರೆ ಅಕ್ರಮಗಾರರು, ಅವಿಧೇಯರು, ಭಕ್ತಿಹೀನರು, ಪಾಪಿಷ್ಠರು, ಅಪವಿತ್ರರು, ಪ್ರಾಪಂಚಿಕರು, ತಂದೆತಾಯಿಗಳನ್ನು ಕೊಲ್ಲುವವರು, ನರಹತ್ಯಮಾಡುವವರು,

[10] ಜಾರರು, ಸಲಿಂಗಕಾಮಿಗಳು, ನರಚೋರರು, ಸುಳ್ಳುಗಾರರು, ಅಸತ್ಯವಾದಿಗಳು, ಸ್ವಸ್ಥಬೋಧನೆಗೆ ವಿರುದ್ಧವಾಗಿರುವಂಥವುಗಳನ್ನು ಮಾಡುವವರು, ಈ ಮೊದಲಾದ ಅನೀತಿವಂತರಿಗಾಗಿ ನೇಮಕವಾಗಿದೆ ಎಂದು ನಮಗೆ ತಿಳಿದಿದೆ.

[11] ಈ ಬೋಧನೆಯು ಭಾಗ್ಯವಂತನಾದ ದೇವರ ಮಹಿಮೆಯನ್ನು ಪ್ರದರ್ಶಿಸುವ ಸುವಾರ್ತೆಗೆ ಅನುಸಾರವಾಗಿದೆ. ಈ ಸುವಾರ್ತೆಯ ಸೇವೆಯು ನನಗೆ ಕೊಡಲ್ಪಟ್ಟಿತು.

[12] ನನಗೆ ಬಲವನ್ನು ದಯಪಾಲಿಸಿದವನು ನಮ್ಮ ಕರ್ತನಾದ ಯೇಸು ಕ್ರಿಸ್ತನೇ. ಅದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಮೊದಲು ದೂಷಕನೂ, ಹಿಂಸಕನೂ, ಕೇಡುಮಾಡುವವನೂ ಆಗಿದ್ದ ನನ್ನನ್ನು ಆತನು ನಂಬಿಗಸ್ತನೆಂದು ಎಣಿಸಿ, ತನ್ನ ಸೇವೆಗೆ ನೇಮಿಸಿಕೊಂಡದ್ದಕ್ಕಾಗಿ ನಾನು ಆತನಿಗೆ ಸ್ತೋತ್ರಮಾಡುತ್ತೇನೆ. ನಾನು ಅಜ್ಞಾನಿಯಾಗಿ ತಿಳಿಯದೆ ಅಪನಂಬಿಕೆಯಲ್ಲಿ ಆ ರೀತಿ ನಡೆದುಕೊಂಡದ್ದರಿಂದ ನನ್ನ ಮೇಲೆ ಆತನಿಗೆ ಕರುಣೆ ಉಂಟಾಯಿತು;

[14] ಆದರೆ ನಮ್ಮ ಕರ್ತನ ಕೃಪೆಯು ಅತ್ಯಧಿಕವಾಗಿದ್ದು ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯನ್ನೂ ಪ್ರೀತಿಯನ್ನೂ ನನ್ನಲ್ಲಿ ಉಕ್ಕಿಸಿತ್ತು.

[15] ಕ್ರಿಸ್ತಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ, ಯಾಕೆಂದರೆ ಆ ಎಲ್ಲಾ ಪಾಪಿಗಳಲ್ಲಿ ನಾನೇ ಪ್ರಮುಖನು.

[16] ಆದರೆ ಇನ್ನು ಮುಂದೆ ನಿತ್ಯಜೀವಕ್ಕಾಗಿ ತನ್ನ ಮೇಲೆ ನಂಬಿಕೆಯಿಡುವವರಿಗೆ, ತನ್ನ ದೀರ್ಘಶಾಂತಿಯ ದೃಷ್ಟಾಂತವಿರಬೇಕೆಂದು ಕ್ರಿಸ್ತ ಯೇಸುವು ಪಾಪಿಗಳಲ್ಲಿ ಪ್ರಮುಖನಾಗಿದ್ದ ನನ್ನನ್ನು ಕರುಣಿಸಿ, ನನ್ನಲ್ಲಿ ತನ್ನ ಪೂರ್ಣ ದೀರ್ಘಶಾಂತಿಯನ್ನು ತೋರ್ಪಡಿಸಿದನು.

[17] ಸರ್ವಯುಗಗಳ ಅರಸನೂ, ಅಮರನೂ, ಅದೃಶ್ಯನೂ ಆಗಿರುವ ಏಕ ದೇವರಿಗೆ ಘನವೂ ಮಹಿಮೆಯೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

[18] ಮಗನಾದ ತಿಮೊಥೆಯನೇ, ನಿನ್ನ ವಿಷಯದಲ್ಲಿ ಮೊದಲು ಉಂಟಾಗಿದ್ದ ಪ್ರವಾದನೆಗಳನ್ನು ನೆನಪಿಸಿಕೊಂಡು, ನೀನು ಅವುಗಳಿಂದ ಧೈರ್ಯಹೊಂದಿ ಒಳ್ಳೆಯ ಯುದ್ಧವನ್ನು ನಡೆಸಬೇಕೆಂದು ನಿನಗೆ ಆಜ್ಞಾಪಿಸುತ್ತಿದ್ದೇನೆ.

[19] ನಂಬಿಕೆಯನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಗಟ್ಟಿಯಾಗಿ ಹಿಡಿದುಕೊಂಡಿರು. ಕೆಲವರು ಒಳ್ಳೆಯ ಮನಸ್ಸಾಕ್ಷಿಯನ್ನು ತಳ್ಳಿಬಿಟ್ಟು ನಂಬಿಕೆಯ ವಿಷಯದಲ್ಲಿ ಹಡಗು ಒಡೆದು, ನಷ್ಟಪಟ್ಟವರಂತೆ ಇದ್ದಾರೆ.

[20] ಹುಮೆನಾಯನೂ ಅಲೆಕ್ಸಾಂದರನೂ ಇಂಥವರೇ. ಇವರು ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ಸೈತಾನನಿಗೆ ಒಪ್ಪಿಸಿಕೊಟ್ಟೆನು.

1 ತಿಮೊಥೆಯನಿಗೆ — Chapters