[1] ಸಭಾಧ್ಯಕ್ಷನ ಉದ್ಯೋಗವನ್ನು ಪಡೆದುಕೊಳ್ಳಬೇಕೆಂದಿರುವವನು ಒಳ್ಳೆಯ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ.
[2] ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ, ಏಕಪತ್ನಿಯುಳ್ಳವನೂ, ಶಾಂತನೂ, ಜಿತೇಂದ್ರಿಯನೂ, ಮಾನಸ್ಥನೂ, ಅತಿಥಿಸತ್ಕಾರಮಾಡುವವನೂ, ಬೋಧಿಸಲು ಶಕ್ತನಾಗಿರಬೇಕು.
[3] ಅವನು ಕುಡಕನು, ಜಗಳವಾಡುವವನೂ ಆಗಿರದೆ, ಸಾತ್ವಿಕನೂ, ಹೊಡೆದಾಡದವನೂ ದ್ರವ್ಯಾಶೆಯಿಲ್ಲದವನೂ ಆಗಿರಬೇಕು.
[4] ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು, ಸ್ವಂತ ಮನೆಯವರನ್ನು ಚೆನ್ನಾಗಿ ನಡೆಸುವವನಾಗಿರಬೇಕು.
[5] ಸ್ವಂತ ಮನೆಯವರನ್ನು ನಡೆಸುವುದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು?
[6] ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು, ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು.
[7] ಇದಲ್ಲದೆ ಅವನು ಹೊರಗಣವರಿಂದ ಒಳ್ಳೆಯವನೆನ್ನಿಸಿಕೊಂಡಿರಬೇಕು, ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು ಸೈತಾನನ ತಂತ್ರಗಳೊಳಗೆ ಸಿಕ್ಕಿಬಿದ್ದಾನು.
[8] ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ಮಾತಿನವರೂ, ಮದ್ಯಾಸಕ್ತರೂ, ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ,
[9] ನಂಬಿಕೆಯಿಂದ ಪ್ರಕಟವಾಗಿರುವ ಸತ್ಯಾರ್ಥವನ್ನು ಶುದ್ಧ ಮನಸ್ಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು.
[10] ಇದಲ್ಲದೆ ಅವರು ಮೊದಲು ಪರೀಕ್ಷಿಸಲ್ಪಡಬೇಕು, ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನೆರವೇರಿಸಲಿ.
[11] ಹಾಗೆಯೇ ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು, ಚಾಡಿಹೇಳುವವರಾಗಿರದೆ, ಸ್ವಸ್ಥಬುದ್ಧಿಯುಳ್ಳವರೂ, ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು.
[12] ಸಭಾಸೇವಕರು ಏಕಪತ್ನಿಯುಳ್ಳವರೂ, ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ನಡಿಸುವವರೂ ಆಗಿರಬೇಕು.
[13] ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿರುವವರು ತಮಗೆ ಒಳ್ಳೆಯ ಪದವಿಯನ್ನೂ, ಕ್ರಿಸ್ತಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹುಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ.
[14] ಬೇಗನೆ ನಿನ್ನ ಬಳಿಗೆ ಬರುವೆನೆಂಬ ನಿರೀಕ್ಷೆಯಿಂದಲೇ ನಿನಗೆ ಈ ವಿಷಯಗಳನ್ನು ಬರೆದಿದ್ದೇನೆ.
[15] ಆದರೆ ಒಂದು ವೇಳೆ ನಾನು ತಡಮಾಡಿದರೂ, ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ತಿಳಿದಿರಬೇಕೆಂದು ಈ ಸಂಗತಿಗಳನ್ನು ಬರೆದಿದ್ದೇನೆ. ಯಾಕೆಂದರೆ ಸಭೆಯು ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ.
[16] ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥದ ರಹಸ್ಯವು ಗಂಭೀರವಾದದ್ದೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ, ಅದೇನಂದರೆ, ಕ್ರಿಸ್ತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು, ಆತ್ಮಸಂಬಂಧವಾಗಿ ಕ್ರಿಸ್ತನೇ ನೀತಿವಂತನೆಂದು ಪರಿಗಣಿಸಲ್ಪಟ್ಟನು, ದೇವದೂತರಿಗೆ ಕಾಣಿಸಿಕೊಂಡನು, ಅನ್ಯಜನರ ಮಧ್ಯದಲ್ಲಿ ಸಾರಲ್ಪಟ್ಟನು, ಲೋಕದಲ್ಲಿ ನಂಬಲ್ಪಟ್ಟನು, ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.