Skip to content
Opens in a new window
Listen to this chapter • 4:29

[1] ದಾಸತ್ವ ನೊಗದ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೂ ಯೋಗ್ಯರೆಂದೆಣಿಸಲಿ, ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದನೆ ಉಂಟಾಗುತ್ತದೆ.

[2] ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ, ಅವರು ಆ ಯಜಮಾನರನ್ನು ಸಹೋದರರೆಂದು ಉದಾಸೀನಮಾಡದೆ, ತಮ್ಮ ಸೇವೆಯ ಫಲವನ್ನು ಹೊಂದುವವರು, ನಂಬಿಗಸ್ತರು, ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಇನ್ನು ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು. ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು.

[3] ಯಾವನಾದರೂ ಭಿನ್ನವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ, ಭಕ್ತಾನುಸಾರವಾದ ಉಪದೇಶಗಳಿಗೂ ಸಮ್ಮತಿಸದೆ ಹೋದರೆ,

[4] ಅವನು ಅಹಂಭಾವಿಯೂ ಅಜ್ಞಾನಿಯೂ ಆಗಿದ್ದು, ನಿಂದನೆ ವಾಗ್ವಾದಗಳನ್ನುಂಟು ಮಾಡುವ ಭ್ರಾಂತಿಯಲ್ಲಿದ್ದಾನೆ. ಇವುಗಳಿಂದ ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯ ಮುಂತಾದವುಗಳು ಉಂಟಾಗುತ್ತವೆ.

[5] ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ.

[6] ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ.

[7] ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು.

[8] ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತವೆ.

[9] ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಟ್ರೇರಣೆಯೆಂಬ ಬಲೆಯಲ್ಲಿ ಸಿಕ್ಕಿಕೊಂಡು, ಬುದ್ಧಿಗೆ ವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಸೆಗಳಲ್ಲಿ ಬೀಳುತ್ತಾರೆ. ಇಂಥ ಆಸೆಗಳು ಮನುಷ್ಯರನ್ನು ಸಂಹಾರ ವಿನಾಶಗಳಲ್ಲಿ ಸಿಕ್ಕಿಸುತ್ತವೆ.

[10] ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು, ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು, ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.

[11] ಎಲೈ, ದೇವರ ಮನುಷ್ಯನೇ, ನೀನಾದರೋ ಇವುಗಳಿಗೆ ದೂರವಾಗಿರು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು.

[12] ಕ್ರಿಸ್ತ ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ. ಅದಕ್ಕಾಗಿ ನೀನು ದೇವರಿಂದ ಕರೆಯಲ್ಪಟ್ಟಿದಿ ಮತ್ತು ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ.

[13] ಸರ್ವ ಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ, ಪೊಂತ್ಯ ಪಿಲಾತನ ಕಾಲದಲ್ಲಿ ಶ್ರೇಷ್ಠ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದೇನಂದರೆ,

[14] ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ತನಕ ನೀನು ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ಕಾಪಾಡಿಕೊಂಡಿರಬೇಕು.

[15] ಭಾಗ್ಯವಂತನಾದ ಏಕಾಧಿಪತಿಯು ತಾನು ನಿಗದಿಪಡಿಸಿರುವ ಸೂಕ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು, ರಾಜಾಧಿರಾಜನೂ, ಕರ್ತಾಧಿಕರ್ತನೂ,

[16] ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್.

[17] ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ, ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕು.

[18] ವಾಸ್ತವವಾದ ಜೀವವನ್ನು ಹೊಂದುವುದಕ್ಕೋಸ್ಕರ ಅವರು ಒಳ್ಳೆಯದನ್ನು ಮಾಡುವವರೂ, ಸತ್ಕಾರ್ಯಗಳನ್ನು ಮಾಡುವುದರಲ್ಲಿ ಐಶ್ವರ್ಯವಂತರೂ, ಉದಾರಶೀಲರೂ, ಪರೋಪಕಾರಮಾಡುವವರೂ ಆಗಿದ್ದು, ಮುಂದಿನ ಕಾಲಕ್ಕೆ ಒಳ್ಳೆ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು.

[20] ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ, ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೂ, ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡಿಕೋ.

[21] ಕೆಲವರು ಆ ಸುಳ್ಳಾದ ಜ್ಞಾನವನ್ನು ಒಪ್ಪಿಕೊಂಡು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗಿ ಹೋದರು. ಕೃಪೆಯು ನಿಮ್ಮೊಂದಿಗಿರಲಿ.

1 ತಿಮೊಥೆಯನಿಗೆ — Chapters