[1] ಕಡೆಯದಾಗಿ, ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿಹರಡಿದ ಪ್ರಕಾರವೇ ಅದು ಬೇಗನೆ ಪಸರಿಸಿ ಮಹಿಮೆ ಹೊಂದಲಿ,
[2] ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ, ಕ್ರಿಸ್ತ ನಂಬಿಕೆಯು ಎಲ್ಲರಲ್ಲಿ ಇರುವುದಿಲ್ಲವಲ್ಲಾ.
[3] ಆದರೆ ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು ಕೆಡುಕನ ಕೈಗೆ ಸಿಕ್ಕದಂತೆ ಕಾಪಾಡುವನು.
[4] ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.
[5] ನೀವು ದೇವರ ಪ್ರೀತಿಯಲ್ಲಿಯೂ ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡೆಸಲಿ.
[6] ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ ಸೋಮಾರಿಯಾಗಿ ಜೀವಿಸುವ ಪ್ರತಿಯೊಬ್ಬ ಸಹೋದರನಿಂದ ನೀವು ದೂರವಾಗಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ.
[7] ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂಬುದನ್ನು ನೀವೇ ಬಲ್ಲಿರಿ, ನಾವು ನಿಮ್ಮಲ್ಲಿ ಸೋಮಾರಿಯಾಗಿ ನಡೆಯಲಿಲ್ಲ.
[8] ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು.
[9] ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು.
[10] ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, “ಕೆಲಸ ಮಾಡಲೊಲ್ಲದವನು ಊಟಮಾಡಬಾರದು” ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ.
[11] ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ.
[12] ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ.
[13] ಸಹೋದರರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.
[14] ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ.
[15] ಆದರೂ ಅವನನ್ನು ವೈರಿಯೆಂದು ಭಾವಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.
[16] ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.
[17] ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ.
[18] ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ.