Skip to content
Opens in a new window
Listen to this chapter • 4:21

[1] ವೃದ್ಧರನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ,

[2] ವೃದ್ಧಸ್ತ್ರೀಯರನ್ನು ತಾಯಿಯಂತೆಯೂ, ಯೌವನಸ್ತ್ರೀಯರನ್ನು ಪೂರ್ಣ ಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ತಕ್ಕ ಹಾಗೆ ಬುದ್ಧಿಹೇಳು.

[3] ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿತೋರಿಸುವುದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವುದಕ್ಕೂ ಕಲಿತುಕೊಳ್ಳಲಿ. ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.

[5] ದಿಕ್ಕಿಲ್ಲದೆ ಒಬ್ಬೊಂಟಿಗಳಾಗಿರುವ ವಿಧವೆಯು, ದೇವರ ಮೇಲೆ ನಿರೀಕ್ಷೆಯನ್ನಿಟ್ಟು, ಹಗಲಿರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು.

[6] ಆದರೆ ಸುಖಭೋಗದಲ್ಲಿರುವ ವಿಧವೆಯು ಬದುಕಿದ್ದರೂ ಸತ್ತಂತೆಯೇ.

[7] ವಿಧವೆಯರು ನಿಂದೆಗೆ ಗುರಿಯಾಗದಂತೆ ಈ ವಿಷಯಗಳನ್ನು ಆಜ್ಞಾಪಿಸು.

[8] ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕೀಳಾದವನೂ ಆಗಿದ್ದಾನೆ.

[9] ವಯಸ್ಸಿನಲ್ಲಿ ಅರುವತ್ತು ವರ್ಷ ಮೇಲ್ಪಟ್ಟ, ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು. ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳಾಗಿ,

[10] ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿದ್ದಲ್ಲಿ, ಅವರು ಮಕ್ಕಳನ್ನು ಸಾಕಿಕೊಂಡು, ಅತಿಥಿಸತ್ಕಾರವನ್ನು ಮಾಡುತ್ತಾ, ದೇವಜನರಿಗೆ ಉಪಚಾರಮಾಡಿದವಳಾಗಲಿ, ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡುತ್ತಾ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಿರಲಿ.

[11] ಯೌವನ ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ, ಅವರು ದೈಹಿಕ ಆಸೆಗಳಿಂದ ಸೋಲಿಸಲ್ಪಟ್ಟು, ಕ್ರಿಸ್ತನಿಗೆ ವಿಮುಖರಾಗಿ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು.

[12] ಅಂಥವರು ತಾವು ಮೊದಲು ಮಾಡಿದ ಪ್ರತಿಜ್ಞೆಯನ್ನು ಉಲ್ಲಂಘಿಸಿ ತೀರ್ಪಿಗೆ ಗುರಿಯಾಗಿರುವರು.

[13] ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ. ಮೈಗಳ್ಳರಾಗುವುದಲ್ಲದೆ, ಹರಟೆಮಾತನಾಡುವವರೂ, ಇತರರ ವಿಷಯಗಳಲ್ಲಿ ತಲೆ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ.

[14] ಆದ್ದರಿಂದ ಯೌವನ ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯನ್ನು ನಿರ್ವಹಿಸುವವರಾಗಿರುವುದು ನನಗೆ ಒಳ್ಳೆಯದಾಗಿ ತೋಚುತ್ತದೆ. ಹಾಗೆ ಮಾಡುವುದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು.

[15] ಇಷ್ಟರೊಳಗೆ ಕೆಲವರು ಅಡ್ಡದಾರಿ ಹಿಡಿದು ಸೈತಾನನನ್ನು ಹಿಂಬಾಲಿಸಿದ್ದಾರೆ.

[16] ನಂಬುವವಳಾದ ಸ್ತ್ರೀಯ ಬಂಧುಭಾಂಧವರಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವುದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು.

[17] ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ದೇವರ ವಾಕ್ಯವನ್ನು ಸಾರುವುದರಲ್ಲಿಯೂ ಉಪದೇಶಿಸುವುದರಲ್ಲಿಯೂ ಕಷ್ಟಪಡುವವರನ್ನು ಎರಡುಪಟ್ಟು ಗೌರವಕ್ಕೆ ಯೋಗ್ಯರೆಂದು ಎಣಿಸಬೇಕು.

[18] “ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದು,” ಮತ್ತು “ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆ” ಎಂದು ಶಾಸ್ತ್ರದಲ್ಲಿ ಹೇಳಿದೆಯಲ್ಲಾ.

[19] ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ಒಪ್ಪಿಕೊಳ್ಳಬೇಡ.

[20] ಪಾಪದಲ್ಲಿ ನಡೆಯುವವರನ್ನು ಎಲ್ಲರ ಮುಂದೆಯೇ ಗದರಿಸು. ಇವರಿಂದ ಉಳಿದವರಿಗೂ ಭಯವುಂಟಾಗುವುದು.

[21] ನೀನು ವಿಚಾರಿಸುವುದಕ್ಕೆ ಮೊದಲೇ ತಪ್ಪುಹೊರಿಸದೆಯೂ, ಪಕ್ಷಪಾತದಿಂದ ಏನೂ ಮಾಡದೆಯೂ, ನಾನು ಹೇಳಿರುವ ಮಾತುಗಳ ಪ್ರಕಾರವೇ ನಡೆಯಬೇಕೆಂದು ದೇವರ ಮುಂದೆಯೂ, ಕ್ರಿಸ್ತ ಯೇಸುವಿನ ಮುಂದೆಯೂ, ಆರಿಸಲ್ಪಟ್ಟಿರುವ ದೇವದೂತರ ಮುಂದೆಯೂ ಖಂಡಿತವಾಗಿ ಹೇಳುತ್ತೇನೆ.

[22] ಅವಸರದಿಂದ ಯಾರ ತಲೆಯ ಮೇಲೆಯಾದರೂ ಹಸ್ತವನ್ನಿಟ್ಟು ಸಭೆಯ ನಾಯಕತ್ವಕ್ಕೆ ನೇಮಿಸಬೇಡ. ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರನಾಗದೆ, ನೀನು ಶುದ್ಧನಾಗಿರುವ ಹಾಗೆ ನೋಡಿಕೋ.

[23] ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ, ನಿನ್ನ ಅಜೀರ್ಣದ ಮತ್ತು ನಿನಗೆ ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ ಪರಿಹಾರಕ್ಕಾಗಿ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೊ.

[24] ಕೆಲವರ ಪಾಪಕೃತ್ಯಗಳು ತೀರ್ಪಿಗೆ ಮುಂಚೆಯೇ ಬಯಲಾಗುತ್ತವೆ, ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ.

[25] ಹಾಗೆಯೇ ಕೆಲವು ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ, ಬೇರೆ ಕೆಲವು ಸತ್ಕ್ರಿಯೆಗಳು ಬೆಳಕಿಗೆ ಬಾರದ್ದಿದ್ದರೂ ಮರೆಯಾಗಿರಲಾರವು.

1 ತಿಮೊಥೆಯನಿಗೆ — Chapters