[1] ಎಲ್ಲಾದಕ್ಕಿಂತ ಮೊದಲು ಎಲ್ಲಾ ಜನರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ, ಪ್ರಾರ್ಥನೆಗಳನ್ನೂ, ಮನವಿಗಳನ್ನೂ, ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.
[2] ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ, ಗೌರವದಿಂದಲೂ ಜೀವಿಸುವಂತೆ, ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು.
[3] ಹಾಗೆ ಮಾಡುವುದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಒಳ್ಳೆಯದು, ಮೆಚ್ಚಿಕೆಯಾಗಿಯೂ ಇದೆ.
[4] ಎಲ್ಲಾ ಜನರೂ ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬುದೇ ಆತನ ಚಿತ್ತವಾಗಿದೆ.
[5] ಏಕೆಂದರೆ ದೇವರು ಒಬ್ಬನೇ, ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ, ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ.
[6] ಆತನು ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಕೊಟ್ಟನು. ಇದೇ ತಕ್ಕ ಸಮಯಗಳಲ್ಲಿ ಹೇಳಬೇಕಾದ ಸಾಕ್ಷಿಯಾಗಿದೆ.
[7] ಆ ಸಾಕ್ಷಿಯನ್ನು ಪ್ರಸಿದ್ಧಿಪಡಿಸುವುದಕ್ಕಾಗಿಯೇ ನಾನು ಸಂದೇಶಕನಾಗಿಯೂ, ಅಪೊಸ್ತಲನಾಗಿಯೂ, ನಂಬಿಕೆಯಿಂದಲೂ ಸತ್ಯದಿಂದಲೂ ಅನ್ಯಜನರಿಗೆ ಬೋಧಿಸುವವನಾಗಿಯೂ ನೇಮಿಸಲ್ಪಟ್ಟಿದ್ದೇನೆ. ನಾನು ಸುಳ್ಳಾಡದೇ ಸತ್ಯವನ್ನೇ ಹೇಳುತ್ತೇನೆ.
[8] ಹೀಗಿರಲಾಗಿ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ, ಭಕ್ತಿಪೂರ್ವಕವಾಗಿ ಪವಿತ್ರ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ.
[9] ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ, ಸಭ್ಯತೆಯುಳ್ಳವರಾಗಿಯೂ ಇದ್ದು, ಗೌರವಕ್ಕೆ ತಕ್ಕ ಉಡುಪನ್ನೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆಯನ್ನು ಹೆಣೆಯುವುದು, ಚಿನ್ನ, ಮುತ್ತು, ಬೆಲೆಯುಳ್ಳ ವಸ್ತ್ರ
[10] ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.
[11] ಸ್ತ್ರೀಯರು ಮೌನವಾಗಿದ್ದು ಪೂರ್ಣ ಅಧೀನತೆಯಿಂದ ಉಪದೇಶವನ್ನು ಕಲಿಯಬೇಕು.
[12] ಉಪದೇಶಮಾಡುವುದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡಿಸುವುದಕ್ಕಾಗಲಿ ಸ್ತ್ರೀಯರಿಗೆ ನಾನು ಅಪ್ಪಣೆ ಕೊಡುವುದಿಲ್ಲ. ಅವರು ಮೌನವಾಗಿರಬೇಕು.
[13] ಮೊದಲು ಸೃಷ್ಟಿಸಲ್ಪಟವನು ಆದಾಮನಲ್ಲವೇ, ಆಮೇಲೆ ಹವ್ವಳು.
[14] ಇದಲ್ಲದೆ ಆದಾಮನು ವಂಚಿಸಲ್ಪಡಲಿಲ್ಲ, ಸ್ತ್ರೀಯು ವಂಚಿಸಲ್ಪಟ್ಟು ಅಪರಾಧಿಯಾದಳು.
[15] ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯಿಂದ ನಂಬಿಕೆಯಲ್ಲಿಯೂ, ಪ್ರೀತಿಯಲ್ಲಿಯೂ, ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಮಕ್ಕಳನ್ನು ಹೆರುವುದರಲ್ಲಿ ರಕ್ಷಣೆಹೊಂದುವರು.