[1] ಆದರೂ ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ, ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಿದ್ದಾನೆ.
[2] ಕಪಟದಿಂದ ಸುಳ್ಳಾಡುವವರು, ಸ್ವಂತ ಮನಸ್ಸಾಕ್ಷಿಯ ಮೇಲೆ ಬರೆಹಾಕಲ್ಪಟ್ಟವರಾಗಿದ್ದು,
[3] ಅವರು ವಿಶ್ವಾಸಿಗಳಿಗೆ ಮದುವೆಯಾಗಬಾರದೆಂತಲೂ, ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ, ಅವರು ಕೃತಜ್ಞತಾಸ್ತುತಿಮಾಡಿ, ತಿನ್ನುವುದಕ್ಕೋಸ್ಕರ ದೇವರು ಉಂಟುಮಾಡಿದ ಆಹಾರವನ್ನು ತಿನ್ನಬಾರದೆಂತಲೂ ಹೇಳುವರು.
[4] ದೇವರು ಉಂಟುಮಾಡಿದ್ದೆಲ್ಲವೂ ಒಳ್ಳೆಯದೇ, ನಾವು ಕೃತಜ್ಞತಾಸ್ತುತಿಮಾಡಿ ತೆಗೆದುಕೊಳ್ಳುವ ಯಾವ ಆಹಾರವನ್ನು ತಿರಸ್ಕರಿಸಬೇಕಾಗಿಲ್ಲ.
[5] ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಆ ಆಹಾರವು ಪವಿತ್ರವಾಗುತ್ತದಲ್ಲಾ.
[6] ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ, ನೀನು ಅನುಸರಿಸುತ್ತಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದಿದವನಾಗಿ, ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವಿ.
[7] ಅಜ್ಜಿ ಕಥೆಗಳನ್ನೂ ಪ್ರಾಪಂಚಿಕವಾದ ಆ ಕಥೆಗಳನ್ನೂ ತಳ್ಳಿಬಿಟ್ಟು, ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ.
[8] ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು. ಅದಕ್ಕೆ ಇಹಪರಗಳಲ್ಲಿನ ಜೀವನಕ್ಕೆ ವಾಗ್ದಾನ ಉಂಟು.
[9] ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಇದೆ.
[10] ಇದಕ್ಕಾಗಿ ನಾವು ಕಷ್ಟಪಡುತ್ತಿದ್ದೇವೆ, ಪ್ರಯಾಸಪಡುತ್ತಿದ್ದೇವೆ, ಯಾಕೆಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡವರಾಗಿದ್ದೇವೆ.
[11] ಈ ಸಂಗತಿಗಳನ್ನು ನೀನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು.
[12] ನಿನ್ನ ಯೌವನವನ್ನು ಅಸಡ್ಡೆಮಾಡುವುದಕ್ಕೆ ಯಾರಿಗೂ ಆಸ್ಪದಮಾಡಿಕೊಡದೆ, ನಂಬುವವರಿಗೆ ನಡೆ, ನುಡಿ, ಪ್ರೀತಿ, ನಂಬಿಕೆ, ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.
[13] ನಾನು ಬರುವ ತನಕ ವೇದವಾಕ್ಯವನ್ನು ಓದಿ ಹೇಳುವುದರಲ್ಲಿಯೂ, ಪ್ರಬೋಧಿಸುವುದರಲ್ಲಿಯೂ, ಉಪದೇಶಿಸುವುದರಲ್ಲಿಯೂ ಆಸಕ್ತನಾಗಿರು.
[14] ನಿನ್ನಲ್ಲಿರುವ ಕೃಪಾವರವನ್ನು ಅಲಕ್ಷ್ಯಮಾಡಬೇಡ, ಆ ವರವು ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ, ಅದು ನಿನಗೆ ಕೊಡಲ್ಪಟ್ಟಿತಲ್ಲಾ.
[15] ಈ ಕಾರ್ಯಗಳನ್ನು ಸಾಧಿಸುತ್ತಾ, ಅವುಗಳಲ್ಲಿ ಮಗ್ನನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವುದು.
[16] ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು, ಆಗ ನೀನು ನಿನ್ನನ್ನೂ ಮತ್ತು ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.