[1] ಬನ್ನಿರಿ, ನಾವು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳೋಣ. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ, ಅವರೇ ನಮ್ಮನ್ನು ಸ್ವಸ್ಥ ಮಾಡುವರು. ಅವರು ಹೊಡೆದಿದ್ದಾನೆ, ಅವರೇ ನಮ್ಮನ್ನು ಕಟ್ಟುವರು.
[2] ಅವರು ಎರಡು ದಿವಸಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು. ಮೂರನೆಯ ದಿವಸದಲ್ಲಿ ಆತನೇ ನಮ್ಮನ್ನು ಪುನಃಸ್ಥಾಪಿಸುವರು. ನಾವು ಅವರ ದೃಷ್ಟಿಯಲ್ಲಿ ಜೀವಿಸುವೆವು.
[3] ನಾವು ಯೆಹೋವ ದೇವರನ್ನು ತಿಳಿದುಕೊಳ್ಳಲು, ಅವರನ್ನು ಹಿಂಬಾಲಿಸಿದರೆ ತಿಳಿದುಕೊಳ್ಳುವೆವು. ಅವರ ಆಗಮನವು ಅರುಣೋದಯದಂತೆ ನಿಶ್ಚಯ. ಅವರು ಮಳೆಯಂತೆಯೂ ಮುಂಗಾರಿನಂತೆಯೂ, ಭೂಮಿಯನ್ನು ತಂಪು ಮಾಡುವ ಹಿಂಗಾರಿನಂತೆಯೂ ಬಳಿಗೆ ಬರುವರು.
[4] ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ? ಯೆಹೂದವೇ, ನಿನಗೆ ನಾನು ಏನು ಮಾಡಲಿ? ನಿಮ್ಮ ಪ್ರೀತಿಯು ಹೊತ್ತಾರೆಯ ಮೇಘದ ಹಾಗೆಯೂ, ಮುಂಜಾನೆಯ ಮಂಜಿನ ಹಾಗೆಯೂ ಹೋಗಿಬಿಡುತ್ತದೆ.
[5] ಆದ್ದರಿಂದ ನಾನು ನಿಮ್ಮ ಜನರನ್ನು ಪ್ರವಾದಿಗಳ ಮುಖಾಂತರ ಕಡಿದುಬಿಟ್ಟು, ನನ್ನ ಬಾಯಿಮಾತುಗಳಿಂದ ಅವರನ್ನು ಸಂಹರಿಸಿದ್ದೇನೆ. ನನ್ನ ನ್ಯಾಯತೀರ್ಪುಗಳು ಸೂರ್ಯನ ಹಾಗೆ ಹೊರಟವು.
[6] ಏಕೆಂದರೆ ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ. ದಹನಬಲಿಗಳಿಗಿಂತ ದೇವರ ಅಂಗೀಕಾರವನ್ನೇ ಅಪೇಕ್ಷಿಸುತ್ತೇನೆ.
[7] ಅವರು ಆದಾಮನಂತೆ ಒಡಂಬಡಿಕೆಯನ್ನು ಮೀರಿದ್ದಾರೆ. ಅಲ್ಲಿ ಅವರು ನನಗೆ ವಿರುದ್ಧವಾಗಿ ಅಪನಂಬಿಗಸ್ತಿಕೆಯಿಂದ ನಡೆದುಕೊಂಡಿದ್ದಾರೆ.
[8] ಗಿಲ್ಯಾದ್ ಕೆಟ್ಟ ಕೆಲಸ ಮಾಡುವವರ ಮತ್ತು ರಕ್ತದಿಂದ ಅಪವಿತ್ರಮಾಡಿದ ಪಟ್ಟಣವಾಗಿದೆ.
[9] ದರೋಡೆಕೋರರು ಮನುಷ್ಯನಿಗೋಸ್ಕರ ಹೊಂಚುಹಾಕುವಂತೆ, ಯಾಜಕರ ಗುಂಪು ದಾರಿಹೋಕರಿಗಾಗಿ ಹೊಂಚುಹಾಕುತ್ತಾ ಶೆಕೆಮಿಗೆ ಹೋಗುವವರನ್ನು ದಾರಿಯಲ್ಲಿ ಕೊಲೆಮಾಡುತ್ತಾರೆ. ಅವರು ನೀಚತನವನ್ನು ಮಾಡುವವರಾಗಿದ್ದಾರೆ.
[10] ಇಸ್ರಾಯೇಲಿನ ಮನೆತನದವರಲ್ಲಿ ಅತಿ ಭಯಂಕರವಾದ ಸಂಗತಿಯನ್ನು ನೋಡಿದೆನು. ಅಲ್ಲಿ ಎಫ್ರಾಯೀಮಿನ ವ್ಯಭಿಚಾರವು ನಡೆಯುತ್ತದೆ, ಇಸ್ರಾಯೇಲು ಅಪವಿತ್ರವಾಗಿದೆ.
[11] “ಯೆಹೂದವೇ, ನಿನಗೂ ಸಹ, ತಕ್ಕ ಸುಗ್ಗಿಯು ನೇಮಕವಾಗಿದೆ. “ಸೆರೆಯಾದ ನನ್ನ ಜನರಿಗೆ, ಪುನಃಸ್ಥಾಪನೆಯಾಗುವುದು.