[1] ಇಸ್ರಾಯೇಲು ಹರಡುವ ದ್ರಾಕ್ಷಿಬಳ್ಳಿಯಾಗಿದೆ, ಅವನು ತನಗಾಗಿ ಫಲಫಲಿಸುತ್ತಾನೆ. ತನ್ನ ಬಹಳ ಫಲದ ಪ್ರಕಾರವಾಗಿ ಅವನು ಬಲಿಪೀಠಗಳನ್ನೂ ಹೆಚ್ಚಿಸಿದ್ದಾನೆ. ತನ್ನ ದೇಶದ ಅಭಿವೃದ್ಧಿಯ ಪ್ರಕಾರ ಅಂದವಾದ ವಿಗ್ರಹಗಳನ್ನು ಮಾಡಿದ್ದಾನೆ.
[2] ಅವರ ಹೃದಯವು ವಂಚಕವಾದದ್ದು. ಈಗ ಅವರು ಅಪರಾಧಗಳನ್ನು ಹೊರಬೇಕು. ಯೆಹೋವ ದೇವರು ಅವರ ಬಲಿಪೀಠಗಳನ್ನು ಕೆಡವಿ, ಅವರ ವಿಗ್ರಹಗಳನ್ನು ನಾಶಮಾಡುವರು.
[3] ಆಗ ಅವರು, “ನಮಗೆ ಅರಸನಿಲ್ಲ, ಏಕೆಂದರೆ ನಾವು ಯೆಹೋವ ದೇವರಲ್ಲಿ ಭಯಭಕ್ತಿ ಇಟ್ಟವರಲ್ಲ. ಅರಸನು ನಮಗಿದ್ದರೂ ಏನು ಮಾಡುವನು?” ಎಂದುಕೊಳ್ಳುತ್ತಾರೆ.
[4] ಅವರು ಮಾತುಗಳನ್ನಾಡಿ ಒಡಂಬಡಿಕೆಯನ್ನು ಮಾಡುವುದಕ್ಕೆ ಸುಳ್ಳು ಪ್ರಮಾಣವನ್ನು ಮಾಡುತ್ತಾರೆ. ಆದ್ದರಿಂದ ನ್ಯಾಯತೀರ್ಪು ವಿಷದ ಕಳೆಯ ಹಾಗೆ ಹೊಲದ ಸಾಲುಗಳಲ್ಲಿ ಮೊಳೆಯುತ್ತದೆ.
[5] ಬೇತಾವೆನಿನ ಬಸವ ವಿಗ್ರಹಕ್ಕೆ ಸಮಾರ್ಯದ ನಿವಾಸಿಗಳು ಭಯಪಡುವರು. ಅದರಲ್ಲಿ ಆನಂದಿಸಿದ ಜನರು ಅದಕ್ಕೋಸ್ಕರ ಗೋಳಾಡುವರು. ಅದರ ಯಾಜಕರು ನಡುಗುವರು. ಏಕೆಂದರೆ ಅದರ ವೈಭವವು ಅದರಿಂದ ಕುಂದಿಹೋಯಿತು.
[6] ಅದು ಸಹ, ಮಹಾರಾಜನಿಗೆ ಕಾಣಿಕೆಯಾಗಿ ಅಸ್ಸೀರಿಯಕ್ಕೆ ಒಯ್ಯಲಾಗುವುದು. ಎಫ್ರಾಯೀಮು ನಾಚಿಕೆಯನ್ನು ಹೊಂದುವುದು. ಇಸ್ರಾಯೇಲ್ ಸಹ ತನ್ನ ಸಲಹೆಯ ಬಗ್ಗೆ ನಾಚಿಕೆಪಡುತ್ತದೆ.
[7] ಸಮಾರ್ಯ ಹಾಗು ಅದರ ಅರಸನು ನೀರಿನ ಮೇಲಿನ ಕಡ್ಡಿಯ ಹಾಗೆ ಅಳಿದು ಹೋಗುವನು.
[8] ಇಸ್ರಾಯೇಲಿನ ಪಾಪಕ್ಕೆ ಆಸ್ಪದವಾದ ಆವೆನಿನ ಉನ್ನತ ಪೂಜಾಸ್ಥಳಗಳು ಹಾಳಾಗಿ ಹೋಗುವುವು. ಮುಳ್ಳುಗಿಡಗಳೂ, ಕಳೆಗಳೂ ಬಲಿಪೀಠಗಳ ಮೇಲೆ ಬೆಳೆಯುವುವು. ಜನರು ಬೆಟ್ಟಗಳಿಗೆ, “ನಮ್ಮ ಮೇಲೆ ಬೀಳಿರಿ! ಗುಡ್ಡಗಳಿಗೆ, ನಮ್ಮನ್ನು ಮುಚ್ಚಿಕೊಳ್ಳಿರಿ!” ಎನ್ನುವರು.
[9] ಇಸ್ರಾಯೇಲೇ ನೀನು ಗಿಬೆಯದಲ್ಲಿದ್ದ ಕಾಲದಿಂದ ನನ್ನ ವಿರುದ್ಧ ಪಾಪ ಮಾಡುತ್ತಲೇ ಬಂದಿರುವೆ. ನಿನ್ನ ಜನರು ಪಾಪದಲ್ಲಿಯೇ ಮುಂದುವರಿಯುತ್ತಿದ್ದಾರೆ. ಗಿಬೆಯದಲ್ಲಿ ಕೆಟ್ಟದ್ದನ್ನು ಮಾಡುವ ಜನರು ಯುದ್ಧಕ್ಕೆ ತುತ್ತಾಗಲಿದ್ದಾರೆ.
[10] ನಾನು ಅವರನ್ನು ಶಿಕ್ಷಿಸಲು ನನಗೆ ಮನಸ್ಸುಂಟು. ಅವರ ಇಮ್ಮಡಿ ಅಪರಾಧಕ್ಕೆ ತಕ್ಕ ಶಾಸ್ತಿಯಾಗುವುದು, ಆಗ ಇತರ ರಾಷ್ಟ್ರಗಳು ಅವರಿಗೆ ವಿರುದ್ಧವಾಗಿ ಒಂದುಗೂಡುವುವು.
[11] ಎಫ್ರಾಯೀಮು ಒಂದು ತರಬೇತಿ ಪಡೆದ ಕಡಸಾಗಿದೆ. ಅದು ತುಳಿಯುವುದನ್ನು ಇಷ್ಟಪಡುತ್ತದೆ. ಆದರೆ ನಾನು ಅದರ ಸುಂದರವಾದ ಕುತ್ತಿಗೆಯ ಮೇಲೆ ನೊಗವನ್ನು ಹೊರುತ್ತೇನೆ. ಎಫ್ರಾಯೀಮು ಸವಾರಿ ಮಾಡುವ ಹಾಗೆ ನಾನು ಮಾಡುವೆನು. ಯೆಹೂದ ಉಳುವನು. ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು.
[12] ನಿಮಗಾಗಿ ನೀತಿಯ ಬೀಜವನ್ನು ಬಿತ್ತಿರಿ. ಪ್ರೀತಿಯ ಫಲವನ್ನು ಕೊಯ್ಯಿರಿ. ಹಾಳಾಗಿ ಬೀಳುಬಿದ್ದ ನಿಮ್ಮ ಭೂಮಿಯನ್ನು ಅಗೆಯಿರಿ. ಏಕೆಂದರೆ ಆತನು ಬಂದು ನಿಮ್ಮ ಮೇಲೆ ನೀತಿಯನ್ನು ಸುರಿಸುವವರೆಗೂ ಯೆಹೋವ ದೇವರನ್ನು ಹುಡುಕುವ ಸಮಯ ಇದೇ.
[13] ಆದರೆ ನೀವು ದುಷ್ಟತ್ವವನ್ನು ಬಿತ್ತಿ, ಅನ್ಯಾಯವನ್ನು ಕೊಯ್ದಿರಿ, ವಂಚನೆಯ ಫಲವನ್ನು ತಿಂದಿದ್ದೀರಿ. ಏಕೆಂದರೆ ನೀವು ನಿಮ್ಮ ಸ್ವಂತ ಬಲದಲ್ಲಿ ನಿಮ್ಮ ಶೂರರಲ್ಲಿಯೂ ಭರವಸೆಯಿಟ್ಟಿದ್ದೀರಿ.
[14] ಆದ್ದರಿಂದ ನಿನ್ನ ಜನರಲ್ಲಿ ಗಲಭೆ ಉಂಟಾಗುವುದು. ಶಲ್ಮಾನ ರಾಜನು ಬೇತ್ ಅರ್ಬೇಲನ್ನು ಯುದ್ಧದ ದಿನದಲ್ಲಿ ನಾಶಮಾಡಿದ ಪ್ರಕಾರ, ನಿನ್ನ ಕೋಟೆಗಳೆಲ್ಲಾ ನಾಶವಾಗುವವು. ತಾಯಿ, ತನ್ನ ಮಕ್ಕಳ ಸಹಿತ ಬಂಡೆಗೆ ಅಪ್ಪಳಿಸಿದ
[15] ಹಾಗೆಯೇ, ಬಹಳ ದುಷ್ಟತ್ವದ ನಿಮಿತ್ತ ಬೇತೇಲಿಗೆ ಸಂಭವಿಸುವುದು. ಬೆಳಗಿನ ಜಾವದಲ್ಲಿ ಇಸ್ರಾಯೇಲಿನ ಅರಸನು ಸಂಪೂರ್ಣವಾಗಿ ನಾಶವಾಗುವನು.