[1] “ಯಾಜಕರೇ, ಇದನ್ನು ನೀವು ಕೇಳಿರಿ; ಇಸ್ರಾಯೇಲಿನ ಮನೆತನದವರೇ ಕೇಳಿಸಿಕೊಳ್ಳಿರಿ; ಅರಸನ ಮನೆಯವರೇ ಕಿವಿಗೊಡಿರಿ. ನೀವು ಮಿಚ್ಪದಲ್ಲಿ ಉರುಲಾಗಿಯೂ, ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದ ಕಾರಣ ನಿಮಗೆ ವಿರುದ್ಧವಾಗಿ ಈ ನ್ಯಾಯತೀರ್ಪು ಬಂದಿದೆ.
[2] ನನಗೆ ತಿರುಗಿಬಿದ್ದವರು ಅಗಾಧವಾದ ಕೊಲೆಯನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ. ಆದರೂ ನಾನು ಅವರೆಲ್ಲರನ್ನು ಶಿಕ್ಷಿಸುವವನಾಗಿದ್ದೇನೆ.
[3] ನಾನು ಎಫ್ರಾಯೀಮನ್ನು ಬಲ್ಲೆನು, ಇಸ್ರಾಯೇಲು ನನಗೆ ಮರೆಯಾದದ್ದಲ್ಲ. ಏಕೆಂದರೆ ಎಫ್ರಾಯೀಮೇ, ನೀನು ಈಗಲೇ ವ್ಯಭಿಚಾರ ಮಾಡಲು ತಿರುಗಿಕೊಂಡಿದ್ದೀ. ಇಸ್ರಾಯೇಲು ಸಹ ಅಪವಿತ್ರವಾಯಿತು.
[4] “ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳದಂತೆ, ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರದ ಆತ್ಮವು ಅವರ ಹೃದಯದಲ್ಲಿದೆ. ಅವರು ಯೆಹೋವ ದೇವರನ್ನು ಸ್ವೀಕರಿಸಿಕೊಳ್ಳುವುದಿಲ್ಲ.
[5] ಇಸ್ರಾಯೇಲಿನ ಗರ್ವವು ಅವರ ಮುಖದ ಮುಂದೆ ಸಾಕ್ಷಿಕೊಡುತ್ತದೆ. ಇಸ್ರಾಯೇಲು ಮತ್ತು ಎಫ್ರಾಯೀಮು ತಮ್ಮ ಪಾಪದಲ್ಲಿ ಎಡವಿ ಬೀಳುವವು. ಯೆಹೂದವು ಸಹ ಅವರೊಂದಿಗೆ ಬೀಳುವುದು.
[6] ಅವರು ಯೆಹೋವ ದೇವರನ್ನು ಹುಡುಕುವುದಕ್ಕೆ ತಮ್ಮ ದನಕುರಿಗಳೊಂದಿಗೂ ಹೋಗುವರು. ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡಿದ್ದರಿಂದ, ಅವರು ಆತನನ್ನು ಕಾಣುವುದೇ ಇಲ್ಲ.
[7] ಅವರು ಯೆಹೋವ ದೇವರಿಗೆ ಅಪನಂಬಿಗಸ್ತರಾಗಿದ್ದಾರೆ. ಅವರು ವ್ಯಭಿಚಾರದ ಮಕ್ಕಳನ್ನು ಪಡೆದಿದ್ದಾರೆ. ಅವರು ತಮ್ಮ ಅಮಾವಾಸ್ಯೆ ಹಬ್ಬಗಳನ್ನು ಆಚರಿಸಿದಾಗ, ಅವರ ಹೊಲಗಳು ನುಂಗಿಬಿಡಲಾಗುವವು.
[8] “ಗಿಬೆಯದಲ್ಲಿ ತುತೂರಿಯನ್ನೂ ರಾಮದಲ್ಲಿ ಕೊಂಬನ್ನೂ ಊದಿರಿ. ಬೆನ್ಯಾಮೀನೇ, ನಿನ್ನ ಹಿಂದೆ ನೋಡು! ಬೇತಾವೆನಿನಲ್ಲಿ ಗಟ್ಟಿಯಾಗಿ ಕೂಗು.
[9] ಎಫ್ರಾಯೀಮು ಗದರಿಸುವ ದಿವಸದಲ್ಲೇ ಹಾಳಾಗುವುದು. ಇಸ್ರಾಯೇಲಿನ ಗೋತ್ರಗಳಲ್ಲಿ ನಾನು ನಿಶ್ಚಯವಾಗಿ ಆಗುವಂಥದ್ದನ್ನೇ ತಿಳಿಸಿದ್ದೇನೆ.
[10] ಯೆಹೂದದ ನಾಯಕರು ಮೇರೆಗಳನ್ನು ಸರಿಸುವವರ ಹಾಗೆ ಇದ್ದರು. ಅವರ ಮೇಲೆ, ನೀರಿನ ಪ್ರವಾಹದಂತೆ ನನ್ನ ಕೋಪವನ್ನು ಸುರಿಸುವೆನು.
[11] ಎಫ್ರಾಯೀಮು, ವಿಗ್ರಹಗಳನ್ನು ಅನುಸರಿಸಲು ಮನಸ್ಸು ಮಾಡಿದ ಕಾರಣ, ಅವನು ನ್ಯಾಯತೀರ್ಪಿಗೆ ಗುರಿಯಾಗಿ, ಹಿಂಸೆಗೆ ಒಳಗಾದನು.
[12] ನಾನು ಎಫ್ರಾಯೀಮಿಗೆ ನುಸಿಯ ಹಾಗೆಯೂ, ಯೆಹೂದದ ಮನೆತನದವರಿಗೆ ಕೊಳೆಯುವಿಕೆಯ ಹಾಗೆಯೂ ಇರುವೆನು.
[13] “ಎಫ್ರಾಯೀಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ, ಎಫ್ರಾಯೀಮ್ ಅಸ್ಸೀರಿಯಕ್ಕೆ ತಿರುಗಿ, ಸಹಾಯಕ್ಕಾಗಿ ಮಹಾ ಅರಸನ ಬಳಿಗೆ ಕಳುಹಿಸಿತು. ಆದರೆ ನಿಮ್ಮನ್ನು ಗುಣಪಡಿಸಲು ಅವನು ಶಕ್ತನಲ್ಲ. ನಿಮ್ಮ ಗಾಯವನ್ನು ಗುಣಪಡಿಸಲಾರನು.
[14] ಏಕೆಂದರೆ ನಾನು ಎಫ್ರಾಯೀಮಿಗೆ ಸಿಂಹದ ಹಾಗೆಯೂ, ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು. ನಾನೇ ಅವರನ್ನು ಸೀಳಿಬಿಟ್ಟು ಹೋಗುವೆನು. ನಾನು ಎತ್ತಿಕೊಂಡು ಹೋಗಲು, ಅವರನ್ನು ಯಾರೂ ಬಿಡಿಸಲಾರರು.
[15] ಅಪರಾಧಗಳನ್ನು ಅರಿಕೆಮಾಡಿ, ನನ್ನ ಮುಖವನ್ನು ಹುಡುಕುವವರೆಗೂ, ನಾನು ತಿರುಗಿಕೊಂಡು ನನ್ನ ಗುಹೆಗೆ ಹೋಗುವೆನು. ಅವರ ಕಷ್ಟದಲ್ಲಿ ಅವರು ನನ್ನನ್ನು ಬೇಗ ಹುಡುಕುವರು.”