Skip to content
Opens in a new window
Listen to this chapter • 2:49

[1] “ಇಸ್ರಾಯೇಲನು ಹುಡುಗನಾಗಿದ್ದಾಗ, ನಾನು ಅವನನ್ನು ಪ್ರೀತಿ ಮಾಡಿದೆನು ಮತ್ತು ಈಜಿಪ್ಟಿನಿಂದ ನನ್ನ ಮಗನನ್ನು ನಾನು ಕರೆದೆನು.

[2] ನಾನು ಇಸ್ರಾಯೇಲನ್ನು ಹೆಚ್ಚಾಗಿ ಕರೆದ ಹಾಗೆಯೇ, ನನ್ನಿಂದ ಅವರು ದೂರ ಹೊರಟು ಹೋದರು. ಅವರು ಬಾಳ್ ದೇವತೆಗಳಿಗೆ ಬಲಿ ಅರ್ಪಿಸಿದರು. ಕೆತ್ತಿದ ವಿಗ್ರಹಗಳಿಗೆ ಧೂಪವನ್ನು ಸುಟ್ಟರು.

[3] ನಾನು ಎಫ್ರಾಯೀಮಿನ ತೋಳುಗಳನ್ನು ಹಿಡಿದು ನಡೆಯುವುದನ್ನು ಕಲಿಸಿದೆನು. ಆದರೆ ನಾನು ಅವರನ್ನು ಸ್ವಸ್ಥ ಮಾಡಿದ್ದೇನೆಂದು ಅವರಿಗೆ ತಿಳಿಯಲಿಲ್ಲ.

[4] ನಾನು ಅವರನ್ನು ಮನುಷ್ಯನ ಹಗ್ಗಗಳಿಂದಲೂ, ಪ್ರೀತಿಯ ಬಂಧನಗಳಿಂದಲೂ ಎಳೆದೆನು. ಅವರಿಗೆ ನಾನು ಚಿಕ್ಕ ಮಗುವನ್ನು ಕೆನ್ನೆಯವರೆಗೆ ಎತ್ತುವವರಂತೆ ಇದ್ದೆ, ಮತ್ತು ನಾನು ಅವರಿಗೆ ಬಾಗಿ ತಿನ್ನಿಸುತ್ತಿದ್ದೆ.

[5] “ಅವರು ಮಾನಸಾಂತರಪಡಲು ನಿರಾಕರಿಸಿದ್ದರಿಂದ, ಪುನಃ ಈಜಿಪ್ಟಿಗೆ ಹಿಂದಿರುಗುವರು, ಅಸ್ಸೀರಿಯದ ಆಳ್ವಿಕೆಗೆ ಒಳಗಾಗುವರು.

[6] ಅವರ ಪಟ್ಟಣಗಳಲ್ಲಿ ಖಡ್ಗವು ಹೊಳೆಯುವುದು. ಅದು ಅವರ ಸುಳ್ಳು ಪ್ರವಾದಿಗಳನ್ನು ನುಂಗಿಹಾಕುತ್ತದೆ. ಮತ್ತು ಅವರ ಯೋಜನೆಗಳನ್ನು ಕೊನೆಗೊಳಿಸುತ್ತದೆ.

[7] ನನ್ನ ಜನರು ನನ್ನ ಕಡೆಯಿಂದ ಹಿಂಜಾರಬೇಕೆಂದು ತೀರ್ಮಾನಿಸಿದ್ದಾರೆ. ಅವರು ನನ್ನನ್ನು ಸರ್ವೋನ್ನತ ದೇವರು ಎಂದು ಕರೆದರೂ ನಾನು ಅವರನ್ನು ಯಾವುದೇ ರೀತಿಯಲ್ಲಿ ಉನ್ನತೀಕರಿಸುವುದಿಲ್ಲ.

[8] “ಎಫ್ರಾಯೀಮೇ, ನಿನ್ನನ್ನು ಹೇಗೆ ಬಿಟ್ಟುಬಿಡಲಿ? ಇಸ್ರಾಯೇಲೇ, ನಿನ್ನನ್ನು ಹೇಗೆ ಕೈಬಿಡಲಿ? ಅದ್ಮದ ಹಾಗೆ ನಿನ್ನನ್ನು ದುರ್ಗತಿಗೆ ಹೇಗೆ ಒಪ್ಪಿಸಲಿ? ಚೆಬೋಯಿಮನಂತೆ ನಿನ್ನನ್ನು ಹೇಗೆ ನಾಶಮಾಡಲಿ? ನನ್ನ ಹೃದಯವು ನನ್ನಲ್ಲಿ ಮಾರ್ಪಟ್ಟಿದೆ. ನನ್ನಲ್ಲಿ ಕರುಣೆ ಉಕ್ಕಿ ಬಂದಿದೆ.

[9] ನನ್ನ ಕೋಪದ ಉರಿಯನ್ನು ನಾನು ತೀರಿಸುವುದಿಲ್ಲ. ನಾನು ಎಫ್ರಾಯೀಮನ್ನು ತಿರುಗಿ ನಾಶಮಾಡುವುದಿಲ್ಲ. ಏಕೆಂದರೆ ನಾನು ಮನುಷ್ಯನಲ್ಲ, ದೇವರೇ. ನಿನ್ನ ಮಧ್ಯದಲ್ಲಿ ಪರಿಶುದ್ಧನಾಗಿದ್ದೇನೆ. ನಾನು ಅವರ ಪಟ್ಟಣಗಳ ವಿರುದ್ಧ ಬರುವುದಿಲ್ಲ.

[10] ಅವರು ಯೆಹೋವ ದೇವರ ಹಿಂದೆ ಹೋಗುವರು. ಅವರು ಸಿಂಹದ ಹಾಗೆ ಗರ್ಜಿಸುವರು. ಅವರು ಗರ್ಜಿಸುವಾಗ ಪಶ್ಚಿಮದಿಂದ ಮಕ್ಕಳು ನಡುಗುತ್ತಾ ಬರುವರು.

[11] ಈಜಿಪ್ಟಿನಿಂದ ಪಕ್ಷಿಯಗಳಂತೆಯೂ ಅಸ್ಸೀರಿಯದಿಂದ ಪಾರಿವಾಳಗಳಂತೆಯೂ ಅವರು ಬರುವರು. ನಾನು ಅವರ ಮನೆಗಳಲ್ಲಿ ಇರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

[12] ಎಫ್ರಾಯೀಮು ಸುಳ್ಳಿನಿಂದ ಮತ್ತು ಇಸ್ರಾಯೇಲಿನ ಮನೆಯವರು ಮೋಸದಿಂದ ನನ್ನನ್ನು ಸುತ್ತಿಕೊಂಡಿದ್ದಾರೆ. ಯೆಹೂದ ಕೂಡ ಪರಿಶುದ್ಧರೂ ನಂಬಿಗಸ್ತರೂ ಆದ ದೇವರ ವಿರುದ್ಧ ಅಶಿಸ್ತಿನಿಂದ ಇದೆ.

ಹೋಶೇಯ — Chapters