[1] ಇಸ್ರಾಯೇಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೇಶದ ನಿವಾಸಿಗಳಾದ ನಿಮ್ಮ ಮೇಲೆ ಯೆಹೋವ ದೇವರು ಆಪಾದನೆ ಹೊರಿಸಿದ್ದಾರೆ. “ಏಕೆಂದರೆ ದೇಶದಲ್ಲಿ ಸತ್ಯವೂ ಇಲ್ಲ, ದಯೆಯೂ ಇಲ್ಲ, ದೇವರ ತಿಳುವಳಿಕೆಯೂ ಇಲ್ಲ.
[2] ಶಪಿಸುವದೂ, ಸುಳ್ಳು ಹೇಳುವುದೂ, ಕೊಲ್ಲುವುದು, ಕದಿಯುವುದೂ, ವ್ಯಭಿಚಾರ ಮಾಡುವುದೂ ಹೆಚ್ಚಾಗಿ ಬಿಟ್ಟಿವೆ. ಅವರು ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ದೇಶವೆಲ್ಲಾ ರಕ್ತಮಯವಾಗಿದೆ.
[3] ಆದ್ದರಿಂದ ದೇಶವು ದುಃಖಪಡುತ್ತಿದೆ. ಅದರಲ್ಲಿ ವಾಸಿಸುವ ಪ್ರತಿಯೊಬ್ಬನು ಕುಗ್ಗಿಹೋಗಿದ್ದಾನೆ. ಅಡವಿಯ ಮೃಗಗಳೂ ಆಕಾಶದ ಪಕ್ಷಿಗಳೂ, ಸಮುದ್ರ ಮೀನುಗಳು ನಶಿಸಿ ಹೋಗುತ್ತಿವೆ.
[4] “ಆದರೂ ಯಾವನಾದರೂ ವಾದಿಸದಿರಲಿ ಇಲ್ಲವೆ ಬೇರೆಯವರನ್ನು ಖಂಡಿಸದಿರಲಿ. ಏಕೆಂದರೆ ನಿಮ್ಮ ಜನರೆಲ್ಲರೂ ಯಾಜಕನೊಂದಿಗೆ ವಾದಿಸುವವರಾಗಿದ್ದಾರೆ.
[5] ನೀನು ಹಗಲಿನಲ್ಲಿಯೂ, ರಾತ್ರಿಯಲ್ಲಿಯೂ ಬೀಳುವೆ. ಪ್ರವಾದಿಗಳು ನಿನ್ನ ಸಂಗಡ ಮುಗ್ಗರಿಸಿಬೀಳುವರು. ಆದ್ದರಿಂದ ನಾನು ನಿನ್ನ ತಾಯಿಯನ್ನು ನಾಶಮಾಡುವೆನು.
[6] ನನ್ನ ಜನರು ಜ್ಞಾನಹೀನರಾಗಿ ಅಳಿದು ಹೋಗುತ್ತಿದ್ದಾರೆ. “ಏಕೆಂದರೆ ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ. ನಾನು ಸಹ ಯಾಜಕ ವರ್ಗದಿಂದ ನಿಮ್ಮನ್ನು ವರ್ಜಿಸಿ ಬಿಡುತ್ತೇನೆ. ಏಕೆಂದರೆ ನೀವು ದೇವರ ನಿಯಮವನ್ನು ಮರೆತುಬಿಟ್ಟಿದ್ದೀರಿ, ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.
[7] ಯಾಜಕರು ಹೆಚ್ಚಿದ ಹಾಗೆಲ್ಲಾ ಅವರು ನನಗೆ ವಿರೋಧವಾಗಿ ಪಾಪಮಾಡಿದ್ದಾರೆ. ಆದ್ದರಿಂದ ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.
[8] ಅವರು ನನ್ನ ಜನರ ಪಾಪವನ್ನು ತಿನ್ನುತ್ತಾರೆ. ಅವರು ದುಷ್ಟತನದ ಮೇಲೆ ಅವರ ಮನಸ್ಸನ್ನು ಇಡುತ್ತಾರೆ.
[9] ಯಾಜಕನು ಹೇಗೋ ಹಾಗೆಯೇ ಜನರು ಇರುವರು. ನಾನು ಅವರ ಮಾರ್ಗಗಳಿಗೋಸ್ಕರ ಅವರನ್ನು ಶಿಕ್ಷಿಸಿ, ಅವರ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವೆನು.
[10] “ಏಕೆಂದರೆ ಅವರು ತಿಂದರೂ ಸಾಕಾಗುವುದಿಲ್ಲ. ಅವರು ವ್ಯಭಿಚಾರ ಮಾಡಿದರೂ ಅಭಿವೃದ್ಧಿ ಆಗುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರನ್ನೇ ಬಿಟ್ಟುಬಿಟ್ಟಿದ್ದಾರೆ.
[11] ಮದ್ಯಪಾನ, ದ್ರಾಕ್ಷಾರಸ ಇವು ಜನರನ್ನು ಜ್ಞಾನಹೀನರನ್ನಾಗಿ ಮಾಡುತ್ತವೆ.
[12] ನನ್ನ ಜನರು ಮರದ ತುಂಡುಗಳಿಂದ ಕಣಿ ಕೇಳುತ್ತಾರೆ. ಹಿಡಿದ ಕೋಲಿನಿಂದ ಉತ್ತರ ಪಡೆಯಲು ಯತ್ನಿಸುತ್ತಾರೆ. ಏಕೆಂದರೆ ವ್ಯಭಿಚಾರದ ಆತ್ಮವು ಅವರನ್ನು ತಪ್ಪಿಸಿಬಿಟ್ಟಿದೆ. ಅವರು ತಮ್ಮ ದೇವರಿಗೆ ಅಪನಂಬಿಗಸ್ತರಾಗಿ ದ್ರೋಹ ಮಾಡಿದ್ದಾರೆ.
[13] ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸುತ್ತಾರೆ. ಗುಡ್ಡಗಳ ಮೇಲೆ ಏಲಾ, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ದಟ್ಟವಾಗಿರುವುದರಿಂದ ಧೂಪವನ್ನು ಸುಡುತ್ತಾರೆ. ಆದ್ದರಿಂದ ನಿಮ್ಮ ಪುತ್ರಿಯರು ವ್ಯಭಿಚಾರ ಮಾಡುವರು. ನಿಮ್ಮ ಸೊಸೆಯಂದಿರು ವ್ಯಭಿಚಾರಿಣಿಗಳಾಗುವರು.
[14] “ನಿಮ್ಮ ಪುತ್ರಿಯರು ವ್ಯಭಿಚಾರ ಮಾಡುವಾಗಲೂ, ನಿಮ್ಮ ಸೊಸೆಯಂದಿರು ವ್ಯಭಿಚಾರ ಮಾಡುವಾಗಲೂ ನಾನು ಅವರನ್ನು ಶಿಕ್ಷಿಸುವುದಿಲ್ಲ. ಏಕೆಂದರೆ ಪುರುಷರು ಸ್ವತಃ ವೇಶ್ಯೆಯರೊಂದಿಗೆ ವಾಸಿಸುತ್ತಾರೆ ಮತ್ತು ದೇವಾಲಯದ ವೇಶ್ಯೆಯರೊಂದಿಗೆ ಬಲಿ ಅರ್ಪಿಸುತ್ತಾರೆ. ಆದ್ದರಿಂದ ವಿವೇಕವಿಲ್ಲದ ಜನರು ನಾಶವಾಗುತ್ತಾರೆ.
[15] “ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿದರೂ, ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. “ಗಿಲ್ಗಾಲಿಗೆ ಹೋಗದೆ, ಇಲ್ಲವೆ ಬೇತಾವೆನಿಗೆ ಏರದೇ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡದೆ ಇರಲಿ.
[16] ಹಠಮಾರಿ ಹಸುವಿನ ಹಾಗೆ ಇಸ್ರಾಯೇಲು ಹಟಮಾರಿಯಾಗಿದೆ. ಈಗ ಯೆಹೋವ ದೇವರು ಹುಲ್ಲುಗಾವಲಲ್ಲಿರುವ ಕುರಿಮರಿಯ ಹಾಗೆ ಅವರನ್ನು ಹೇಗೆ ಮೇಯಿಸುವರು?
[17] ಎಫ್ರಾಯೀಮನು ವಿಗ್ರಹಗಳಿಗೆ ಸೇರಿಕೊಂಡಿದ್ದಾನೆ. ಅವನನ್ನು ಅವನಷ್ಟಕ್ಕೆ ಬಿಟ್ಟುಬಿಡು.
[18] ಅವರು ಮಿತಿಮೀರಿ ಕುಡಿಯುತ್ತಾರೆ. ಅವರು ಯಾವಾಗಲೂ ವ್ಯಭಿಚಾರ ಮಾಡುವವರಾಗಿದ್ದಾರೆ. ಅವರನ್ನು ಆಳುವವರು ಅವಮಾನ ಕಾರ್ಯಗಳಲ್ಲಿ ಇಷ್ಟಪಡುತ್ತಾರೆ.
[19] ಗಾಳಿಯು ಅವರನ್ನು ತನ್ನ ರೆಕ್ಕೆಗಳಿಂದ ಬಂಧಿಸಿದೆ. ಅವರು ತಮ್ಮ ಬಲಿಗಳಿಂದ ನಾಚಿಕೆಪಡುವರು.