Skip to content
Opens in a new window
Listen to this chapter • 3:04

[1] ಯೆಹೂದದ ಅರಸರಾದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ದಿನಗಳಲ್ಲಿಯೂ ಬೆಯೇರಿಯನ ಮಗ ಹೋಶೇಯನಿಗೆ ಯೆಹೋವ ದೇವರ ವಾಕ್ಯವು ಬಂದಿತು.

[2] ಯೆಹೋವ ದೇವರು ಹೋಶೇಯನೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಯೆಹೋವ ದೇವರು ಹೋಶೇಯನಿಗೆ, “ನೀನು ಹೋಗಿ ವ್ಯಭಿಚಾರಿಣಿಯೊಬ್ಬಳನ್ನು ಮದುವೆ ಮಾಡಿಕೋ ಮತ್ತು ಆಕೆಗೆ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ. ಏಕೆಂದರೆ ಈ ದೇಶವು ನನ್ನನ್ನು ತೊರೆದುಬಿಟ್ಟು, ವ್ಯಭಿಚಾರಿಣಿಯಾದ ಹೆಂಡತಿಯಂತೆ ಯೆಹೋವ ದೇವರಿಗೆ ದ್ರೋಹ ಬಗೆದಿದೆ,” ಎಂದು ಹೇಳಿದರು.

[3] ಆಗ ಅವನು ಹೋಗಿ ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಅವನಿಗೆ ಒಬ್ಬ ಮಗನನ್ನು ಹೆತ್ತಳು.

[4] ಆಗ ಯೆಹೋವ ದೇವರು ಹೋಶೇಯನಿಗೆ, “ಈ ಮಗುವಿಗೆ ಇಜ್ರೆಯೇಲ್ ಎಂದು ಹೆಸರಿಡು. ಏಕೆಂದರೆ ಶೀಘ್ರದಲ್ಲಿಯೇ ನಾನು ಇಜ್ರೆಯೇಲ್ ಕಣಿವೆಯಲ್ಲಿ ರಕ್ತವನ್ನು ಸುರಿಸಿದ ಯೇಹುವಿನ ಮನೆತನದವರ ಮೇಲೆ ಮುಯ್ಯಿತೀರಿಸಿಕೊಳ್ಳುವೆನು. ಇಸ್ರಾಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು.

[5] ಆ ದಿನದಲ್ಲಿ, ನಾನು ಇಸ್ರಾಯೇಲಿನ ಬಿಲ್ಲು ಶಕ್ತಿಯನ್ನು ಇಜ್ರೆಯೇಲ್ ಕಣಿವೆಯಲ್ಲಿ ಮುರಿದು ಹಾಕುವೆನು,” ಎಂದು ಹೇಳಿದರು.

[6] ಗೋಮೆರಳು ಪುನಃ ಗರ್ಭಿಣಿಯಾಗಿ ಹೆಣ್ಣು ಮಗುವನ್ನು ಹೆತ್ತಳು. ಆಗ ಯೆಹೋವ ದೇವರು ಹೋಶೇಯನಿಗೆ, “ಅವಳನ್ನು ‘ಲೋರುಹಾಮಾ’ ಎಂಬ ಹೆಸರಿನಿಂದ ಕರೆ. ಏಕೆಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನದವರಿಗೆ ಪ್ರೀತಿ ತೋರಿಸುವುದೇ ಇಲ್ಲ, ಅವರನ್ನು ಯಾವ ರೀತಿಯೂ ಕ್ಷಮಿಸುವದಿಲ್ಲ.

[7] ಆದರೆ ನಾನು ಯೆಹೂದದ ಮನೆತನದವರನ್ನು ಪ್ರೀತಿಸಿ ಅವರನ್ನು ಬಿಲ್ಲುಬಾಣ, ಖಡ್ಗ, ಕಾಳಗ, ಕುದುರೆ ರಾಹುತರು ಇವುಗಳಿಂದಲ್ಲ, ಅವರನ್ನು ಅವರ ದೇವರಾದ ನಾನೇ ಯೆಹೋವ ದೇವರೇ ರಕ್ಷಿಸುವೆನು,” ಎಂದು ಹೇಳಿದರು.

[8] ಗೋಮೆರಳು ಲೋರುಹಾಮಾಳನ್ನು ಎದೆಹಾಲಿನ ಸೇವನೆಯಿಂದ ಬಿಡಿಸಿದ ಮೇಲೆ ಪುನಃ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.

[9] ಆಗ ಯೆಹೋವ ದೇವರು, “ ‘ಅವನ ಹೆಸರನ್ನು ಲೋ ಅಮ್ಮಿ ಎಂದು ಕರೆ. ಏಕೆಂದರೆ ನೀವು ನನ್ನ ಜನರಲ್ಲ, ನಾನು ನಿಮ್ಮ ದೇವರಾಗಿರುವುದಿಲ್ಲ,’ ಎಂದು ಹೇಳಿದರು.

[10] “ಆದರೂ ಇಸ್ರಾಯೇಲ್ ಜನರು ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವರು. ದೇವರು ಯಾವ ಸ್ಥಳದಲ್ಲಿ ಅವರನ್ನು, ‘ನೀವು ನನ್ನ ಜನರಲ್ಲ’ ಎಂದಿದ್ದಾರೋ ಆ ಸ್ಥಳದಲ್ಲಿಯೇ, ‘ನೀವು ಜೀವಸ್ವರೂಪಿಯಾದ ದೇವರ ಮಕ್ಕಳು’ ಎನಿಸಿಕೊಳ್ಳುವ ದಿನ ಬರುವುದು.

[11] ಆಗ ಯೆಹೂದದ ಜನರು ಮತ್ತು ಇಸ್ರಾಯೇಲ್ ಜನರು ಒಟ್ಟುಗೂಡಿಕೊಂಡು ತಮಗೆ ಒಬ್ಬ ನಾಯಕನನ್ನು ನೇಮಕ ಮಾಡಿಕೊಂಡು, ದೇಶದೊಳಗಿಂದ ಹೊರಗೆ ಬರುವರು. ಏಕೆಂದರೆ ಇಜ್ರೆಯೇಲಿನ ಆ ದಿನವು ಮಹಾದಿನವಾಗಿರುವುದು.

ಹೋಶೇಯ — Chapters