Skip to content
Opens in a new window
Listen to this chapter • 3:09

[1] ಎಫ್ರಾಯೀಮು ಗಾಳಿಯನ್ನು ತಿನ್ನುತ್ತದೆ. ಪೂರ್ವದ ಗಾಳಿಯ ಹಿಂದೆ ಹಿಂಬಾಲಿಸಿಕೊಂಡು ಹೋಗುತ್ತದೆ. ಅವನು ದಿನವೆಲ್ಲಾ ಸುಳ್ಳನ್ನೂ, ಹಿಂಸೆಯನ್ನೂ ಹೆಚ್ಚಿಸಿ, ಅಸ್ಸೀರಿಯರೊಂದಿಗೆ ಒಡಂಬಡಿಕೆ ಮಾಡಿಕೊಂಡು, ಈಜಿಪ್ಟಿಗೆ ಎಣ್ಣೆಯನ್ನು ಕಾಣಿಕೆಯಾಗಿ ಹೊತ್ತುಕೊಂಡು ಹೋಗುತ್ತಾನೆ.

[2] ಯೆಹೂದರೊಂದಿಗೆ ಯೆಹೋವ ದೇವರು ಆಪಾದನೆ ಮಾಡಿ, ಯಾಕೋಬನನ್ನು ತನ್ನ ಮಾರ್ಗಗಳ ಪ್ರಕಾರ ಶಿಕ್ಷಿಸಿ, ಅವನ ಕ್ರಿಯೆಗಳ ಪ್ರಕಾರ ಮುಯ್ಯಿ ತೀರಿಸಿ, ಅವನಿಗೆ ಪ್ರತಿಫಲವನ್ನು ಕೊಡುವರು.

[3] ಗರ್ಭದಲ್ಲಿ ಅವನು ತನ್ನ ಸಹೋದರನನ್ನು ಹಿಮ್ಮಡಿಯಿಂದ ಹಿಡಿದು, ಮನುಷ್ಯನಾಗಿಯೇ ದೇವರೊಂದಿಗೆ ಹೋರಾಡಿದನು.

[4] ಯಾಕೋಬನು ದೇವದೂತನ ಸಂಗಡ ಹೋರಾಡಿ ಜಯಿಸಿದನು. ಅವನು ಅತ್ತು ಆತನ ಅನುಗ್ರಹಕ್ಕಾಗಿ ವಿಜ್ಞಾಪನೆಯನ್ನು ಸಲ್ಲಿಸಿದನು. ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು. ಅಲ್ಲಿ ಅವನು ಆತನೊಂದಿಗೆ ಮಾತನಾಡಿದನು.

[5] ಅವರೇ ಸರ್ವಶಕ್ತರಾದ ಯೆಹೋವ ದೇವರು; ಅವರ ಪ್ರಸಿದ್ಧ ಹೆಸರು ಯೆಹೋವ ದೇವರು ಎಂಬುದೇ.

[6] ಆದರೆ ನೀನು ನಿನ್ನ ದೇವರ ಕಡೆಗೆ ತಿರುಗಿಕೋ. ಪ್ರೀತಿಯನ್ನೂ, ನ್ಯಾಯವನ್ನೂ ಪಾಲಿಸು ಮತ್ತು ನಿನ್ನ ದೇವರಿಗಾಗಿ ಯಾವಾಗಲೂ ಕಾದುಕೊಂಡಿರು.

[7] ಅವನು ವ್ಯಾಪಾರಿಯಾಗಿದ್ದು, ಅವನ ಕೈಯಲ್ಲಿ ಮೋಸದ ತಕ್ಕಡಿ ಇದೆ. ಇತರರಿಂದ ಕಸಿದುಕೊಳ್ಳಬೇಕೆಂಬುದೇ ಅವನ ದುರಾಶೆ.

[8] ಎಫ್ರಾಯೀಮು ಹೆಚ್ಚಳ ಪಡುತ್ತಾ ಹೀಗೆಂದು ಹೇಳುತ್ತದೆ, “ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು. ನನ್ನ ಐಶ್ವರ್ಯದಿಂದಾಗಿ ಅವರು ನನ್ನಲ್ಲಿ ಯಾವ ಅಪರಾಧ ಅಥವಾ ಪಾಪವನ್ನು ಕಾಣುವುದಿಲ್ಲ.”

[9] ಆದರೆ ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದಲೂ, ನಿನ್ನ ದೇವರಾಗಿರುವ ಯೆಹೋವ ದೇವರಾದ ನಾನು, ಜಾತ್ರೆಯ ದಿನಗಳಲ್ಲಿ ನೀವು ವನವಾಸ ಮಾಡಿದಂತೆ, ನಿಮ್ಮನ್ನು ಪುನಃ ಗುಡಾರದ ವಾಸಕ್ಕೆ ಗುರಿಪಡಿಸುವೆನು.

[10] ನಾನು ಪ್ರವಾದಿಗಳೊಂದಿಗೆ ಮಾತನಾಡಿದ್ದೇನೆ. ಅವರಿಗೆ ಹಲವಾರು ದರ್ಶನಗಳನ್ನು ದಯಪಾಲಿಸಿದ್ದೇನೆ. ಅವರ ಮುಖಾಂತರ ಸಾಮ್ಯಗಳನ್ನು ಜನರಿಗೆ ಹೇಳಿದ್ದೇನೆ.

[11] ಗಿಲ್ಯಾದಿನಲ್ಲಿ ದುಷ್ಟತನ ಇದೆಯೋ? ಅಲ್ಲಿನ ಜನರು ಅಯೋಗ್ಯರೇ? ಅವರು ಗಿಲ್ಗಾಲಿನಲ್ಲಿ ಹೋರಿಗಳನ್ನು ಅರ್ಪಿಸುತ್ತಾರೆಯೇ? ಅವರ ಬಲಿಪೀಠಗಳು ಹೊಲದ ಸಾಲುಗಳಲ್ಲಿರುವ ಕಲ್ಲು ಕುಪ್ಪೆಯ ಹಾಗಿವೆ, ಎಂದು ಹೇಳಿದನು.

[12] ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು. ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ, ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.

[13] ಪ್ರವಾದಿಯಿಂದ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಬರಮಾಡಿ, ಆ ಪ್ರವಾದಿಯಿಂದಲೇ ಆತನು ಅವರನ್ನು ಕಾಪಾಡಿದರು.

[14] ಆದರೂ ಎಫ್ರಾಯೀಮು ಬಹು ಕಠೋರವಾಗಿ ಆತನನ್ನು ರೇಗಿಸಿತು. ಆದ್ದರಿಂದ ಯೆಹೋವ ದೇವರು ಅದರ ರಕ್ತಾಪರಾಧವನ್ನು ಅದರ ಮೇಲೆ ಬರಮಾಡುವರು. ಅವನ ನಿಂದೆಯನ್ನು ಯೆಹೋವ ದೇವರು ಅವನ ಮೇಲೆ ಬರಮಾಡುವರು.

ಹೋಶೇಯ — Chapters