Skip to content
Opens in a new window
Listen to this chapter • 5:00

[1] ಅಮೂಲ್ಯವಾದ ಸುಗಂಧ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ. ಒಬ್ಬನ ಜನ್ಮ ದಿನಕ್ಕಿಂತ ಮರಣದ ದಿನವೇ ಮೇಲು.

[2] ಔತಣದ ಮನೆಗೆ ಹೋಗುವುದಕ್ಕಿಂತ, ಶೋಕದ ಮನೆಗೆ ಹೋಗುವುದು ಲೇಸು. ಏಕೆಂದರೆ ಎಲ್ಲಾ ಮನುಷ್ಯರ ಅಂತ್ಯವು ಸಾವಾಗಿದೆ. ಇದರಿಂದ ಜೀವಂತರು ಇದನ್ನು ತಮ್ಮ ಹೃದಯದಲ್ಲಿ ಸ್ಮರಿಸಿಕೊಳ್ಳುವರು.

[3] ನಗೆಗಿಂತ ದುಃಖವು ವಾಸಿ, ಏಕೆಂದರೆ ಮುಖದಲ್ಲಿ ದುಃಖ ಹೃದಯಕ್ಕೆ ಸುಖ.

[4] ಜ್ಞಾನಿಗಳ ಹೃದಯವು ಶೋಕದ ಮನೆಯಲ್ಲಿರುವುದು, ಆದರೆ ಮೂಢರ ಹೃದಯವು ಉಲ್ಲಾಸದ ಮನೆಯಲ್ಲಿರುವುದು.

[5] ಮೂಢರ ಹಾಡನ್ನು ಕೇಳುವುದಕ್ಕಿಂತ, ಜ್ಞಾನಿಗಳ ಗದರಿಕೆಯನ್ನು ಕೇಳುವುದು ಲೇಸು.

[6] ಗಡಿಗೆಯ ಕೆಳಗೆ ಉರಿಯುವ ಮುಳ್ಳುಕಡ್ಡಿ ಚಟಚಟನೆಯ ಶಬ್ದ ಹೇಗೋ, ಮೂಢನ ನಗುವು ಹಾಗೆಯೇ ಇರುವುದು. ಇದು ಕೂಡ ವ್ಯರ್ಥವೇ.

[7] ದಬ್ಬಾಳಿಕೆ ಜ್ಞಾನಿಯನ್ನು ಮೂರ್ಖನನ್ನಾಗಿ ಮಾಡುತ್ತದೆ. ಲಂಚವು ಹೃದಯವನ್ನು ಕೆಡಿಸುತ್ತದೆ.

[8] ಪ್ರಾರಂಭಕ್ಕಿಂತ ಅದರ ಅಂತ್ಯವೇ ಲೇಸು. ಗರ್ವಿಷ್ಠನಿಗಿಂತ ತಾಳ್ಮೆಯುಳ್ಳವನೇ ಉತ್ತಮ.

[9] ನೀನು ಕೋಪಿಸಿಕೊಳ್ಳುವುದಕ್ಕೆ ಆತುರಪಡದಿರು, ಏಕೆಂದರೆ ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ.

[10] “ಹಿಂದಿನ ಕಾಲ ಈಗಿನ ಕಾಲಕ್ಕಿಂತ ಮೇಲಾಗಿರುವುದಕ್ಕೆ ಕಾರಣ ಏನು?” ಎಂದು ನೀನು ಕೇಳಬೇಡ. ಇದು ಬುದ್ಧಿವಂತರು ಕೇಳುವ ಪ್ರಶ್ನೆಯಲ್ಲ.

[11] ಜ್ಞಾನವು ಆಸ್ತಿಯ ಹಾಗೆ ಒಳ್ಳೆಯದು; ಅದರಿಂದ ಜೀವಂತರೆಲ್ಲರಿಗೂ ಲಾಭಕರ.

[12] ಧನವು ಹೇಗೋ ಹಾಗೆ ಜ್ಞಾನವು ಆಶ್ರಯ. ಆದರೆ ಜ್ಞಾನದ ಶ್ರೇಷ್ಠತೆ ಏನೆಂದರೆ, ಅದು ಜ್ಞಾನಿಗೆ ಜೀವದಾಯಕ.

[13] ದೇವರ ಸೃಷ್ಟಿಕಾರ್ಯವನ್ನು ಯೋಚಿಸು: ದೇವರು ಮಾಡಿದ್ದನ್ನು, ಪುನಃ ಸರಿಪಡಿಸಲು ಯಾರಿಗೆ ಸಾಧ್ಯ?

[14] ಸುಖ ದಿನದಲ್ಲಿ ಸಂತೋಷವಾಗಿರು. ಆದರೆ ದುಃಖ ದಿನದಲ್ಲಿ ಇದನ್ನು ಯೋಚಿಸು: ದೇವರು ಇವುಗಳನ್ನು ಒಂದರ ಮೇಲೊಂದನ್ನು ಬರಮಾಡುತ್ತಾರೆ. ಹೀಗೆ ಮನುಷ್ಯನು ತನ್ನ ಆಯುಸ್ಸನ್ನು ಕಳೆದ ಮೇಲೆ ಭವಿಷ್ಯವನ್ನು ಗ್ರಹಿಸಲಾರನು.

[15] ನನ್ನ ವ್ಯರ್ಥದ ದಿನಗಳಲ್ಲಿ ಇವೆರಡು ವಿಷಯಗಳನ್ನು ನೋಡಿದ್ದೇನೆ: ನೀತಿವಂತನು ತನ್ನ ನೀತಿಯಲ್ಲಿ ಗತಿಸಿಹೋಗುತ್ತಾನೆ. ದುಷ್ಟನು ತನ್ನ ದುಷ್ಟತನದಲ್ಲಿ, ಇಡೀ ಜೀವಮಾನವನ್ನು ಕಳೆಯುತ್ತಾನೆ.

[16] ನೀನು ಅತಿಯಾಗಿ ನೀತಿವಂತನಾಗಿರಬೇಡ. ಅತಿಯಾಗಿ ನಿನ್ನನ್ನು ಜ್ಞಾನಿಯನ್ನಾಗಿಯೂ ಮಾಡಿಕೊಳ್ಳಬೇಡ. ನಿನ್ನನ್ನು ನೀನೇ ಏಕೆ ನಾಶಪಡಿಸಿಕೊಳ್ಳುವೆ?

[17] ನೀನು ದುಷ್ಟತನದಲ್ಲಿ ಸಾಗಬೇಡ, ಮೂರ್ಖತನದಲ್ಲಿಯೂ ಮುಂದುವರಿಯಬೇಡ. ನಿನ್ನ ಸಮಯಕ್ಕಿಂತ ಮೊದಲು ನೀನು ಏಕೆ ಸಾಯುವೆ?

[18] ನೀನು ಇವುಗಳನ್ನು ಗ್ರಹಿಸಿಕೊಳ್ಳುವುದು ಒಳ್ಳೆಯದು. ಹೌದು, ಇವುಗಳನ್ನು ಮರೆಯಬೇಡ. ಏಕೆಂದರೆ ದೇವರಿಗೆ ಭಯಪಡುವವನು ಇವೆಲ್ಲವುಗಳಿಂದ ಪಾರಾಗುವನು.

[19] ಪಟ್ಟಣದ ಹತ್ತು ಮಂದಿ ಅಧಿಕಾರಿಗಳ ಸ್ಥಿರತೆಗಿಂತ, ಜ್ಞಾನವು ಜ್ಞಾನಿಯನ್ನು ಹೆಚ್ಚಾಗಿ ಸ್ಥಿರಪಡಿಸುತ್ತದೆ.

[20] ಪಾಪಮಾಡದೆ ಒಳ್ಳೆಯದನ್ನೇ ನಡೆಸುವ ನೀತಿವಂತನು, ಭೂಮಿಯ ಮೇಲೆ ಒಬ್ಬನೂ ಇಲ್ಲ.

[21] ಜನರು ಆಡಿದ ಎಲ್ಲಾ ಮಾತುಗಳನ್ನು ನೀನು ಲಕ್ಷಿಸಬೇಡ, ನಿನ್ನ ಕೆಲಸದವರೂ ನಿನ್ನನ್ನು ಶಪಿಸಬಹುದು.

[22] ನೀನು ಸಹ ಅನೇಕ ವೇಳೆ ಇತರರನ್ನು ಶಪಿಸಿದ್ದೀ, ಇದು ನಿನ್ನ ಹೃದಯಕ್ಕೆ ತಿಳಿದಿದೆ.

[23] ಇದೆಲ್ಲವನ್ನು ನಾನು ಜ್ಞಾನದಿಂದ ಪರೀಕ್ಷಿಸಿದ್ದೇನೆ, “ನಾನು ಜ್ಞಾನಿಯಾಗಿರಲು ತೀರ್ಮಾನಿಸುತ್ತೇನೆ,” ಎಂದುಕೊಂಡೆನು. ಆದರೆ ಅದು ನನ್ನಿಂದ ದೂರವಾಯಿತು.

[24] ದೂರದಲ್ಲಿರುವುದನ್ನೂ, ಅಗಾಧದಲ್ಲಿರುವುದನ್ನೂ ಯಾರು ಕಂಡುಕೊಂಡಾರು?

[25] ಜ್ಞಾನದ ಮೂಲ ತತ್ವವನ್ನೂ, ದುಷ್ಟತನದ ಮೂಢತನವನ್ನೂ, ಮೂಢತ್ವದ ಹುಚ್ಚುತನವನ್ನೂ ಪರೀಕ್ಷಿಸಿ ತಿಳಿದುಕೊಳ್ಳುವಂತೆ ಮನಸ್ಸುಮಾಡಿದೆನು.

[26] ಕೆಟ್ಟ ಹೆಂಗಸಿನ ಹೃದಯವು ಬೋನೂ ಬಲೆಯೂ ಆಗಿರುತ್ತದೆ. ಅವಳ ಕೈ ಸಂಕೋಲೆ ಆಗಿರುತ್ತದೆ. ಇದು ಮರಣಕ್ಕಿಂತಲೂ ಕಠೋರವಾದದ್ದು ಎಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸುವವನು, ಅವಳಿಂದ ತಪ್ಪಿಸಿಕೊಳ್ಳುವನು. ಆದರೆ ಪಾಪಿಯು ಅವಳ ಕೈಗೆ ಸಿಕ್ಕಿಬೀಳುವನು.

[27] “ನೋಡು, ನಾನಿದನ್ನು ಹುಡುಕಿ ಕಂಡುಕೊಂಡಿದ್ದೇನೆ,” ಎಂದು ಪ್ರಸಂಗಿಯು ಹೇಳುತ್ತಿದ್ದಾನೆ: ನಾನು ಒಂದರ ನಂತರ ಮತ್ತೊಂದನ್ನು ಕೂಡಿಸಿ, ಸಂಶೋಧನೆಗಳನ್ನು ನಡೆಸಿದೆ;

[28] ನಾನು ಹುಡುಕಿ ನೋಡಿದರೂ ನನಗೆ ಇದುವರೆಗೆ ಉತ್ತರ ಸಿಕ್ಕಲಿಲ್ಲ. ನಾನು ಸಾವಿರ ಪುರುಷರಲ್ಲಿ ಒಬ್ಬ ಸತ್ಯವಂತನನ್ನು ಕಂಡೆನು. ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ಸತ್ಯವಂತಳನ್ನು ಕಂಡುಕೊಳ್ಳಲಿಲ್ಲ.

[29] ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ: ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದರು. ಮನುಷ್ಯರಾದರೋ ಅನೇಕ ಸ್ವಾರ್ಥ ಯೋಜನೆಗಳನ್ನು ಮಾಡಿಕೊಂಡಿದ್ದಾರೆ.

ಪ್ರಸಂಗಿ — Chapters