Skip to content
Opens in a new window
Listen to this chapter • 4:10

[1] ದೇವರ ಆಲಯಕ್ಕೆ ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು. ಮೂರ್ಖರು ಅರ್ಪಿಸುವ ಯಜ್ಞಕ್ಕಿಂತ, ದೇವರ ಸಮೀಪವಾಗಿದ್ದು ಅವರಿಗೆ ಕಿವಿಗೊಟ್ಟು ಆಲಿಸುವುದು ಲೇಸು. ತಾವು ತಪ್ಪು ಮಾಡುತ್ತಿದ್ದಾರೆಂದು ಮೂಢರಿಗೆ ತಿಳಿಯುವುದಿಲ್ಲ.

[2] ನೀನು ದುಡುಕಿ ಮಾತನಾಡಬೇಡ, ದೇವರ ಮುಂದೆ ಮಾತನಾಡಲು ನಿನ್ನ ಹೃದಯವು ಆತುರಪಡದೇ ಇರಲಿ. ದೇವರು ಪರಲೋಕದಲ್ಲಿದ್ದಾರೆ. ನೀನಾದರೋ ಭೂಮಿಯ ಮೇಲೆ ಇರುವೆ, ಆದಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ.

[3] ಬಹಳ ಚಿಂತೆ ಇದ್ದಾಗಲೂ ಕನಸು ಬರುತ್ತದೆ. ಮೂಢನು ಮಾತಾಡಿದರೆ ಸಾಕು, ಬಹು ಮಾತುಗಳು ಬರುತ್ತವೆ.

[4] ದೇವರಿಗೆ ನೀನು ಹರಕೆಯನ್ನು ಮಾಡಿದರೆ, ಅದನ್ನು ತೀರಿಸಲು ತಡಮಾಡಬೇಡ. ದೇವರು ಮೂಢರನ್ನು ಮೆಚ್ಚುವುದಿಲ್ಲ. ನೀನು ಹರಕೆ ಮಾಡಿದ್ದನ್ನು ತೀರಿಸು.

[5] ಹರಕೆಮಾಡಿ ತೀರಿಸದೆ ಇರುವುದಕ್ಕಿಂತ, ಹರಕೆ ಮಾಡದೆ ಇರುವುದು ಒಳ್ಳೆಯದು.

[6] ನಿನ್ನ ಬಾಯಿ ನಿನ್ನನ್ನು ಪಾಪಕ್ಕೆ ನಡೆಸದಂತೆ ನೋಡಿಕೋ. “ನಾನು ಹರಕೆ ಮಾಡಿದ್ದು ತಪ್ಪು,” ಎಂದು ದೂತನ ಮುಂದೆ ಹೇಳಬೇಡ. ಇದರಿಂದ ದೇವರು ನಿನ್ನ ಮಾತಿಗೆ ಮೆಚ್ಚದೆ, ನಿನ್ನನ್ನು ಏಕೆ ದಂಡಿಸಬೇಕು?

[7] ಬಹು ಕನಸುಗಳೂ ಬಹು ಮಾತುಗಳೂ ವ್ಯರ್ಥವಾದವುಗಳು. ಆದ್ದರಿಂದ ನೀನು ದೇವರಿಗೆ ಭಯಪಡು.

[8] ದೇಶದಲ್ಲಿ ಬಡವರ ಹಿಂಸೆಯನ್ನೂ ನೀತಿನ್ಯಾಯ ನಿರಾಕರಿಸಿದ್ದನ್ನೂ ನೀನು ನೋಡಿದರೆ, ಆಶ್ಚರ್ಯಪಡಬೇಡ. ಏಕೆಂದರೆ ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬನಿದ್ದಾನೆ. ಅವರಿಬ್ಬರ ಮೇಲೆ ಮತ್ತೊಬ್ಬ ಉನ್ನತ ಅಧಿಕಾರಿಗಳು ಇದ್ದಾರೆ.

[9] ಭೂಮಿಯಿಂದ ಲಾಭವು ಎಲ್ಲರಿಗೂ ಇದೆ. ಹೊಲಗದ್ದೆಗಳಿಂದ ಅರಸನಿಗೂ ಲಾಭವಿದೆ.

[10] ಹಣವನ್ನು ಪ್ರೀತಿಸುವವರಿಗೆ ಎಷ್ಟು ಹಣ ಇದ್ದರೂ ಸಾಕಾಗದು. ಆಸ್ತಿಯನ್ನು ಪ್ರೀತಿಸುವವನು ತನ್ನ ಆದಾಯದಿಂದ ತೃಪ್ತಿಗೊಳ್ಳುವುದಿಲ್ಲ. ಇದೂ ಸಹ ವ್ಯರ್ಥವೇ.

[11] ಸೊತ್ತು ಹೆಚ್ಚಿದರೆ, ಅದನ್ನು ಅನುಭವಿಸುವವರು ಹೆಚ್ಚಾಗುವರು. ಯಜಮಾನರು ಅದನ್ನು ತಮ್ಮ ಕಣ್ಣಿಂದ ನೋಡುವುದೇ ಅವರಿಗಾಗುವ ಲಾಭ, ಬೇರೆ ಯಾವ ಪ್ರಯೋಜನವಿದೆ?

[12] ಪ್ರಯಾಸ ಪಡುವವನು ಸ್ವಲ್ಪ ತಿಂದರೂ ಹೆಚ್ಚು ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ. ಆದರೆ ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆ ಮಾಡಗೊಡಿಸದು.

[13] ಸೂರ್ಯನ ಕೆಳಗೆ ವ್ಯಸನಕರವಾದ ಕೇಡನ್ನು ನಾನು ನೋಡಿದೆ. ಅದು ಯಾವುದೆಂದರೆ: ಸಂಗ್ರಹಿಸಿದ ಆಸ್ತಿ ಯಜಮಾನನಿಗೆ ಹಾನಿ.

[14] ಅದು ಹೇಗೆಂದರೆ, ಅನಾಹುತದಿಂದ ಆಸ್ತಿ ಕಳೆದುಹೋಗುತ್ತದೆ. ಅವನಿಗೆ ಮಗನಿದ್ದರೆ, ಅವನಿಗೆ ಏನೂ ಇರುವುದಿಲ್ಲ.

[15] ತಾಯಿಯ ಗರ್ಭದಿಂದ ಅವನು ಹೇಗೆ ಬರಿಗೈಯಲ್ಲಿ ಬಂದನೋ, ಹಾಗೆ ಬರಿಗೈಯಲ್ಲಿ ಗತಿಸಿ ಹೋಗುವನು. ಅವನು ಪ್ರಯಾಸ ಪಟ್ಟದ್ದಕ್ಕಾಗಿ ಯಾವುದನ್ನು ತೆಗೆದುಕೊಂಡು ಹೋಗುವುದಿಲ್ಲ.

[16] ಇದು ಕೂಡ ವ್ಯಸನಕರವಾದ ಕೇಡು: ಮನುಷ್ಯನು ಹೇಗೆ ಬಂದನೋ, ಹಾಗೆಯೇ ಹೋಗುವನು. ಗಾಳಿಗಾಗಿ ಪ್ರಯಾಸಪಟ್ಟವನಿಗೆ ಲಾಭವೇನಿದೆ?

[17] ತನ್ನ ಜೀವಮಾನವೆಲ್ಲಾ ಅವನು ಕತ್ತಲೆಯಲ್ಲಿ ಕಳೆಯುತ್ತಾನೆ. ಅವನಿಗೆ ವ್ಯಾಧಿಯೊಂದಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ.

[18] ದೇವರು ಮನುಷ್ಯನಿಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ಅವನು ಕೈಗೊಂಡ ಪ್ರಯಾಸದ ಸುಖವನ್ನು ಅನುಭವಿಸಿ, ತಿಂದು, ಕುಡಿಯುವುದು ತೃಪ್ತಿಕರವಾದದ್ದೂ ಆಗಿದೆ, ಎಂದು ಒಂದು ಒಳ್ಳೆಯದನ್ನು ಕಂಡುಕೊಂಡೆನು. ಏಕೆಂದರೆ ಇದು ಮನುಷ್ಯನ ಪಾಲು.

[19] ಮನುಷ್ಯನಿಗೆ ದೇವರು ಆಸ್ತಿಪಾಸ್ತಿಗಳನ್ನು ದಯಪಾಲಿಸಿ, ಅವುಗಳನ್ನು ಅನುಭವಿಸುವುದಕ್ಕೆ ಸಾಮರ್ಥ್ಯ ಕೊಟ್ಟಿದ್ದರೆ, ಅವನು ತನ್ನ ಪಾಲನ್ನು ತೆಗೆದುಕೊಂಡು, ತನ್ನ ಪ್ರಯಾಸದಲ್ಲಿ ಆನಂದಿಸುವುದೂ ದೇವರ ದಾನದಿಂದಲೇ.

[20] ಇಂಥವನು ತನ್ನ ಜೀವಮಾನದ ದಿನಗಳನ್ನು ಗಣನೆಗೆ ತಂದುಕೊಳ್ಳನು. ಏಕೆಂದರೆ ಇವನು ತನ್ನ ಹೃದಯಾನಂದದಲ್ಲಿ ಮಗ್ನನಾಗಿರುವಂತೆ ದೇವರು ಮಾಡಿದ್ದಾರೆ.

ಪ್ರಸಂಗಿ — Chapters