Skip to content
Opens in a new window
Listen to this chapter • 2:12

[1] ನಿನ್ನ ಆಹಾರ ಧಾನ್ಯವನ್ನು ಹೊರನಾಡಿನ ವ್ಯಾಪಾರಕ್ಕೆ ಕಳುಹಿಸು. ಬಹಳ ದಿನಗಳ ಮೇಲೆ ಅದರಿಂದ ನಿನಗೆ ಲಾಭ ಸಿಗುವುದು.

[2] ನಿನ್ನ ಹಣವನ್ನು ಏಳೆಂಟು ಮಂದಿಗೆ ವೆಚ್ಚಮಾಡು. ಏಕೆಂದರೆ ಭೂಮಿಯ ಮೇಲೆ ಮುಂದೆ ಯಾವ ವಿಪತ್ತು ಬರುವುದೋ ನಿನಗೆ ತಿಳಿಯದು.

[3] ಮೋಡಗಳು ಮಳೆಯಿಂದ ತುಂಬಿದ್ದರೆ, ಅವು ಭೂಮಿಯ ಮೇಲೆ ಸುರಿದುಬಿಡುತ್ತವೆ. ಮರವು ಉತ್ತರ ಇಲ್ಲವೆ ದಕ್ಷಿಣಕ್ಕೆ ಬಿದ್ದರೆ, ಆ ಮರವು ಬಿದ್ದ ಸ್ಥಳದಲ್ಲಿಯೇ ಇರುವುದು.

[4] ಯಾವನು ಗಾಳಿಗಾಗಿ ಕಾದಿರುವನೋ, ಅವನು ಬೀಜ ಬಿತ್ತುವುದಿಲ್ಲ. ಮೋಡಗಳನ್ನು ಗಮನಿಸುತ್ತಿರುವವನು ಸಹ ಪೈರು ಕೊಯ್ಯುವುದಿಲ್ಲ.

[5] ಗಾಳಿಯ ಚಲನೆಯನ್ನಾಗಲಿ ಗರ್ಭಿಣಿಯ ಭ್ರೂಣದ ಬೆಳವಣಿಗೆಯನ್ನಾಗಲಿ ನೀನು ಹೇಗೆ ಗ್ರಹಿಸಲಾರೆಯೋ, ಹಾಗೆಯೇ, ಸರ್ವ ಸೃಷ್ಟಿಕರ್ತ ಆಗಿರುವ ದೇವರ ಕೆಲಸವನ್ನು ನೀನು ಗ್ರಹಿಸಲಾರೆ.

[6] ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು. ಸಾಯಂಕಾಲದವರೆಗೂ ನಿನ್ನ ಕೈಗೆ ಬಿಡುವು ಕೊಡಬೇಡ. ಏಕೆಂದರೆ ಇದು ಸಫಲವೋ ಅದು ಸಫಲವೋ ನಿನಗೆ ತಿಳಿಯದು. ಎರಡೂ ಒಳ್ಳೆಯ ಬೆಳೆಯನ್ನು ಕೊಡಲು ಸಾಧ್ಯವಿದೆ.

[7] ಬೆಳಕು ಹಿತಕರ. ಸೂರ್ಯನ ಕಾಂತಿ ಕಣ್ಣುಗಳಿಗೆ ಮೆಚ್ಚಿಕೆ.

[8] ಒಬ್ಬನು ಅನೇಕ ವರ್ಷಗಳು ಬದುಕಿ, ಅವುಗಳಲ್ಲೆಲ್ಲಾ ಸಂತೋಷಪಟ್ಟರೂ ಕತ್ತಲೆಯ ದಿನಗಳನ್ನು ನೆನಪಿಸಿಕೊಳ್ಳಲಿ, ಏಕೆಂದರೆ ಅಂಥ ದಿನಗಳು ಬಹಳ. ಮುಂದಾಗುವುದೆಲ್ಲವೂ ವ್ಯರ್ಥವೇ.

[9] ಯುವಕನೇ, ನಿನ್ನ ಯೌವನದಲ್ಲಿ ಸಂತೋಷಪಡು. ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ. ನೀನು ನಿನ್ನ ಮನಸ್ಸಿಗೆ ಬಂದಂತೆಯೂ ನಿನ್ನ ಕಣ್ಣಿನ ನೋಟದಂತೆಯೂ ನಡೆ. ಆದರೆ ಈ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯವಿಚಾರಿಸುವರು ಎಂದು ತಿಳಿದುಕೋ.

[10] ಆದ್ದರಿಂದ ನಿನ್ನ ಹೃದಯದಿಂದ ಚಿಂತೆಯನ್ನು ತೆಗೆದುಹಾಕು. ನಿನ್ನ ಶರೀರದಿಂದ ಕೆಟ್ಟದ್ದನ್ನು ದೂರಮಾಡು. ಯೌವನವೂ ಅದರ ಚೈತನ್ಯವೂ ಅಲ್ಪಕಾಲವೇ.

ಪ್ರಸಂಗಿ — Chapters