Skip to content
Opens in a new window
Listen to this chapter • 6:10

[1] “ಈಗ ಬಾ, ಯಾವುದು ಒಳ್ಳೆಯದು ಎಂಬುದನ್ನು ಸುಖಭೋಗಗಳಿಂದ ನಿನ್ನನ್ನು ಪರೀಕ್ಷಿಸುವೆನು,” ಎಂದು ನನ್ನ ಮನಸ್ಸಿನಲ್ಲಿ ಹೇಳಿಕೊಂಡೆ. ಆದರೆ ಅದೂ ಕೂಡ ವ್ಯರ್ಥವಾದದ್ದೆಂದು ರುಜುವಾತಾಯಿತು.

[2] “ನಗುವುದು ಮೂರ್ಖತನ, ಸುಖಭೋಗ ಏನನ್ನು ಸಾಧಿಸುತ್ತದೆ,” ಎಂದು ಹೇಳಿಕೊಂಡೆ.

[3] ಆಕಾಶದ ಕೆಳಗೆ ಮನುಷ್ಯರು ಅಲ್ಪಾಯುಷ್ಯದಲ್ಲಿ ಏನು ಮಾಡುವುದು ಹಿತ ಎಂದು ನಾನು ತಿಳಿದುಕೊಳ್ಳಲು ಬಯಸಿದೆ. ನನ್ನ ಮನಸ್ಸು ಇನ್ನೂ ಜ್ಞಾನದಿಂದಿರುವಾಗಲೇ ದ್ರಾಕ್ಷಾರಸದಿಂದ ಸಂತೋಷ ಪಡೋಣ, ಮೂರ್ಖತನವನ್ನು ಅಪ್ಪಿಕೊಳ್ಳೋಣ ಎಂದುಕೊಂಡೆ.

[4] ನಾನು ಮಹಾ ಯೋಜನೆಗಳನ್ನು ನಡೆಸಿದೆನು: ನಾನು ನನಗಾಗಿ ಮನೆಗಳನ್ನು ಕಟ್ಟಿಸಿಕೊಂಡೆನು. ನಾನು ದ್ರಾಕ್ಷಿತೋಟಗಳನ್ನು ನೆಟ್ಟೆನು.

[5] ನಾನು ಉದ್ಯಾನವನಗಳನ್ನೂ, ತೋಟಗಳನ್ನೂ ಮಾಡಿಕೊಂಡು, ಅವುಗಳಲ್ಲಿ ಸಕಲ ವಿಧವಾದ ಹಣ್ಣಿನ ವೃಕ್ಷಗಳನ್ನು ನೆಟ್ಟೆನು.

[6] ಬೆಳೆಯುವ ಗಿಡಗಳ ತೋಪುಗಳಿಗೆ ನೀರು ಹಾಯಿಸುವುದಕ್ಕೆ ನಾನು ಜಲಾಶಯಗಳನ್ನು ಮಾಡಿಕೊಂಡೆನು.

[7] ನನಗೆ ದಾಸ, ದಾಸಿಯರನ್ನು ಕೊಂಡುಕೊಂಡೆನು. ನನ್ನ ಮನೆಯಲ್ಲಿ ಜನಿಸಿದ ಇತರ ಗುಲಾಮರು ಸಹ ಇದ್ದರು. ನನಗಿಂತ ಮುಂಚೆ ಯೆರೂಸಲೇಮಿನಲ್ಲಿ, ಇದ್ದವರೆಲ್ಲರಿಗಿಂತಲೂ ಹೆಚ್ಚಾಗಿ ಬಹಳ ಸಂಪತ್ತು ಉಳ್ಳವನಾಗಿ ಹೆಚ್ಚು ದನಕುರಿಗಳ ಮಂದೆಗಳನ್ನು ಹೊಂದಿದೆನು.

[8] ನಾನು ಬೆಳ್ಳಿಬಂಗಾರಗಳನ್ನು, ಅರಸರ ಮತ್ತು ಪ್ರಾಂತಗಳ ವಿಶೇಷ ಸಂಪತ್ತನ್ನು ಸಂಗ್ರಹಿಸಿಕೊಂಡೆನು. ಗಾಯಕ, ಗಾಯಕಿಯರನ್ನು ಮತ್ತು ಮನುಷ್ಯರಿಗೆ ಭೋಗವಿಲಾಸಕ್ಕಾಗಿ ಅನೇಕ ಉಪಪತ್ನಿಯರನ್ನು ಸಂಪಾದಿಸಿಕೊಂಡೆನು.

[9] ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಹೆಚ್ಚು ಅಭಿವೃದ್ಧಿಹೊಂದಿ, ಶ್ರೀಮಂತನಾದೆನು. ಇದೆಲ್ಲದರಲ್ಲಿ ನನ್ನ ಜ್ಞಾನವು ನನ್ನಲ್ಲಿ ನೆಲೆಯಾಗಿತ್ತು.

[10] ನನ್ನ ಕಣ್ಣು ಬಯಸಿದ್ದೆಲ್ಲವನ್ನು ಅದರಿಂದ ಹಿಂತೆಗೆಯಲಿಲ್ಲ, ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ. ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು. ಇದು ನನ್ನ ಎಲ್ಲಾ ಪ್ರಯಾಸದಿಂದ ನನಗೆ ಬಂದ ಬಹುಮಾನ.

[11] ನನ್ನ ಕೈಗಳು ನಡೆಸಿದವುಗಳೆಲ್ಲವನ್ನೂ ನಾನು ಸಾಧಿಸಲು ಪ್ರಯಾಸಪಟ್ಟದ್ದನ್ನೂ ಪರಿಶೀಲಿಸಿ ನೋಡಿದೆ. ಗಾಳಿಯನ್ನು ಬೆನ್ನಟ್ಟಿದಂತೆ ಎಲ್ಲವೂ ವ್ಯರ್ಥವಾಗಿತ್ತು. ಸೂರ್ಯನ ಕೆಳಗೆ ಯಾವುದೂ ಲಾಭಕರವಾಗಿ ಕಾಣಲಿಲ್ಲ.

[12] ಅನಂತರ ಜ್ಞಾನವನ್ನೂ ಮನಗುಂದುವಿಕೆಯನ್ನೂ ಮೂಡತೆಯನ್ನೂ ಮತ್ತೆ ಯೋಚಿಸುವುದಕ್ಕೆ ನಾನು ತಿರುಗಿಕೊಂಡೆನು. ಈಗಾಗಲೇ ಮಾಡಿದ್ದನ್ನು ಬಿಟ್ಟು, ಅರಸನ ತರುವಾಯ ಬರುವವನು ಹೊಸದಾಗಿ ಏನು ಮಾಡಬಲ್ಲನು?

[13] ಆಗ ಬೆಳಕು ಕತ್ತಲೆಗಿಂತ ಶ್ರೇಷ್ಠವಾಗಿರುವಂತೆ, ಜ್ಞಾನವು ಮೂಢತನಕ್ಕಿಂತ ಶ್ರೇಷ್ಠವಾಗಿದೆ ಎಂದು ನಾನು ಕಂಡೆನು.

[14] ಜ್ಞಾನಿಯ ಕಣ್ಣು ಅವನ ತಲೆಯಲ್ಲಿರುತ್ತದೆ. ಆದರೆ ಮೂಢನು ಕತ್ತಲೆಯಲ್ಲಿ ನಡೆಯುತ್ತಾನೆ. ಇವರಿಬ್ಬರಿಗೂ ಒಂದೇ ಗತಿಯು ಸಂಭವಿಸುವುದೆಂದೂ ನಾನು ಗ್ರಹಿಸಿಕೊಂಡೆನು.

[15] ಆಗ ನಾನು ನನ್ನ ಮನಸ್ಸಿನಲ್ಲಿ, “ಮೂಢನಿಗೆ ಸಂಭವಿಸುವ ಗತಿಯೂ ನನಗೂ ಸಂಭವಿಸುತ್ತದೆ. ನಾನು ಜ್ಞಾನಿಯಾಗುವುದರಿಂದ ಲಾಭವೇನು?” “ಇದು ಸಹ ವ್ಯರ್ಥವೇ,” ಎಂದುಕೊಂಡೆನು.

[16] ಮೂಢನನ್ನು ಹೇಗೋ ಹಾಗೆಯೇ ಜ್ಞಾನಿಯನ್ನೂ ಜನರು ಬಹಳ ದಿನಗಳವರೆಗೆ ಜ್ಞಾಪಕಮಾಡಿಕೊಳ್ಳುವುದಿಲ್ಲ. ಇವರಿಬ್ಬರನ್ನೂ ಮರೆತುಹೋದ ದಿನಗಳು ಈಗಾಗಲೇ ಬಂದಿವೆ. ಮೂಢನಂತೆ ಜ್ಞಾನಿಯೂ ಸಹ ಸಾಯಲೇಬೇಕು.

[17] ಸೂರ್ಯನ ಕೆಳಗೆ ನಡೆಯುವ ಕಾರ್ಯವು ನನಗೆ ದುಃಖಕರವಾಗಿ ತೋರಿತು. ಆದಕಾರಣ ನಾನು ನನ್ನ ಜೀವನವನ್ನು ಹಗೆ ಮಾಡಿದೆನು. ಗಾಳಿಯನ್ನು ಬೆನ್ನಟ್ಟುವಂತೆ ಎಲ್ಲವೂ ವ್ಯರ್ಥವಾಗಿದೆ.

[18] ನನ್ನ ತರುವಾಯ ಬರುವ ಮನುಷ್ಯನಿಗೆ ನಾನು ಇದನ್ನೆಲ್ಲಾ ಬಿಟ್ಟುಬಿಡಬೇಕಾದ್ದರಿಂದ ಸೂರ್ಯನ ಕೆಳಗೆ ಪಟ್ಟ ನನ್ನ ಎಲ್ಲಾ ಪ್ರಯಾಸವನ್ನು ನಾನು ಹಗೆ ಮಾಡಿದೆನು.

[19] ನನ್ನ ನಂತರ ಬರುವವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಆದರೂ ನಾನು ಪಟ್ಟ ಎಲ್ಲಾ ಪ್ರಯಾಸದ ಮೇಲೆಯೂ ಸೂರ್ಯನ ಕೆಳಗೆ ನಾನು ತೋರ್ಪಡಿಸಿಕೊಂಡದರ ಮೇಲೆಯೂ ಅವನು ಆಳುವನು. ಇದು ವ್ಯರ್ಥವೇ.

[20] ಆದ್ದರಿಂದ ಸೂರ್ಯನ ಕೆಳಗೆ ಪ್ರಯಾಸಪಟ್ಟ ಎಲ್ಲಾ ಪ್ರಯಾಸದ ವಿಷಯವಾಗಿ, ನನ್ನ ಹೃದಯವು ನಿರಾಶೆಗೊಳ್ಳಲು ಪ್ರಾರಂಭಿಸಿತು.

[21] ಒಬ್ಬ ಮನುಷ್ಯನು ಜ್ಞಾನದಲ್ಲಿಯೂ ತಿಳುವಳಿಕೆಯಲ್ಲಿಯೂ ಕೌಶಲಯುತವಾಗಿಯೂ ತನ್ನ ಕೆಲಸ ಮಾಡಬಹುದು. ಅನಂತರ ತನಗಿರುವುದೆಲ್ಲವನ್ನು ಪ್ರಯಾಸಪಡದೆ ಇದ್ದ ಮನುಷ್ಯನಿಗೆ ಪಾಲಾಗಿ ಅವನು ಬಿಟ್ಟುಬಿಡಬೇಕಾಗುತ್ತದೆ. ಇದೂ ವ್ಯರ್ಥವೂ ದೊಡ್ಡ ವ್ಯಸನವೂ ಆಗಿವೆ.

[22] ಸೂರ್ಯನ ಕೆಳಗೆ ತಾನು ಪ್ರಯಾಸಪಟ್ಟ ತನ್ನ ಹೃದಯದ ಆಯಾಸಕ್ಕಾಗಿಯೂ ತನ್ನ ಎಲ್ಲಾ ಪ್ರಯಾಸಕ್ಕಾಗಿಯೂ ಮನುಷ್ಯನಿಗೆ ಏನು ಸಿಕ್ಕುತ್ತದೆ?

[23] ಅವನ ದಿನಗಳೆಲ್ಲಾ ವ್ಯಸನವೇ. ಅವನ ಪ್ರಯಾಸವು ದುಃಖವೇ. ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ವಿಶ್ರಾಂತಿಯಿಲ್ಲ. ಇದೂ ಕೂಡ ವ್ಯರ್ಥವೇ.

[24] ಒಬ್ಬ ವ್ಯಕ್ತಿ ತನ್ನ ಪ್ರಯಾಸದಲ್ಲಿ ತೃಪ್ತಿಹೊಂದುವಂತೆ ತಿಂದು ಕುಡಿಯುವುದಕ್ಕಿಂತ ಶ್ರೇಷ್ಠವಾದದ್ದು ಮನುಷ್ಯನಿಗೆ ಯಾವುದೂ ಇಲ್ಲ. ಇದೂ ಕೂಡ ದೇವರ ಕೈಯಿಂದಲೇ ಆಗುತ್ತದೆ ಎಂದು ನಾನು ಕಂಡೆನು.

[25] ದೇವರಿಲ್ಲದೆ ಯಾರಿಗೆ ಊಟ ದೊರಕಿತು? ದೇವರಿಲ್ಲದೆ ಯಾರು ಸುಖಾನುಭವ ಹೊಂದುವರು?

[26] ಏಕೆಂದರೆ ದೇವರು ಮೆಚ್ಚಿದವರಿಗೆ ಅವರು ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾರೆ. ಆದರೆ ದೇವರು ತಮಗೆ ಮೆಚ್ಚುಗೆಯಾದವನಿಗೆ ಕೊಡತಕ್ಕ ಐಶ್ವರ್ಯವನ್ನು ಕೂಡಿಸಿಡುವ ಪ್ರಯಾಸವನ್ನು ಮಾತ್ರ ಪಾಪಿಗೆ ಕೊಡುತ್ತಾರೆ. ಏಕೆಂದರೆ ಇದು ಸಹ ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ವ್ಯರ್ಥ.

ಪ್ರಸಂಗಿ — Chapters