[1] ಪ್ರತಿಯೊಂದಕ್ಕೂ ಒಂದೊಂದು ಸಮಯವಿದೆ. ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ.
[2] ಹುಟ್ಟುವುದಕ್ಕೆ ಒಂದು ಸಮಯ, ಸಾಯುವುದಕ್ಕೆ ಒಂದು ಸಮಯ. ನೆಡುವುದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕುವುದಕ್ಕೆ ಒಂದು ಸಮಯ.
[3] ಕೊಲ್ಲುವುದಕ್ಕೆ ಒಂದು ಸಮಯ, ಸ್ವಸ್ಥ ಮಾಡುವುದಕ್ಕೆ ಒಂದು ಸಮಯ, ಕೆಡವಿಬಿಡುವುದಕ್ಕೆ ಒಂದು ಸಮಯ, ಕಟ್ಟುವುದಕ್ಕೆ ಒಂದು ಸಮಯ.
[4] ಅಳುವುದಕ್ಕೆ ಒಂದು ಸಮಯ, ನಗುವುದಕ್ಕೆ ಒಂದು ಸಮಯ. ಗೋಳಾಡುವುದಕ್ಕೆ ಒಂದು ಸಮಯ, ಕುಣಿದಾಡುವುದಕ್ಕೆ ಒಂದು ಸಮಯ.
[5] ಕಲ್ಲುಗಳನ್ನು ಎಸೆಯುವುದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸುವುದಕ್ಕೆ ಒಂದು ಸಮಯ. ಅಪ್ಪಿಕೊಳ್ಳುವುದಕ್ಕೆ ಒಂದು ಸಮಯ, ತಡೆದಿರುವುದಕ್ಕೂ ಒಂದು ಸಮಯ.
[6] ಗಳಿಸುವುದಕ್ಕೆ ಒಂದು ಸಮಯ, ಕಳೆದುಕೊಳ್ಳುವುದಕ್ಕೆ ಒಂದು ಸಮಯ. ಕಾಪಾಡುವುದಕ್ಕೆ ಒಂದು ಸಮಯ, ಬಿಸಾಡುವುದಕ್ಕೆ ಒಂದು ಸಮಯ.
[7] ಹರಿಯುವುದಕ್ಕೆ ಒಂದು ಸಮಯ, ಹೊಲಿಯುವುದಕ್ಕೆ ಒಂದು ಸಮಯ. ಸುಮ್ಮನೆ ಇರುವುದಕ್ಕೆ ಒಂದು ಸಮಯ, ಮಾತಾಡುವುದಕ್ಕೆ ಒಂದು ಸಮಯ.
[8] ಪ್ರೀತಿಸುವುದಕ್ಕೆ ಒಂದು ಸಮಯ, ದ್ವೇಷಿಸುವುದಕ್ಕೆ ಒಂದು ಸಮಯ. ಯುದ್ಧದ ಸಮಯ, ಸಮಾಧಾನದ ಸಮಯ, ಹೀಗೆ ಒಂದೊಂದಕ್ಕೂ ತಕ್ಕ ಸಮಯವಿದೆ.
[9] ಹಾಗಾದರೆ, ಪ್ರಯಾಸ ಪಡುವುದರಲ್ಲಿ ದುಡಿಯುವವನಿಗೆ ಲಾಭವೇನಿದೆ?
[10] ದೇವರು ಮಾನವ ಜನಾಂಗದ ಮೇಲೆ ಹೊರಿಸಿರುವ ಭಾರವನ್ನು ನಾನು ನೋಡಿದ್ದೇನೆ.
[11] ದೇವರು ಪ್ರತಿಯೊಂದನ್ನು ತಮ್ಮ ಸೂಕ್ತ ಸಮಯದಲ್ಲಿ ಸುಂದರವಾಗಿ ನಿರ್ಮಿಸಿದ್ದಾರೆ. ಜನರ ಹೃದಯದಲ್ಲಿ ನಿತ್ಯತೆಯನ್ನು ದೇವರೇ ಇಟ್ಟಿದ್ದಾರೆ. ಆದರೂ ಆದಿಯಿಂದ ಅಂತ್ಯದವರೆಗೂ ದೇವರು ಏನು ಮಾಡಿದ್ದಾರೆಂದು ಯಾರಿಗೂ ಗ್ರಹಿಸಲು ಸಾಧ್ಯವಿಲ್ಲ.
[12] ಜನರು ತಮ್ಮ ಜೀವಮಾನದಲ್ಲಿ ಸಂತೋಷವಾಗಿದ್ದು ಒಳ್ಳೆಯದನ್ನು ಮಾಡುವುದಕ್ಕಿಂತ ಉತ್ತಮವಾದದ್ದೇನೂ ಇಲ್ಲವೆಂದು ನಾನು ಬಲ್ಲೆನು.
[13] ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ಸೇವಿಸಿ, ತನ್ನ ಎಲ್ಲಾ ಪ್ರಯಾಸಗಳಲ್ಲಿ ಸುಖವನ್ನು ಅನುಭವಿಸುವುದು ದೇವರ ದಾನದಿಂದಲೇ.
[14] ದೇವರು ಮಾಡುವ ಕಾರ್ಯವೆಲ್ಲವೂ ಶಾಶ್ವತವಾಗಿರುವುದೆಂದು ನಾನು ಬಲ್ಲೆನು; ಅದಕ್ಕೆ ಯಾವುದನ್ನೂ ಕೂಡಿಸಲಾಗದು ಮತ್ತು ಯಾವುದನ್ನೂ ತೆಗೆಯಲಾಗದು. ತಮ್ಮ ಸನ್ನಿಧಿಯಲ್ಲಿ ಮನುಷ್ಯರು ಭಯಭಕ್ತಿಯಿಂದ ಜೀವಿಸಬೇಕೆಂದು ದೇವರು ಇದನ್ನು ಮಾಡಿದ್ದಾರೆ.
[15] ಇರುವಂಥದ್ದು ಈಗಾಗಲೇ ಇತ್ತು, ಬರುವಂಥದ್ದು ಆಗಲೇ ಇದೆ. ಗತಿಸಿಹೋದದ್ದನ್ನು ದೇವರು ಪುನಃಸ್ಥಾಪಿಸುವರು.
[16] ಇದಕ್ಕಿಂತಲೂ ಬೇರೆಯಾದದ್ದನ್ನು ಸೂರ್ಯನ ಕೆಳಗೆ ನೋಡಿದೆನು: ನ್ಯಾಯತೀರ್ಪಿನ ಸ್ಥಳದಲ್ಲಿ ದುಷ್ಕೃತ್ಯ ಇತ್ತು. ನೀತಿಯ ಸ್ಥಾನದಲ್ಲಿಯೂ ದುಷ್ಟತ್ವ ಇತ್ತು.
[17] ನಾನು ನನ್ನ ಹೃದಯದಲ್ಲಿ ಹೀಗೆ ಅಂದುಕೊಂಡೆನು, “ನೀತಿವಂತರನ್ನೂ ದುಷ್ಟರನ್ನೂ ದೇವರು ನ್ಯಾಯತೀರಿಸುವನು. ಏಕೆಂದರೆ ಪ್ರತಿಯೊಂದು ಉದ್ದೇಶಕ್ಕೂ, ಪ್ರತಿಯೊಂದು ಕೆಲಸಕ್ಕೂ ಪರೀಕ್ಷೆಯ ಸಮಯವಿದೆ.”
[18] ಮತ್ತೆ ನನ್ನ ಮನಸ್ಸಿನಲ್ಲಿ ಯೋಚಿಸಿದೆ, “ಮನುಷ್ಯರು ಮೃಗಗಳಂತೆ ಇದ್ದಾರೆಂದು ತಿಳಿದುಕೊಳ್ಳಲು ದೇವರು ಅವರನ್ನು ಪರೀಕ್ಷಿಸುತ್ತಾರೆ.
[19] ಏಕೆಂದರೆ ಮೃಗಗಳಿಗೆ ಸಂಭವಿಸುವುದು ಮನುಷ್ಯರಿಗೂ ಸಂಭವಿಸುತ್ತದೆ. ಇಬ್ಬರಿಗೂ ಒಂದೇ ಸಂಗತಿ ಸಂಭವಿಸುತ್ತದೆ. ಒಂದು ಹೇಗೆ ಸಾಯುತ್ತದೋ ಹಾಗೆ ಇನ್ನೊಂದೂ ಸಾಯುತ್ತದೆ. ಎಲ್ಲಕ್ಕೂ ಒಂದೇ ಪ್ರಾಣ ಇದೆ. ಆ ರೀತಿಯಲ್ಲಿ ಮೃಗಕ್ಕಿಂತ ಮನುಷ್ಯನಿಗೆ ಹೆಚ್ಚು ಶ್ರೇಷ್ಠತೆ ಇಲ್ಲ. ಎಲ್ಲವೂ ವ್ಯರ್ಥ.
[20] ಎಲ್ಲವೂ ಒಂದೇ ಸ್ಥಳಕ್ಕೆ ಹೋಗುತ್ತವೆ. ಎಲ್ಲವೂ ಮಣ್ಣಿನಿಂದ ಆದವು. ಎಲ್ಲವೂ ಮಣ್ಣಿಗೆ ಸೇರುತ್ತವೆ.
[21] ಮನುಷ್ಯನ ಆತ್ಮವು ಮೇಲಕ್ಕೆ ಹೋಗುತ್ತದೆ ಎಂದೂ ಮೃಗದ ಪ್ರಾಣವು ಭೂಮಿಯ ಕೆಳಗೆ ಹೋಗುತ್ತದೆಂದೂ ಯಾರು ತಿಳಿದಾರು?”
[22] ಆದಕಾರಣ ಮನುಷ್ಯನು ತನ್ನ ಕೆಲಸ ಕಾರ್ಯಗಳಲ್ಲಿ ಆನಂದಿಸುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲವೆಂದು ನಾನು ನೋಡಿದೆನು. ಏಕೆಂದರೆ ಇದೇ ಅವನ ಪಾಲು. ಆದ್ದರಿಂದ ತನ್ನ ಜೀವಮಾನದ ನಂತರ ಸಂಭವಿಸುವುದನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?