Skip to content
Opens in a new window
Listen to this chapter • 2:59

[1] ಕಷ್ಟದ ದಿನಗಳು ಬರುವುದಕ್ಕೆ ಮೊದಲು, “ಇವುಗಳಲ್ಲಿ ನನಗೆ ಸಂತೋಷವಿಲ್ಲ,” ಎಂದು ನೀನು ಹೇಳುವ ವರ್ಷಗಳು ಸಮೀಪಿಸುವುದಕ್ಕೆ ಮೊದಲು, ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ದೇವರನ್ನು ಸ್ಮರಿಸು.

[2] ಸೂರ್ಯ ಚಂದ್ರ ನಕ್ಷತ್ರಗಳೂ ನಿನಗೆ ಮೊಬ್ಬಾಗಿ, ಮಳೆಯ ಮೋಡಗಳು ಮತ್ತೆ ಬರುವುದಕ್ಕಿಂತ ಮೊದಲು ದೇವರನ್ನು ಸ್ಮರಿಸು.

[3] ಆ ದಿನದಲ್ಲಿ ಮನೆ ಕಾಯುವವರು ನಡುಗುವರು. ಬಲವಾದ ಮನುಷ್ಯರು ಸಹ ತಾವಾಗಿಯೇ ಬಗ್ಗುವರು. ಅರೆಯುವವರು ಕೆಲವರೇ ಉಳಿದಿರುವುದರಿಂದ ಸುಮ್ಮನಿರುವರು. ಕಿಟಕಿಗಳಿಂದ ಹೊರಗೆ ನೋಡುವವರು ಮಂಕಾಗುವರು.

[4] ಬೀದಿ ಬಾಗಿಲುಗಳು ಮುಚ್ಚಿರುವುವು, ಅರೆಯುವ ಶಬ್ದವು ಕಡಿಮೆಯಾಗುವುದು; ಪಕ್ಷಿಯ ಶಬ್ದವಾದಾಗ ಎದ್ದೇಳುವುದು ತಡವಾಗುವುದು. ಮುಂಜಾನೆಯ ಗಾನಸ್ವರ ಮಂದವಾಗುವುದು.

[5] ಎತ್ತರವನ್ನು ಕಂಡು ಹೆದರಿಕೆಯಾಗುವುದು. ದಾರಿಯ ಅಪಾಯಗಳ ಬಗ್ಗೆ ಅಂಜಿಕೆಯಾಗುವುದು. ಬಾದಾಮಿಯ ಮರದಂತೆ ಹೂವು ಬಿಡುವುದು. ಮಿಡತೆಯು ಸಹ ಭಾರಾವಾಗಿರುವುದು. ಆಸೆ ಕುಂದಿಹೋಗುವುದು. ಈ ರೀತಿಯಾಗಿ ಮನುಷ್ಯನು ತನ್ನ ನಿತ್ಯ ಗೃಹಕ್ಕೆ ಹೊರಟು ಹೋಗುವರು. ಗೋಳಾಡುವವರು ಬೀದಿಯಲ್ಲಿ ತಿರುಗಾಡುವರು.

[6] ಬೆಳ್ಳಿಯಂತ ಸರ ಕಿತ್ತುಹೋಗುವುದು, ಬಂಗಾರದಂತ ಬಟ್ಟಲು ಜಜ್ಜಿ ಹೋಗುವುದು. ಮಣ್ಣಿನ ಮಡಕೆಯು ಬುಗ್ಗೆಯ ಹತ್ತಿರ ಒಡೆದು ಹೋಗುವುದು. ಬಾವಿಯ ರಾಟೆ ಮುರಿಯುವುದು.

[7] ಆಮೇಲೆ ಮಣ್ಣಿನ ದೇಹ ಅದು ಇದ್ದ ಹಾಗೆಯೇ ಭೂಮಿಗೆ ಸೇರುವುದು. ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂದಿರುಗುವುದು.

[8] “ವ್ಯರ್ಥ, ವ್ಯರ್ಥವೇ! ಎಲ್ಲವೂ ವ್ಯರ್ಥವೇ!” ಎಂದು ಪ್ರಸಂಗಿ ಹೇಳುತ್ತಾನೆ.

[9] ಇದಲ್ಲದೆ ಜ್ಞಾನವಂತ ಪ್ರಸಂಗಿಯು ಇನ್ನೂ ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು. ಅನೇಕ ಜ್ಞಾನೋಕ್ತಿಗಳನ್ನು ಅವನು ಪರೀಕ್ಷಿಸಿ, ವಿಚಾರಿಸಿ ಕ್ರಮಪಡಿಸಿದನು.

[10] ಪ್ರಸಂಗಿಯು ಸೂಕ್ತ ವಾಕ್ಯಗಳನ್ನು ಹುಡುಕಿ ಕಂಡುಹಿಡಿದನು. ಹಾಗೆ ಬರೆದವುಗಳು ಯಥಾರ್ಥ ಮತ್ತು ಸತ್ಯವಾದ ಮಾತುಗಳು.

[11] ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳ ಹಾಗಿರುತ್ತವೆ. ಅವರು ಸಂಗ್ರಹಿಸಿದ ವಚನಗಳು ಒಬ್ಬ ಆತ್ಮಿಕ ಕುರುಬನಿಂದ ನೆಟ್ಟ ಮೊಳೆಗಳ ಹಾಗೆ ಕೊಡಲಾಗಿವೆ.

[12] ನನ್ನ ಮಗುವೇ, ಇವುಗಳನ್ನಲ್ಲದೇ, ನೀನು ಎಚ್ಚರಿಕೆಯಿಂದ ಇರಬೇಕಾದ ವಿಷಯಗಳು ಇನ್ನೂ ಇವೆ. ಬಹಳ ಪುಸ್ತಕಗಳ ರಚನೆಗೆ ಅಂತ್ಯವಿಲ್ಲ. ಅತಿಯಾದ ಅಭ್ಯಾಸವು ದೇಹಕ್ಕೆ ಆಯಾಸ.

[13] ಈಗ ನಾವು ಎಲ್ಲಾ ವಿಷಯವನ್ನೂ ಕೇಳಿ ಮುಗಿಯಿತು. ದೇವರಿಗೆ ಭಯಪಡು ಮತ್ತು ದೇವರ ಆಜ್ಞೆಗಳನ್ನು ಪಾಲಿಸು. ಇದೇ ಮನುಷ್ಯನ ಪ್ರಮುಖ ಕರ್ತವ್ಯ.

[14] ಏಕೆಂದರೆ ಒಳ್ಳೆಯದಾಗಿರಲಿ, ಕೆಟ್ಟದ್ದಾಗಿರಲಿ, ದೇವರು ಆ ಎಲ್ಲಾ ಕಾರ್ಯಗಳನ್ನೂ ಪ್ರತಿಯೊಂದು ರಹಸ್ಯವನ್ನೂ ನ್ಯಾಯವಿಚಾರಣೆಗೆ ತರುವರು.

ಪ್ರಸಂಗಿ — Chapters