[1] ಸತ್ತ ನೊಣಗಳು ಸುಗಂಧ ತೈಲವನ್ನು ದುರ್ವಾಸನೆಗೆ ಒಳಪಡಿಸುತ್ತದೆ. ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮಾನಗಳನ್ನು ಕೆಡಿಸಿಬಿಡುತ್ತದೆ.
[2] ಜ್ಞಾನಿಯ ಹೃದಯವು ಬಲಗಡೆ ಸಾಗಿದರೆ, ಮೂರ್ಖನ ಹೃದಯವು ಎಡಗಡೆ ಸಾಗುವುದು.
[3] ಮೂರ್ಖನು ಮಾರ್ಗದಲ್ಲಿ ನಡೆಯುವಾಗಲೂ, ತಾನು ಅರಿವಿಲ್ಲದ ಮೂರ್ಖನೆಂದು ಪ್ರತಿಯೊಬ್ಬರಿಗೂ ಪ್ರಕಟಿಸುತ್ತಾನೆ.
[4] ಅಧಿಕಾರಿಯು ನಿನಗೆ ವಿರುದ್ಧವಾಗಿ ಸಿಟ್ಟುಗೊಂಡರೆ, ನಿನ್ನ ಉದ್ಯೋಗವನ್ನು ಬಿಟ್ಟುಬಿಡಬೇಡ. ಏಕೆಂದರೆ ತಾಳ್ಮೆಯು ದೊಡ್ಡ ಅಪರಾಧಗಳನ್ನು ಶಾಂತಪಡಿಸುತ್ತದೆ.
[5] ಮತ್ತೊಂದು ವ್ಯಸನವನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ. ಅದು ಆಳುವವರಿಂದ ಬರುವ ತಪ್ಪಿನಿಂದಾದದ್ದು.
[6] ಅದು ಯಾವುದೆಂದರೆ, ಮೂರ್ಖರನ್ನು ಉನ್ನತ ಪದವಿಗೆ ನೇಮಿಸುವುದು. ಘನವಂತರನ್ನು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವಂತೆ ಮಾಡುವುದು.
[7] ಕುದುರೆಗಳ ಮೇಲೆ ಸವಾರಿ ಮಾಡುವ ಸೇವಕರನ್ನೂ ಅಧಿಕಾರಿಗಳು ಸೇವಕರ ಹಾಗೆ ನಡೆದುಕೊಂಡು ಹೋಗುವುದನ್ನೂ ನಾನು ನೋಡಿದ್ದೇನೆ.
[8] ಗುಂಡಿಯನ್ನು ಅಗೆಯುವವನೇ ಅದರಲ್ಲಿ ಬೀಳುವನು. ಗೋಡೆಯನ್ನು ಒಡೆಯುವವನನ್ನು ಹಾವು ಕಡಿಯುವುದು.
[9] ಗಣಿಯಿಂದ ಬಂಡೆಗಳನ್ನು ಸೀಳುವವನು ಗಾಯಗೊಳ್ಳುವನು. ಮರಕಡಿಯುವವನು ಅದರಿಂದಲೇ ಅಪಾಯಕ್ಕೊಳಗಾಗುವನು.
[10] ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ, ಹೆಚ್ಚು ಬಲವನ್ನು ಪ್ರಯೋಗಿಸಬೇಕಾಗುವುದು, ಆದರೆ ಜ್ಞಾನವೇ ಯಶಸ್ಸನ್ನು ತರುತ್ತದೆ.
[11] ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ, ಹಾವಾಡಿಗನಿಗೆ ಏನು ಪ್ರಯೋಜನ?
[12] ಜ್ಞಾನಿಯ ಮಾತುಗಳು ಹಿತಕರ. ಆದರೆ ಬುದ್ಧಿಹೀನನ ಮಾತುಗಳು ಅವನಿಗೆ ವಿನಾಶಕರ.
[13] ಅವನ ಮಾತುಗಳು ಆರಂಭದಲ್ಲಿ ಮೂಢತನವಾಗಿರುವುದು. ಅವನ ಮಾತಿನ ಅಂತ್ಯವು ಹುಚ್ಚುತನವಾಗಿರುವುದು.
[14] ಮೂಢನು ಮಾತುಗಳನ್ನು ಹೆಚ್ಚಿಸುತ್ತಾನೆ. ಆದರೂ ಅವನು ಭವಿಷ್ಯ ಏನೆಂದು ತಿಳಿಯನು. ಅವನ ತರುವಾಯ ಆಗುವುದನ್ನೂ ಅವನಿಗೆ ತಿಳಿಸುವವರು ಇಲ್ಲ.
[15] ಮೂಢರ ಕಷ್ಟವು ಅವರನ್ನು ದಣಿಸುತ್ತದೆ. ನಗರಕ್ಕೆ ಹೇಗೆ ಹೋಗಬೇಕೆಂದು ಸಹ ಅವನಿಗೆ ತಿಳಿಯದು.
[16] ಬಾಲಕನಾಗಿದ್ದವನು ದೇಶಕ್ಕೆ ಅರಸನಾಗಿದ್ದರೆ, ನಾಯಕರೆಲ್ಲರು ಬೆಳಿಗ್ಗೆಯೇ ಔತಣಕ್ಕೆ ಕೂತುಕೊಂಡರೆ ಅಯ್ಯೋ ಕಷ್ಟ!
[17] ಶ್ರೇಷ್ಠ ಹಿನ್ನೆಲೆಯವನು ದೇಶಕ್ಕೆ ಅರಸನಾದರೆ, ರಾಜಕುಮಾರರು ಕುಡುಕರಾಗುವುದಕ್ಕೆ ಬದಲು, ಸರಿಯಾದ ಸಮಯದಲ್ಲಿ ಶಕ್ತಿಗಾಗಿ ಊಟ ಮಾಡಿದರೆ ಅದು ದೇಶಕ್ಕೆ ಆಶೀರ್ವಾದ.
[18] ಸೋಮಾರಿತನದಿಂದ ಮನೆ ಕುಸಿಯುತ್ತದೆ. ಜೋಲುಗೈಯಿಂದ ಮನೆ ಸೋರುತ್ತದೆ.
[19] ವಿನೋದಕ್ಕಾಗಿ ಔತಣ ಮಾಡುತ್ತಾರೆ, ಆನಂದಕ್ಕಾಗಿ ದ್ರಾಕ್ಷಾರಸ ಕುಡಿಯುತ್ತಾರೆ; ಎಲ್ಲವನ್ನೂ ಒದಗಿಸಿಕೊಡುವುದಕ್ಕಾಗಿ ಹಣವು.
[20] ನಿನ್ನ ಆಲೋಚನೆಯಲ್ಲಿಯೂ ಅರಸನನ್ನು ನಿಂದಿಸಬೇಡ. ನೀನು ಮಲಗುವ ಕೋಣೆಯಲ್ಲಿ ಐಶ್ವರ್ಯವಂತರನ್ನು ಶಪಿಸಬೇಡ. ಏಕೆಂದರೆ ಆಕಾಶದ ಪಕ್ಷಿಗಳು ನಿನ್ನ ಮಾತನ್ನು ತೆಗೆದುಕೊಂಡು ಹೋಗಬಹುದು. ಹಾರುವ ಪಕ್ಷಿ ನಿನ್ನ ಸುದ್ದಿಯನ್ನು ತಿಳಿಸಬಹುದು.