Skip to content
Opens in a new window
Listen to this chapter • 3:18

[1] ಜ್ಞಾನಿಯ ಹಾಗೆ ಇರುವವನು ಯಾರು? ವಿಷಯವನ್ನು ವಿವರಿಸಬಲ್ಲವರು ಯಾರು? ಜ್ಞಾನದಿಂದ ಒಬ್ಬನ ಮುಖವು ಪ್ರಕಾಶಗೊಳ್ಳುವುದು, ಒರಟು ಮುಖವು ಬದಲಾಗುವುದು.

[2] ದೇವರ ಮೇಲೆ ಇಟ್ಟ ಆಣೆಯ ನಿಮಿತ್ತ ರಾಜನ ಆಜ್ಞೆಯನ್ನು ಕೈಕೊಳ್ಳಬೇಕೆಂಬುದು ನನ್ನ ಬೋಧನೆ.

[3] ಅರಸನ ಸನ್ನಿಧಿಯಿಂದ ತೊಲಗಿಬಿಡಲು ಆತುರಪಡಬೇಡ. ದ್ರೋಹಕ್ಕೆ ಸೇರದಿರು. ಅವನು ಇಷ್ಟಬಂದಂತೆ ಮಾಡಬಲ್ಲನು.

[4] ಅರಸನ ಮಾತಿಗೆ ಅಧಿಕಾರವುಂಟು “ನೀನು ಏನು ಮಾಡುತ್ತಿರುವೆ?” ಎಂದು ಅವನನ್ನು ಯಾರು ತಾನೇ ಕೇಳಬಹುದು.

[5] ಅರಸನ ಆಜ್ಞೆಗಳನ್ನು ಕೈಕೊಳ್ಳುವವನು ಕೇಡನ್ನು ಅನುಭವಿಸುವುದಿಲ್ಲ. ಜ್ಞಾನಿಯ ಹೃದಯವು ಕಾಲ ಮತ್ತು ನ್ಯಾಯ ಎರಡನ್ನು ತಿಳಿದುಕೊಳ್ಳುತ್ತದೆ.

[6] ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲ ಮತ್ತು ಒಂದು ಕ್ರಮ ಇರುತ್ತದೆಯಲ್ಲವೇ, ಮನುಷ್ಯನು ಪಡುವ ಕಷ್ಟವು ಅವನಿಗೆ ಘೋರವಾಗಿದೆ.

[7] ಮುಂದೆ ಏನಾಗುವುದು ಯಾರಿಗೂ ಗೊತ್ತಿಲ್ಲ. ಮುಂದೆ ಆಗುವುದನ್ನು ಅವನಿಗೆ ವಿವರಿಸಬಲ್ಲವರು ಯಾರು?

[8] ಗಾಳಿಯನ್ನು ತಡೆಯುವ ಶಕ್ತಿಯು ಹೇಗೆ ಯಾರಿಗೂ ಇಲ್ಲವೋ, ಹಾಗೆಯೇ ತಮ್ಮ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇಲ್ಲ. ಯುದ್ಧ ಕಾಲದಲ್ಲಿ ಹೇಗೆ ವಿರಾಮ ದೊರೆಯುವುದಿಲ್ಲವೋ, ಹಾಗೆಯೇ ದುಷ್ಟನಿಗೆ ದುಷ್ಟತನದಿಂದ ಬಿಡುಗಡೆಯೇ ಇಲ್ಲ.

[9] ನಾನು ಇದನ್ನೆಲ್ಲಾ ನೋಡಿ, ಈ ಲೋಕದೊಳಗೆ ನಡೆಯುವ ಸಕಲ ಕಾರ್ಯಗಳನ್ನೂ ಪರಿಶೀಲಿಸಿದ್ದೇನೆ. ಒಬ್ಬ ಮನುಷ್ಯನು ಇನ್ನೊಬ್ಬನ ಮೇಲೆ ಅಧಿಕಾರ ನಡೆಸಿ ಅವನಿಗೆ ಹಾನಿಯನ್ನು ಉಂಟುಮಾಡುವ ಕಾಲವೂ ಇದೆ.

[10] ಇದಲ್ಲದೆ ದುಷ್ಟರಿಗೆ ಸಮಾಧಿಯಾಗುವುದನ್ನು ಕಂಡೆನು. ಅವರು ಸುಖವಾಗಿ ಗತಿಸುವರು. ಧಾರ್ಮಿಕರೋ ಪರಿಶುದ್ಧ ಸ್ಥಾನದಿಂದ ತೊಲಗಬೇಕಾಯಿತು. ಪಟ್ಟಣದಲ್ಲಿ ಅವರ ಜ್ಞಾಪಕವೇ ಇಲ್ಲವಾಯಿತು. ಇದೂ ವ್ಯರ್ಥವೇ.

[11] ಅಪರಾಧಕ್ಕೆ ವಿಧಿಸಿದ ದಂಡನೆಯು ಕೂಡಲೇ ನಡೆಯದಿರುವ ಕಾರಣ ಅಪರಾಧ ಮಾಡಬೇಕೆಂಬ ಯೋಚನೆಯು ಮನುಷ್ಯರ ಹೃದಯದಲ್ಲಿ ತುಂಬಿ ತುಳುಕುವುದು.

[12] ಪಾಪಿಯು ನೂರು ಸಲ ಅಧರ್ಮ ಮಾಡಿ ಬಹು ಕಾಲ ಬದುಕಿದರೂ, ದೇವರ ಮುಂದೆ ಹೆದರಿ, ಆತನಲ್ಲಿ ಭಯಭಕ್ತಿಯುಳ್ಳವರಿಗೆ ಒಳ್ಳೆಯದೇ ಆಗುವುದೆಂದು ಬಲ್ಲೆನು.

[13] ಆದರೆ ದುಷ್ಟನಿಗೆ ಒಳ್ಳೆಯದಾಗುವುದಿಲ್ಲ. ನೆರಳಿನಂತಿರುವ ಅವನ ದಿನಗಳು ಹೆಚ್ಚುವುದಿಲ್ಲ. ಏಕೆಂದರೆ ಅವನು ದೇವರಿಗೆ ಭಯಪಡುವುದಿಲ್ಲ.

[14] ಲೋಕದಲ್ಲಿ ನಡೆಯುವ ವ್ಯರ್ಥಕಾರ್ಯವು ಒಂದುಂಟು. ದುಷ್ಟರ ನಡತೆಗೆ ತಕ್ಕ ಗತಿಯು ಶಿಷ್ಟನಿಗೆ ಆಗುವುದು. ಶಿಷ್ಟರ ನಡತೆಗೆ ತಕ್ಕ ಗತಿಯು ದುಷ್ಟರಿಗೆ ಆಗುವುದು. ಇದು ವ್ಯರ್ಥವೆಂದು ನಾನು ಹೇಳಿದೆನು.

[15] ಆದುದರಿಂದಲೇ ನಾನು ಸಂತೋಷವನ್ನು ಹೊಗಳಿದೆನು. ಏಕೆಂದರೆ ಮನುಷ್ಯನಿಗೆ ಲೋಕದಲ್ಲಿ ಕುಡಿಯುವುದೂ, ತಿನ್ನುವುದೂ, ಸಂತೋಷಪಡುವುದೇ ಹೊರತು ಬೇರೇನೂ ಒಳ್ಳೆಯದು ಇಲ್ಲ. ಲೋಕದಲ್ಲಿ ದೇವರು ಅವನಿಗೆ ಅನುಗ್ರಹಿಸುವ ದಿನಗಳಲ್ಲಿ ಅವನು ಪಡುವ ಪ್ರಯಾಸದಲ್ಲಿ ಸಂತೋಷವೇ ಸೇರಿರುವುದು.

[16] ನಾನು ನನ್ನ ಹೃದಯದಲ್ಲಿ ಜ್ಞಾನವನ್ನು ಪಡೆಯಲು, ಲೋಕದಲ್ಲಿ ನಡೆಯುವುದನ್ನು ಅರಿತುಕೊಳ್ಳಲು ಪ್ರಯತ್ನಿಸಿದಾಗ, ನಾನು ಕಂಡುಕೊಂಡ ಸಂಗತಿಯೇನೆಂದರೆ, “ಒಬ್ಬನು ರಾತ್ರಿಹಗಲು ಕಣ್ಣುಗಳಿಗೆ ನಿದ್ರೆಕೊಡದೆ ಕೆಲಸ ಮಾಡಿದರೂ,

[17] ದೇವರ ಎಲ್ಲಾ ಕಾರ್ಯಗಳನ್ನೂ ಮತ್ತು ಲೋಕದಲ್ಲಿ ಮಾಡುವ ಕೆಲಸಗಳನ್ನೂ ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮನುಷ್ಯನು ಅದನ್ನು ಹುಡುಕುವುದಕ್ಕೆ ಎಷ್ಟು ಪ್ರಯಾಸಪಟ್ಟರೂ ಅದನ್ನು ಕಂಡುಕೊಳ್ಳಲಾರನು. ಹೌದು, ಜ್ಞಾನಿಯು ಅದನ್ನು ಗ್ರಹಿಸಿಕೊಳ್ಳಲು ಯೋಚಿಸಿದರೂ ಅವನು ಅದನ್ನು ಗ್ರಹಿಸಲಾರನು.”

ಪ್ರಸಂಗಿ — Chapters