[1] ಪ್ರತಿಯೊಂದು ಕಾರ್ಯಕ್ಕೂ ನಿಗದಿಯಾದ ಸಮಯವಿದೆ, ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.
[2] ಹುಟ್ಟುವ ಸಮಯ, ಸಾಯುವ ಸಮಯ, ನೆಡುವ ಸಮಯ, ನೆಟ್ಟದ್ದನ್ನು ಕಿತ್ತುಹಾಕುವ ಸಮಯ,
[3] ಕೊಲ್ಲುವ ಸಮಯ, ಸ್ವಸ್ಥಮಾಡುವ ಸಮಯ ಕೆಡುವಿಬಿಡುವ ಸಮಯ, ಕಟ್ಟುವ ಸಮಯ,
[4] ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ,
[5] ಕಲ್ಲುಗಳನ್ನು ಚೆಲ್ಲುವ ಸಮಯ, ಕಲ್ಲುಗಳನ್ನು ಕೂಡಿಸುವ ಸಮಯ, ಅಪ್ಪಿಕೊಳ್ಳುವ ಸಮಯ ಅಪ್ಪಿಕೊಳ್ಳದಿರುವ ಸಮಯ,
[6] ಸಂಪಾದಿಸುವ ಸಮಯ, ಕಳೆದುಕೊಳ್ಳುವ ಸಮಯ, ಕಾಪಾಡುವ ಸಮಯ, ಬಿಸಾಡುವ ಸಮಯ,
[7] ಹರಿಯುವ ಸಮಯ, ಹೊಲಿಯುವ ಸಮಯ, ಸುಮ್ಮನಿರುವ ಸಮಯ, ಮಾತನಾಡುವ ಸಮಯ,
[8] ಪ್ರೀತಿಸುವ ಸಮಯ, ದ್ವೇಷಿಸುವ ಸಮಯ, ಯುದ್ಧದ ಸಮಯ, ಸಮಾಧಾನದ ಸಮಯ.
[9] ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು?
[10] ಮನುಷ್ಯನಿಗೆ ಕರ್ತವ್ಯವೆಂದು ದೇವರು ನೇಮಿಸಿರುವ ಪ್ರಯಾಸವನ್ನು ನೋಡಿದ್ದೇನೆ.
[11] ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ. ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ. ಆದರೂ ದೇವರು ನಡೆಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.
[12] ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನು ಅನುಭವಿಸುವುದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ.
[13] ಇದಲ್ಲದೆ ಪ್ರತಿಯೊಬ್ಬನೂ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವುದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.
[14] ದೇವರ ಕಾರ್ಯವೆಲ್ಲವು ನಿತ್ಯವೆಂದು ಬಲ್ಲೆನು. ಅದಕ್ಕೆ ಯಾವುದನ್ನೂ ಸೇರಿಸಲಾರೆವು. ಅದರಿಂದ ಯಾವುದನ್ನೂ ತೆಗೆಯಲಾರೆವು. ದೇವರ ಈ ನಿಯಮಕ್ಕೆ ಮನುಷ್ಯರು ತನ್ನ ಎದುರಿನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕೆಂಬುದೇ ಕಾರಣ.
[15] ಈಗಿನದು ಹಿಂದೆ ಇತ್ತು; ಮುಂದಿನದು ಈಗಲೂ ಇದೆ. ಗತಿಸಿ ಹೋದದ್ದನ್ನು ದೇವರು ತಿರುಗಿ ಬರಮಾಡುವನು.
[16] ಇದಲ್ಲದೆ ನಾನು ಲೋಕದಲ್ಲಿ ದೃಷ್ಟಿಸಿ ನ್ಯಾಯಸ್ಥಾನದಲ್ಲಿಯೂ, ಧರ್ಮಸ್ಥಾನದಲ್ಲಿಯೂ ಅಧರ್ಮವಿರುವುದೆಂದು ನೋಡಿದೆನು.
[17] ಆಗ ನಾನು ಮನಸ್ಸಿನಲ್ಲಿ, “ದೇವರು ನೀತಿವಂತನಿಗೂ, ಅನೀತಿವಂತನಿಗೂ ನ್ಯಾಯತೀರಿಸುವನು. ಆತನ ನ್ಯಾಯಕ್ರಮಗಳಿಗೂ, ಎಲ್ಲಾ ಕೆಲಸಕಾರ್ಯಗಳಿಗೂ ತಕ್ಕ ಸಮಯ ಉಂಟು” ಎಂದು ಅಂದುಕೊಂಡೆನು.
[18] ನಾನು ನನ್ನ ಮನಸ್ಸಿನಲ್ಲಿ ಹೀಗೆ ಯೋಚಿಸಿದೆನು, “ದೇವರು ಮನುಷ್ಯರನ್ನು ಪರೀಕ್ಷಿಸಿ, ಅವರು ಪಶುಗಳಿಗೆ ಸಮಾನರು ಎಂಬುದನ್ನು ತೋರಿಸುತ್ತಾನೆ.”
[19] ಮನುಷ್ಯನ ಗತಿಯೂ ಪಶುವಿನ ಗತಿಯೂ ಒಂದೇ. ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವುದು. ಎಲ್ಲಕ್ಕೂ ಪ್ರಾಣ ಒಂದೇ. ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ. ಎಲ್ಲವು ವ್ಯರ್ಥವೇ.
[20] ಎಲ್ಲಾ ಪ್ರಾಣಿಗಳು ಒಂದೇ ಸ್ಥಳಕ್ಕೆ ಹೋಗುವವು. ಎಲ್ಲವು ಮಣ್ಣಿನಿಂದಾದವು. ಎಲ್ಲವೂ ಮಣ್ಣಿಗೆ ಪುನಃ ಸೇರುವವು.
[21] ಮನುಷ್ಯನ ಆತ್ಮವು ಮೇಲಕ್ಕೆ ಏರುತ್ತದೋ, ಪಶುವಿನ ಆತ್ಮವು ಕೆಳಕ್ಕೆ ಇಳಿದು ಭೂಮಿಗೆ ಸೇರುತ್ತದೋ ಯಾರಿಗೆ ಗೊತ್ತು?
[22] ಈ ಪ್ರಕಾರ ನಾನು ಯೋಚಿಸಿ ಮನುಷ್ಯನು ತನ್ನ ಕಾರ್ಯಗಳಲ್ಲಿ ಉಲ್ಲಾಸಗೊಳ್ಳುವುದಕ್ಕಿಂತ ಅವನಿಗೆ ಯಾವ ಮೇಲೂ ಇಲ್ಲ. ಇದೇ ಅವನ ಪಾಲು ಎಂದು ಗ್ರಹಿಸಿಕೊಂಡೆನು. ಜೀವಮಾನದ ನಂತರ ಸಂಭವಿಸುವವುಗಳನ್ನು ನೋಡುವುದಕ್ಕೆ ಮನುಷ್ಯನನ್ನು ಯಾರು ಪುನಃ ಬರಮಾಡುವರು?