[1] ಸತ್ತ ನೊಣಗಳಿಂದ ಗಂಧದತೈಲವು ಕೊಳೆತು ನಾರುವುದು. ಹಾಗೆಯೇ ಸ್ವಲ್ಪ ಹುಚ್ಚುತನವು ಜ್ಞಾನ ಮತ್ತು ಘನತೆಗಳನ್ನು ಕೆಡಿಸುತ್ತದೆ.
[2] ಜ್ಞಾನಿಯ ಬುದ್ಧಿಯು ಅವನ ಬಲಗಡೆಯಿರುವುದು. ಅಜ್ಞಾನಿಯ ಬುದ್ಧಿಯು ಅವನ ಎಡಗಡೆಯಿರುವುದು.
[3] ಇದಲ್ಲದೆ ಹುಚ್ಚನು ಬುದ್ಧಿತಪ್ಪಿ ತಿರುಗುವ ದಾರಿಯಲ್ಲಿ ತನ್ನ ಹುಚ್ಚುತನವನ್ನು ಎಲ್ಲರಿಗೆ ಪ್ರಕಟಮಾಡುವನು.
[4] ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ. ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ.
[5] ಲೋಕದಲ್ಲಿ ಒಂದು ಸಂಕಟವನ್ನು ಕಂಡಿದ್ದೇನೆ. ಅದು ಆಳುವವನ ಸಮ್ಮುಖದಿಂದ ಹೊರಟುಬರುವ ಹಾಗೆಯೇ ತೋರುತ್ತದೆ.
[6] ಮೂಢರಿಗೆ ಮಹಾ ಪದವಿ ದೊರೆಯುವುದು. ಘನವಂತರೂ ಹೀನಸ್ಥಿತಿಯಲ್ಲಿರುವರು.
[7] ಆಳುಗಳು ಕುದುರೆ ಸವಾರಿ ಮಾಡುವುದನ್ನೂ, ಪ್ರಭುಗಳು ಆಳುಗಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ.
[8] ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುವನು, ಗೋಡೆಯನ್ನು ಒಡೆಯುವವನಿಗೆ, ಹಾವು ಕಚ್ಚುವುದು.
[9] ಯಾವನು ಕಲ್ಲುಗಳನ್ನು ಕೀಳುವನೋ ಅವನಿಗೆ ಹಾನಿ ಆಗುವುದು. ಮರವನ್ನು ಕಡೆಯುವವನಿಗೆ ಅಪಾಯವಿದೆ.
[10] ಮೊಂಡು ಕೊಡಲಿಯ ಬಾಯಿಯನ್ನು ಮಸೆಯದಿದ್ದರೆ ಅವನು ಹೆಚ್ಚು ಬಲವನ್ನು ಪ್ರಯೋಗಿಸಬೇಕು. ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ.
[11] ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ, ಹಾವಾಡಿಗನಿಗೆ ಯಾವ ಪ್ರಯೋಜನವೂ ಇಲ್ಲ.
[12] ಜ್ಞಾನಿಯ ಮಾತು ಹಿತ. ಅಜ್ಞಾನಿಯ ಬಾಯಿ ತನ್ನನ್ನೇ ನುಂಗಿಬಿಡುವುದು.
[13] ಅಜ್ಞಾನಿಯ ಮಾತುಗಳು ಆರಂಭದಲ್ಲಿ ಬುದ್ಧಿಹೀನತೆ, ಅಂತ್ಯದಲ್ಲಿ ಅಪಾಯದ ಮರಳುತನ.
[14] ಮನುಷ್ಯನು ಮುಂದೆ ಆಗುವುದನ್ನು ತಿಳಿಯನು. ತಾನು ಕಾಲವಾದ ಮೇಲೆ ಹೀಗೆಯೇ ಆಗುವುದೆಂದು ಅವನು ಯಾರಿಂದ ತಿಳಿದುಕೊಂಡಾನು? ಅಜ್ಞಾನಿಯ ಮಾತುಗಳೋ ಬಹಳ.
[15] ಪಟ್ಟಣದ ದಾರಿ ತಿಳಿಯದವನಿಗೆ ಮೂಢರು ತಿಳಿಸಲು, ಪಡುವ ಪ್ರಯಾಸದಿಂದ ಆಯಾಸವೇ.
[16] ದೇಶದ ಅರಸನು ಯುವಕನಾಗಿದ್ದರೆ, ಪ್ರಭುಗಳು ಹೊತ್ತಾರೆ ಔತಣಕ್ಕೆ ಕುಳಿತುಕೊಂಡರೆ ನಿನಗೆ ದೌರ್ಭಾಗ್ಯವೇ!
[17] ದೇಶದ ಅರಸನು ಕುಲೀನನಾಗಿದ್ದರೆ, ಪ್ರಭುಗಳು ಅಮಲಿಗಾಗಿ ಅಲ್ಲ, ಆದರೆ ಶಕ್ತಿಗಾಗಿ ಸಕಾಲದಲ್ಲಿ ಊಟಕ್ಕೆ ಕುಳಿತರೆ ನಿನಗೆ ಭಾಗ್ಯವೇ!
[18] ಸೋಮಾರಿತನದಿಂದ ತೊಲೆಗಳು ಬೊಗ್ಗುವವು. ಜೋಲುಗೈಯಿಂದ ಮನೆ ಸೋರುವುದು.
[19] ನಗುವಿಗಾಗಿ ಔತಣವು, ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು, ಧನವು ಎಲ್ಲವನ್ನೂ ಒದಗಿಸಿಕೊಡುವುದು.
[20] ಮನಸ್ಸಿನಲ್ಲಿಯೂ ಅರಸನನ್ನು ದೂಷಿಸದಿರು. ಮಲಗುವ ಕೋಣೆಯಲ್ಲಿಯೂ ಧನಿಕನನ್ನು ಬಯ್ಯದಿರು. ಆಕಾಶದ ಹಕ್ಕಿಯು ಆ ಶಬ್ದವನ್ನು ಮುಟ್ಟಿಸುವವು; ಪಕ್ಷಿಯು ಆ ವಿಷಯವನ್ನು ತಿಳಿಸುವುದು.