Skip to content
Opens in a new window
Listen to this chapter • 4:04

[1] ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ, ಮತ್ತು ಜನನ ದಿನಕ್ಕಿಂತ ಮರಣ ದಿನವೇ ಮೇಲು.

[2] ಔತಣದ ಮನೆಗಿಂತ ಮರಣದುಃಖದ ಮನೆಗೆ ಹೋಗುವುದು ಲೇಸು. ಎಲ್ಲಾ ಮನುಷ್ಯರಿಗೂ ಕೊನೆಗೆ ಇದೇ ಗತಿ, ಜೀವಂತನು ಇದನ್ನು ನೋಡಿ ತನ್ನ ಹೃದಯದಲ್ಲಿ ಸ್ಮರಿಸುವನು.

[3] ನಗೆಗಿಂತ ದುಃಖವು ವಾಸಿ, ಮುಖವು ಸಪ್ಪಗಿರುವಲ್ಲಿ ಹೃದಯಕ್ಕೆ ಮೇಲು.

[4] ದುಃಖದ ಮನೆಯು ಜ್ಞಾನಿಗಳ ಮನಸ್ಸಿಗೆ ನೆಲೆ, ಉಲ್ಲಾಸದ ಮನೆಯು ಮೂಢರ ಮನಸ್ಸಿಗೆ ನಿವಾಸ.

[5] ಮೂಢರ ಗಾನಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವುದು ಲೇಸು.

[6] ಮೂಢರ ನಗುವು ಮಡಿಕೆಯ ಕೆಳಗೆ ಉರಿಯುವ ಮುಳ್ಳಿನ ಚಟಪಟ ಶಬ್ದದ ಹಾಗೆಯೇ. ಇದೂ ಕೂಡ ವ್ಯರ್ಥ.

[7] ದಬ್ಬಾಳಿಕೆಯು ಜ್ಞಾನಿಯನ್ನು ಮೂರ್ಖನನ್ನಾಗಿಸುತ್ತದೆ, ಲಂಚವು ಹೃದಯವನ್ನು ಕೆಡಿಸುತ್ತದೆ.

[8] ಆದಿಗಿಂತ ಅಂತ್ಯವು ಲೇಸು; ಅಹಂಕಾರಿಗಿಂತ ತಾಳ್ಮೆಯುಳ್ಳವನು ಉತ್ತಮ.

[9] ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ, ಕೋಪಕ್ಕೆ ಮೂಢರ ಎದೆಯೇ ಲೇಸು.

[10] ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ. ನೀನು ಈ ವಿಷಯದಲ್ಲಿ ವಿಚಾರಿಸುವುದು ಜ್ಞಾನಕಾರ್ಯವಲ್ಲ.

[11] ಜ್ಞಾನವು ಸ್ವತ್ತಿನಂತೆ ಪ್ರಯೋಜನಕರ. ಇದು ಲೋಕದಲ್ಲಿ ಜೀವಿಸುವವರಿಗೆ ಸ್ವತ್ತಿಗಿಂತ ಉತ್ತಮೋತ್ತಮವಾಗಿದೆ.

[12] ಧನವು ಹೇಗೊ ಹಾಗೆ ಜ್ಞಾನವು ಆಶ್ರಯ. ಜ್ಞಾನಕ್ಕೆ ವಿಶೇಷವೇನೆಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬುದೇ.

[13] ದೇವರ ಕಾರ್ಯವನ್ನು ನೋಡು; ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡುವುದಕ್ಕೆ ಯಾರಿಂದಾದೀತು?

[14] ಸುಖದ ದಿನದಲ್ಲಿ ಸುಖದಿಂದಿರು, ದುಃಖದ ದಿನದಲ್ಲಿ ಯೋಚಿಸು; ಮನುಷ್ಯನು ತನ್ನ ಕಾಲವಾದ ಮೇಲೆ ಸಂಭವಿಸುವ ಯಾವುದನ್ನೂ ಗ್ರಹಿಸಲಾರದಂತೆ, ದೇವರು ಇವುಗಳನ್ನು ಒಂದರ ಮೇಲೊಂದು ಬರಮಾಡಿದ್ದಾನೆ.

[15] ನೀತಿವಂತನು ತನ್ನ ನೀತಿಯಲ್ಲಿಯೇ ನಶಿಸುವುದುಂಟು. ದುಷ್ಟನು ತನ್ನ ದುಷ್ಟತನದಲ್ಲಿಯೇ ಬಹಳ ದಿನ ಬದುಕುವುದುಂಟು. ಇದನ್ನೆಲ್ಲಾ ನನ್ನ ವ್ಯರ್ಥವಾದ ಜೀವಮಾನದಲ್ಲಿ ನೋಡಿದ್ದೇನೆ.

[16] ನೀನು ಅತಿಯಾಗಿ ನೀತಿವಂತನಾಗಿರಬೇಡ, ನಿನ್ನ ದೃಷ್ಟಿಯಲ್ಲಿ ನೀನು ಜ್ಞಾನಿಯಾಗಿರಬೇಡ. ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ?

[17] ನೀನು ಅತಿಯಾಗಿ ದುಷ್ಟನಾಗಿರಬೇಡ ಇಲ್ಲವೇ ಮೂರ್ಖನಾಗಿರಬೇಡ, ಏಕೆ ಅಕಾಲ ಮರಣವನ್ನು ಹೊಂದುವಿ?

[18] ನೀನು ಇದನ್ನು ಹಿಡಿದುಕೊಳ್ಳುವುದು ಒಳ್ಳೆಯದು, ಅದರಿಂದ ಕೈಯನ್ನು ಹಿಂತೆಗೆಯಬೇಡ. ದೇವರಿಗೆ ಭಯಪಡುವವನು ಅವೆಲ್ಲವುಗಳಿಂದ ಪಾರಾಗುವನು.

[19] ಹತ್ತು ಮಂದಿ ಅಧಿಕಾರಿಗಳಿಂದ ಪಟ್ಟಣಕ್ಕೆ ಉಂಟಾಗುವ ಬಲಕ್ಕಿಂತಲೂ ಜ್ಞಾನಿಗೆ ಜ್ಞಾನದಿಂದ ಉಂಟಾಗುವ ಬಲವು ಹೆಚ್ಚು.

[20] ಪಾಪಮಾಡದೇ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷರು ಲೋಕದಲ್ಲಿ ಇಲ್ಲವೇ ಇಲ್ಲ.

[21] ಆಡುವ ಮಾತುಗಳನ್ನೆಲ್ಲಾ ಲಕ್ಷ್ಯಕ್ಕೆ ತಾರದಿರು, ನಿನ್ನ ಆಳು ನಿನ್ನನ್ನು ಶಪಿಸುವುದು ಕಿವಿಗೆ ಬಿದ್ದೀತು.

[22] ನೀನು ಕೂಡ ಅನೇಕ ವೇಳೆ ಇತರರನ್ನು ಶಪಿಸಿದ್ದಿ ಎಂಬುದಕ್ಕೆ ನಿನ್ನ ಮನಸ್ಸೇ ಸಾಕ್ಷಿ.

[23] ಇದನ್ನೆಲ್ಲಾ ಜ್ಞಾನದಿಂದ ಪರೀಕ್ಷಿಸಿದೆನು. “ನಾನು ಜ್ಞಾನಿಯಾಗುವೆನು” ಎಂದುಕೊಂಡೆನು. ಆದರೆ ಅದು ನನ್ನಿಂದ ದೂರವಾಯಿತು.

[24] ಜ್ಞಾನವು ಬಹಳ ದೂರದಲ್ಲಿಯೂ, ಅಗಾಧದಲ್ಲಿಯೂ ಇದೆ. ಅದನ್ನು ಯಾರು ಕಂಡುಕೊಂಡಾರು?

[25] ನಾನು ತಿರುಗಿಕೊಂಡು, ಜ್ಞಾನವನ್ನು ಮತ್ತು ಮೂಲತತ್ವವನ್ನು ಹುಡುಕಿ, ವಿಚಾರಿಸಿ ಗ್ರಹಿಸುವುದಕ್ಕೂ ಅಧರ್ಮವು ಮೂರ್ಖತನ, ಅಜ್ಞಾನವು ಹುಚ್ಚುತನ ಎಂದು ತಿಳಿದುಕೊಳ್ಳುವುದಕ್ಕೂ ಮನಸ್ಸಿಟ್ಟೆನು.

[26] ಆಗ ಮರಣಕ್ಕಿಂತ ಹೆಚ್ಚು ವಿಷವೊಂದು ಕಂಡುಬಂತು. ಯಾವುದೆಂದರೆ ಕೆಟ್ಟ ಹೆಂಗಸೇ. ಅವಳ ಹೃದಯವು ಉರುಲುಗಳೂ, ಬಲೆಗಳೂ, ಅವಳ ತೋಳುಗಳು ಸಂಕೋಲೆಗಳು. ದೇವರು ಒಲಿದವನು ಅವಳಿಂದ ತಪ್ಪಿಸಿಕೊಳ್ಳುವನು. ಆದರೆ ಪಾಪಿಯು ಅವಳ ಕೈಗೆ ಸಿಕ್ಕಿಬೀಳುವನು.

[27] ಪ್ರಸಂಗಿಯು ಹೀಗೆ ಹೇಳುತ್ತಾನೆ, “ನೋಡು, ನಾನು ಇದನ್ನು ಹುಡುಕಿ ಕಂಡುಕೊಂಡಿದ್ದೇನೆ” ಮತ್ತೊಂದು ಸಂಶೋಧನೆಯನ್ನು ಎಷ್ಟು ನಡೆಸಿದರೂ ಉತ್ತರ ಸಿಕ್ಕಲಿಲ್ಲ.

[28] ಸಹಸ್ರ ಪುರುಷರಲ್ಲಿ ಯೋಗ್ಯನೊಬ್ಬನನ್ನು ಕಂಡಿದ್ದರೂ ಕಂಡಿರಬಹುದು, ಆದರೆ ಸಹಸ್ರ ಸ್ತ್ರೀಯರಲ್ಲಿ ಯೋಗ್ಯಳೊಬ್ಬಳನ್ನೂ ಕಂಡಿಲ್ಲ.

[29] ದೇವರು ಮನುಷ್ಯರನ್ನು ಸತ್ಯವಂತನನ್ನಾಗಿ ಸೃಷ್ಟಿಸಿದನು. ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ. ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ.

ಪ್ರಸಂಗಿ — Chapters