Skip to content
Opens in a new window
Listen to this chapter • 2:01

[1] ಈ ಲೋಕದಲ್ಲಿ ಮನುಷ್ಯರಿಗೆ ವಿಪರೀತವಾಗಿ ಉಂಟಾಗಿರುವ ದುರಾವಸ್ಥೆಯನ್ನು ಕಂಡೆನು.

[2] ಅದೇನೆಂದರೆ ದೇವರು ಒಬ್ಬನಿಗೆ ಯಾವ ಇಷ್ಟಾರ್ಥಕ್ಕೂ ಕೊರತೆಯಿಲ್ಲದಂತೆ ಧನವನ್ನು, ಸಂಪತ್ತನ್ನು ಹಾಗು ಘನತೆಯನ್ನು ಅನುಗ್ರಹಿಸುವನು. ಆದರೆ ಅದನ್ನು ಅನುಭವಿಸುವುದಕ್ಕೆ ದೇವರು ಅವನನ್ನು ಶಕ್ತಿಗೊಳಿಸುವುದಿಲ್ಲ. ಅದನ್ನು ಮತ್ತೊಬ್ಬನು ಅನುಭವಿಸುವನು. ಇದು ಸಹ ವ್ಯರ್ಥವೂ, ದುಃಖಕರವಾದ ಕೆಟ್ಟತನವೂ ಆಗಿದೆ.

[3] ನೂರಾರು ಮಕ್ಕಳನ್ನು ಪಡೆದು ಮುಪ್ಪಿನ ಮುದುಕನಾಗುವ ತನಕ ಬಹಳ ವರ್ಷ ಬದುಕಿದವನಿಗೆ ಸಂತೃಪ್ತಿಯೂ, ಉತ್ತರಕ್ರಿಯೆಯೂ ಇಲ್ಲದಿದ್ದರೆ, ಇವನಿಗಿಂತಲೂ ಗರ್ಭಸ್ರಾವದ ಪಿಂಡವೇ ಉತ್ತಮ ಅಂದುಕೊಂಡೆನು.

[4] ಅದು ವ್ಯರ್ಥವಾಗಿ ಬರುತ್ತದೆ. ಕತ್ತಲಲ್ಲಿ ಮರೆಯಾಗುತ್ತದೆ. ಅಂಧಕಾರವು ಅದರ ಹೆಸರನ್ನು ಕವಿದಿರುತ್ತದೆ.

[5] ಅದು ಸೂರ್ಯನನ್ನು ಕಂಡಿಲ್ಲ. ಅದಕ್ಕೆ ತಿಳಿವಳಿಕೆಯೇ ಇಲ್ಲ. ಆದರೂ ಅವನಿಗಿಂತ ಅದರ ಶಾಂತಿಯೇ ಹೆಚ್ಚು.

[6] ಎರಡು ಸಾವಿರ ವರ್ಷ ಅವನು ಬದುಕಿದರೂ ಅವನು ತನ್ನ ಐಶ್ವರ್ಯವನ್ನು ಅನುಭವಿಸಲಿಲ್ಲ. ಎಲ್ಲರೂ ಒಂದೇ ಸ್ಥಳಕ್ಕೆ ಹೋಗುತ್ತಾರೆ.

[7] ಮನುಷ್ಯನು ಪಡುವ ಪ್ರಯಾಸವೆಲ್ಲಾ ತನ್ನ ಹೊಟ್ಟೆಗಾಗಿಯೇ, ಆದರೂ ಅವನಿಗೆ ತೃಪ್ತಿಯಿಲ್ಲ.

[8] ಬುದ್ಧಿಹೀನನಿಗಿಂತ ಜ್ಞಾನಿಗೆ ಹೆಚ್ಚು ಲಾಭ ಏನಿದೆ? ಜನರ ಮುಂದೆ ಸರಿಯಾಗಿ ನಡೆದುಕೊಳ್ಳಲು ತಿಳಿಯದೇ ಇರುವ ಬಡವನಿಗೆ ಲಾಭವೇನು?

[9] ಬಗೆಬಗೆಯಾಗಿ ಆಶಿಸುವುದಕ್ಕಿಂತ ಕಣ್ಣೆದುರಿಗಿರುವುದನ್ನು ಅನುಭವಿಸುವುದೇ ಒಳ್ಳೇಯದು. ಇದು ಕೂಡ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ.

[10] ಮನುಷ್ಯನು ಎಂಥವನಾದರೂ ಪೂರ್ವದಲ್ಲಿ ಅವನಿಗೆ ವಿಧಿಸಲ್ಪಟ್ಟ ಹೆಸರಿನಿಂದ ಅವನು ಮಣ್ಣಿನವನೇ ಎಂದು ಗೊತ್ತಾಗಿದೆ. ತನಗಿಂತ ಬಲಿಷ್ಠನ ಸಂಗಡ ಹೋರಾಡಲಾರನು.

[11] ಮಾತು ಹೆಚ್ಚಿದಷ್ಟು ಪರಿಣಾಮ ಕಡಿಮೆ, ಅವುಗಳಿಂದ ಮನುಷ್ಯನಿಗೆ ಏನು ಪ್ರಯೋಜನ?

[12] ನೆರಳಿನಂತೆ ವ್ಯರ್ಥವಾಗಿ ಕಳೆದುಹೋಗುವ ಮನುಷ್ಯನ ಜೀವಮಾನದ ದಿನಗಳಲ್ಲೆಲ್ಲಾ ಅವನಿಗೆ ಯಾವುದು ಮೇಲೆಂದು ಯಾರಿಗೆ ಗೊತ್ತು? ತಾನು ಸತ್ತುಹೋದ ಮೇಲೆ ಇಹಲೋಕದಲ್ಲಿ ಏನಾಗುವುದೆಂದು ಅವನು ಯಾರಿಂದ ತಿಳಿದುಕೊಂಡಾನು?

ಪ್ರಸಂಗಿ — Chapters