[1] ನಾನು ಮನಸ್ಸಿನಲ್ಲಿ, “ಈಗ ಬಾ, ನಾನು ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು. ಸುಖವನ್ನು ಅನುಭವಿಸು” ಅಂದುಕೊಂಡೆನು. ಆಹಾ! ಇದು ವ್ಯರ್ಥವೇ.
[2] “ನಗುವುದು ಹುಚ್ಚುತನ, ಸಂತೋಷದಿಂದ ಏನನ್ನು ಸಾಧಿಸುವೆನು?” ಅಂದುಕೊಂಡೆನು.
[3] ಆಕಾಶದ ಕೆಳಗೆ ಮನುಷ್ಯರ ಅಲ್ಪಾಯುಷ್ಯದಲ್ಲಿ ಏನು ಮಾಡುವುದು ಒಳ್ಳೆಯದೆಂದು ನಾನು ತಿಳಿದುಕೊಳ್ಳುವುದಕ್ಕಾಗಿ, ನನ್ನ ಮನಸ್ಸು ಜ್ಞಾನದಿಂದಿರುವಾಗಲೇ ದೇಹವನ್ನು ದ್ರಾಕ್ಷಾರಸದಿಂದ ಸಂತೋಷದಲ್ಲಿ ಇಡುವುದಕ್ಕೂ, ಬುದ್ಧಿಹೀನತೆಯನ್ನು ಅವಲಂಬಿಸುವುದಕ್ಕೂ ಮನಸ್ಸಿನಲ್ಲಿ ವಿಚಾರಮಾಡಿಕೊಂಡೆನು.
[4] ನಾನು ಮಹತ್ಕಾರ್ಯಗಳನ್ನು ನಡೆಸಿದೆನು. ಮನೆಗಳನ್ನು ಕಟ್ಟಿಕೊಂಡೆನು ಮತ್ತು ದ್ರಾಕ್ಷಿತೋಟಗಳನ್ನು ನೆಟ್ಟನು.
[5] ತೋಟಗಳನ್ನೂ ಮತ್ತು ಉದ್ಯಾನವನಗಳನ್ನೂ ಮಾಡಿಸಿ; ಅವುಗಳಲ್ಲಿ ಸಕಲ ವಿಧವಾದ ಫಲವೃಕ್ಷಗಳನ್ನು ನೆಟ್ಟೆನು.
[6] ಬೆಳೆಯುವ ಗಿಡಗಳ ತೋಪುಗಳಿಗೆ ನೀರು ಹಾಯಿಸುವುದಕ್ಕಾಗಿ ಕುಂಟೆಗಳನ್ನು ತೋಡಿಸಿದೆನು.
[7] ಗಂಡು ಮತ್ತು ಹೆಣ್ಣಾಳುಗಳನ್ನು ಕೊಂಡುಕೊಂಡೆನು; ನನ್ನ ಅರಮನೆಯಲ್ಲಿ ಇವರಿಂದ ಗುಲಾಮರು ಹುಟ್ಟಿದರು. ಇದಲ್ಲದೆ ಯೆರೂಸಲೇಮಿನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ನಾನು ಬಹಳ ಸಂಪತ್ತುವುಳ್ಳವನಾಗಿ ದನಕುರಿಗಳ ಮಂದೆಯನ್ನು ಹೊಂದಿದೆನು.
[8] ನಾನು ಬೆಳ್ಳಿಬಂಗಾರಗಳನ್ನೂ ಅರಸರ ಮತ್ತು ಪ್ರಾಂತ್ಯಗಳ ಕಪ್ಪವನ್ನೂ ಸಂಗ್ರಹಿಸಿಕೊಂಡೆನು. ಗಾಯಕ, ಗಾಯಕಿಯರನ್ನು ಮತ್ತು ಮನುಷ್ಯರಿಗೆ ಭೋಗ್ಯರಾದ ಅನೇಕ ಸ್ತ್ರೀಯರನ್ನು ಸಂಪಾದಿಸಿಕೊಂಡೆನು.
[9] ಹೀಗೆ ಯೆರೂಸಲೇಮಿನಲ್ಲಿ ಹಿಂದೆ ಇದ್ದವರೆಲ್ಲರಿಗಿಂತಲೂ ಹೆಚ್ಚು ಅಭಿವೃದ್ಧಿಹೊಂದಿ ದೊಡ್ಡವನಾದೆನು. ಇದಲ್ಲದೆ ನನ್ನ ಜ್ಞಾನವು ನನ್ನಲ್ಲಿ ನೆಲೆಯಾಗಿತ್ತು.
[10] ನನ್ನ ಕಣ್ಣು ಬಯಸಿದ್ದೆಲ್ಲವನ್ನು, ಅದಕ್ಕೆ ನಾನು ಒಪ್ಪಿಸದೆ ಬಿಡಲಿಲ್ಲ. ಯಾವ ಸಂತೋಷವನ್ನು ಅನುಭವಿಸುವುದಕ್ಕೂ ನನ್ನ ಹೃದಯವನ್ನು ತಡೆಯಲಿಲ್ಲ. ಏಕೆಂದರೆ ನನ್ನ ಹೃದಯವು ನಾನು ನಡಿಸುವ ಕಾರ್ಯಗಳಲ್ಲಿ ಹರ್ಷಿಸುತ್ತಿತ್ತು. ನನ್ನ ಪ್ರಯಾಸದಿಂದ ನನಗೆ ದೊರೆತ ಫಲವು ಇದೆ.
[11] ಆಗ ನನ್ನ ಕೈಯಿಂದ ನಡೆಸಿದ ಎಲ್ಲಾ ಕೆಲಸಗಳನ್ನೂ, ನಾನು ಪಟ್ಟ ಪ್ರಯಾಸಗಳನ್ನೂ ಗಮನವಿಟ್ಟು ಪರಿಶೀಲಿಸಿದೆ, ಆಹಾ ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥವಾಯಿತು. ಸೂರ್ಯನ ಕೆಳಗೆ ಯಾವ ಲಾಭವೂ ಕಾಣಲಿಲ್ಲ.
[12] ಜ್ಞಾನವನ್ನೂ ನೋಡುವುದಕ್ಕೆ ತಿರುಗಿಕೊಂಡೆನು, ಮರುಳುತನವನ್ನೂ ಬುದ್ಧಿಹೀನತೆಯನ್ನೂ ನೋಡುವುದಕ್ಕೆ ತಿರುಗಿಕೊಂಡೆನು. ರಾಜನ ಪ್ರಯತ್ನವೇ ಹೀಗಾದ ಮೇಲೆ ಮತ್ತೊಬ್ಬನಿಂದ ಏನಾದೀತು? ಆದದ್ದೇ ಆಗುತ್ತದೆ ಎಂದುಕೊಂಡೆ.
[13] ಜ್ಞಾನವು ಮೂಢತ್ವಕ್ಕಿಂತ ಶ್ರೇಷ್ಠವೆಂದು ಬೆಳಕು ಕತ್ತಲಿಗಿಂತ ಶ್ರೇಷ್ಠವಾಗಿರುವುದೆಂದು ಗೋಚರವಾಯಿತು.
[14] ಜ್ಞಾನಿಯ ಕಣ್ಣು ಅವನ ತಲೆಯಲ್ಲಿರುವುದು ಮೂಢನು ಕತ್ತಲಲ್ಲಿ ನಡೆಯುವನು. ಇವರಿಬ್ಬರಿಗೂ ಒಂದೇ ಗತಿಯೆಂದು ನನಗೆ ಕಂಡು ಬಂದಿತು.
[15] ಆಗ ನಾನು ನನ್ನ ಹೃದಯದಲ್ಲಿ, “ಮೂಢನಿಗೆ ಸಂಭವಿಸುವ ಗತಿಯು, ನನಗೂ ಸಂಭವಿಸುವುದು. ನನ್ನ ಹೆಚ್ಚು ಜ್ಞಾನದಿಂದ ಲಾಭವೇನು?” ಇದೂ ವ್ಯರ್ಥವೆಂದು ನನ್ನ ಹೃದಯದಲ್ಲಿ ಅಂದುಕೊಂಡೆನು.
[16] ಏಕೆಂದರೆ ಮೂಢನು ಹೇಗೋ ಹಾಗೆಯೇ ಜ್ಞಾನಿಯೂ ಬಹಳ ದಿನಗಳವರೆಗೆ ಮರೆತುಹೋಗುವನು. ಈಗಿನ ಜನರು ಮುಂದಿನ ಕಾಲದೊಳಗಾಗಿಯೇ ಮರೆತುಹೋಗುವರು. ಆಹಾ! ಮೂಢನಂತೆ ಜ್ಞಾನಿಯೂ ಸಾಯುವನು.
[17] ಲೋಕ ವ್ಯವಹಾರವು ಕೆಟ್ಟದ್ದೆಂದು ನನಗೆ ಕಂಡುಬಂದದ್ದರಿಂದ ಜೀವವೇ ಅಸಹ್ಯವಾಗಿ ತೋರಿತು. ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ.
[18] ನನ್ನ ಪ್ರಯಾಸದ ಫಲವನ್ನು ಮುಂದಿನವನಿಗೆ ಬಿಟ್ಟುಬಿಡಬೇಕೆಂದು ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆ ಬೇಸರಗೊಂಡೆನು.
[19] ಅವನು ಜ್ಞಾನಿಯೋ ಅಥವಾ ಮೂಢನೋ ಯಾರಿಗೆ ಗೊತ್ತು? ಎಂಥವನಾದರೂ ನಾನು ಲೋಕದೊಳಗೆ ಯಾವುದರಲ್ಲಿ ಜ್ಞಾನವನ್ನೂ, ಪ್ರಯಾಸವನ್ನೂ ವೆಚ್ಚಮಾಡಿದ್ದೇನೋ ಅದರ ಮೇಲೆ ದೊರೆತನಮಾಡುವೆನು. ಇದೂ ವ್ಯರ್ಥವೇ.
[20] ಹೀಗಿರಲು ನಾನು ಲೋಕದಲ್ಲಿ ಪ್ರಯಾಸಪಟ್ಟ ಕೆಲಸದ ವಿಷಯವಾಗಿ ನಿರಾಶೆಗೊಳಗಾದೆನು.
[21] ಒಬ್ಬನು ಜ್ಞಾನದಿಂದಲೂ, ತಿಳಿವಳಿಕೆಯಿಂದಲೂ ತನ್ನ ಕೆಲಸವನ್ನು ನಡೆಸಿ ಸಿದ್ಧಿಗೆ ತಂದ ಮೇಲೆ ಆ ಕೆಲಸದಲ್ಲಿ ಪ್ರಯಾಸಪಡದವನಿಗೆ ಅದರ ಫಲವನ್ನು ಭಾಧ್ಯತೆಯಾಗಿ ಬಿಡಬೇಕಾಯಿತು. ಇದು ಸಹ ವ್ಯರ್ಥವೂ, ಕೇವಲ ಅನ್ಯಾಯವೂ ಆಗಿದೆ.
[22] ಲೋಕದಲ್ಲಿ ಮನುಷ್ಯನು ಹೃದಯಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಸಿಗುವ ಲಾಭವಾದರೂ ಏನು?
[23] ಅವನ ದಿನಗಳೆಲ್ಲಾ ವ್ಯಸನವೇ. ಅವನ ಕೆಲಸವು ತೊಂದರೆಯೇ. ರಾತ್ರಿಯಲ್ಲಿಯೂ ಅವನ ಮನಸ್ಸಿಗೆ ವಿಶ್ರಾಂತಿಯಿಲ್ಲ. ಇದೂ ಸಹ ವ್ಯರ್ಥವೇ.
[24] ಅನ್ನ ಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನು ಅನುಭವಿಸುವುದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ. ಇದು ದೇವರಿಂದಾಯಿತೆಂಬುದನ್ನು ಕಂಡುಕೊಂಡೆನು.
[25] ಆತನಿಲ್ಲದೆ ಯಾರು ಭೋಜನ ಮಾಡಿ ಸುಖವನ್ನು ಅನುಭವಿಸುವರು?
[26] ದೇವರು ತಾನು ಮೆಚ್ಚಿದವನಿಗೆ ಜ್ಞಾನವನ್ನೂ, ತಿಳಿವಳಿಕೆಯನ್ನೂ, ಸಂತೋಷವನ್ನೂ ದಯಪಾಲಿಸುತ್ತಾನೆ. ಆದರೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವುದಕ್ಕಾಗಿ ಕೂಡಿಸಿ ಒದಗಿಸುವಂತೆ ಪಾಪಿಗಾದರೋ ಪ್ರಯಾಸವನ್ನೇ ಕೊಡುತ್ತಾನೆ. ಇದು ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೇ.