[1] ಬಾಬೆಲಿನ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದಾನಿಯೇಲನು ಮಲಗಿದ್ದಾಗ ಒಂದು ಸ್ವಪ್ನವಾಯಿತು. ಕೂಡಲೆ ಅವನು ಆ ಕನಸನ್ನೂ ಅದರ ಮುಖ್ಯಾಂಶಗಳನ್ನೂ ಬರೆದು ಇಟ್ಟನು.
[2] ದಾನಿಯೇಲನು ಆ ಪ್ರಸ್ತಾಪವನ್ನೆತ್ತಿ ಇಂತೆಂದನು, “ನಾನು ರಾತ್ರಿ ಕಂಡ ಕನಸಿನಲ್ಲಿ ಆಹಾ, ಚತುರ್ದಿಕ್ಕಿನ ಗಾಳಿಗಳೂ ಮಹಾಸಾಗರದ ಮೇಲೆ ರಭಸವಾಗಿ ಬೀಸಿ ಬಡಿಯುತ್ತಿದ್ದವು.
[3] ಒಂದಕ್ಕಿಂತ ಒಂದು ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಸಾಗರದೊಳಗಿಂದ ಬಂದವು.
[4] ಮೊದಲು ಕಾಣಿಸಿದ ಮೃಗವು ಸಿಂಹದ ಹಾಗಿತ್ತು, ಅದಕ್ಕೆ ಹದ್ದಿನಂತೆ ರೆಕ್ಕೆಗಳಿದ್ದವು; ನಾನು ನೋಡುತ್ತಿರುವಾಗಲೇ ಆ ರೆಕ್ಕೆಗಳು ಕೀಳಲ್ಪಟ್ಟವು; ಅದು ನೆಲದಿಂದ ಎತ್ತಲ್ಪಟ್ಟು ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲ್ಪಟ್ಟಿತು, ಅದಕ್ಕೆ ಮನುಷ್ಯನ ಹೃದಯವನ್ನು ಕೊಡಲ್ಪಟ್ಟಿತು.
[5] ಆಹಾ, ಇನ್ನೊಂದು ಮೃಗ ಎರಡನೆಯದು; ಅದು ಕರಡಿಯ ಹಾಗಿತ್ತು, ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು. ತನ್ನ ಬಾಯಲ್ಲಿ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು; ನೀನೆದ್ದು ಬೇಕಾದಷ್ಟು ಮಾಂಸವನ್ನು ತಿನ್ನು ಎಂದು ಅದಕ್ಕೆ ಹೇಳೋಣವಾಯಿತು.
[6] ಅನಂತರ ನಾನು ನೋಡುತ್ತಿರುವಲ್ಲಿ ಇಗೋ, ಚಿರತೆಯ ಹಾಗಿರುವ ಮತ್ತೊಂದು ಮೃಗವು ಕಾಣಿಸಿತು; ಅದರ ಪಕ್ಕಗಳಲ್ಲಿ ಪಕ್ಷಿಯ ರೆಕ್ಕೆಯಂತಿರುವ ನಾಲ್ಕು ರೆಕ್ಕೆಗಳಿದ್ದವು; ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು, ಅದಕ್ಕೆ ದೊರೆತನವು ಕೊಡಲ್ಪಟ್ಟಿತು.
[7] ನಾನು ರಾತ್ರಿ ಕಂಡ ಕನಸಿನಲ್ಲಿ ಸ್ವಲ್ಪ ಹೊತ್ತಿನ ಮೇಲೆ ಆಹಾ, ನಾಲ್ಕನೆಯ ಮೃಗವು ಕಾಣಿಸಿತು; ಅದು ಭಯಂಕರವಾಗಿತ್ತು, ಹೆದರಿಸುವಂಥದಾಗಿತ್ತು, ಅಧಿಕ ಬಲವುಳ್ಳದ್ದಾಗಿತ್ತು. ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ನುಂಗುತ್ತಾ, ಚೂರುಚೂರು ಮಾಡುತ್ತಾ ಉಳಿದದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು. ಅದು ಹಿಂದಿನ ಎಲ್ಲಾ ಮೃಗಗಳಿಗಿಂತ ವಿಲಕ್ಷಣವಾಗಿತ್ತು. ಅದಕ್ಕೆ ಹತ್ತು ಕೊಂಬುಗಳಿದ್ದವು.
[8] ನಾನು ಆ ಕೊಂಬುಗಳನ್ನು ನೋಡುತ್ತಿರುವಾಗಲೆ ಇಗೋ, ಅವುಗಳ ನಡುವೆ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು; ಅದಕ್ಕೆ ಎಡೆಮಾಡಿ ಕೊಡಲು ಮೊದಲಿನ ಕೊಂಬುಗಳಲ್ಲಿ ಮೂರು ಬೇರು ಸಹಿತ ಕೀಳಲ್ಪಟ್ಟವು. ಆಹಾ, ಈ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳೂ, ಬಡಾಯಿ ಕೊಚ್ಚಿಕೊಳ್ಳುವ ಬಾಯಿಯೂ ಇದ್ದವು.
[9] “ನಾನು ನೋಡುತ್ತಿದ್ದ ಹಾಗೆ ನ್ಯಾಯಾಸನಗಳು ಹಾಕಲ್ಪಟ್ಟವು, ಮಹಾವೃದ್ಧನೊಬ್ಬನು ಆಸೀನನಾದನು; ಆತನ ಉಡುಪು ಹಿಮದಂತೆ ಶುಭ್ರವಾಗಿತ್ತು. ಆತನ ತಲೆಯ ಕೂದಲು ನಿರ್ಮಲವಾದ ಬಿಳಿಯ ಉಣ್ಣೆಯಂತಿತ್ತು, ಆತನ ನ್ಯಾಯಾಸನವು ಅಗ್ನಿಜ್ವಾಲೆಗಳು, ಅದರ ಚಕ್ರಗಳು ಧಗಧಗಿಸುವ ಬೆಂಕಿಯೇ.
[10] ನ್ಯಾಯಾಸನದ ಮುಂದೆ ಉರಿಯ ಪ್ರವಾಹವು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನ ಸೇವೆಗೆ ಸಿದ್ಧರಾಗಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು. ನ್ಯಾಯಸಭೆಯವರು ಕುಳಿತುಕೊಂಡರು, ಪುಸ್ತಕಗಳು ತೆರೆಯಲ್ಪಟ್ಟವು.
[11] ಆಗ ನಾನು ನೋಡುತ್ತಿರಲು ಇಗೋ, ಕೊಂಬು ಬಡಾಯಿ ಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು, ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು.
[12] ಉಳಿದ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು. ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ, ಅವುಗಳ ಜೀವವನ್ನು ಉಳಿಸಿದರು.
[13] ನಾನು ಕಂಡ ರಾತ್ರಿಯ ಕನಸಿನಲ್ಲಿ ಇಗೋ, ಮನುಷ್ಯ ಕುಮಾರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಬಳಿಗೆ ತಂದರು.
[14] ಸಕಲ, ಜನಾಂಗ, ಕುಲ, ಭಾಷೆಗಳವರು ಅವನ ಸೇವೆ ಮಾಡಲೆಂದು ಅವನಿಗೆ ದೊರೆತನವೂ, ಘನತೆಯೂ, ರಾಜ್ಯವೂ ಕೊಡಲಾಯಿತು. ಅವನ ಆಳ್ವಿಕೆಯು ಅಂತ್ಯವಿಲ್ಲದ್ದು. ಶಾಶ್ವತವಾದದ್ದು, ಅವನ ರಾಜ್ಯವು ಎಂದಿಗೂ ಅಳಿಯದು.
[15] “ದಾನಿಯೇಲನಾದ ನನ್ನ ಆತ್ಮವು ನನ್ನ ಶರೀರದೊಳಗೆ ವ್ಯಥೆಗೊಂಡಿತು, ನನ್ನ ಮನಸ್ಸಿನಲ್ಲಿ ಬಿದ್ದ ಕನಸುಗಳು ನನ್ನನ್ನು ಕಳವಳಪಡಿಸಿದವು.
[16] ನಾನು ಹತ್ತಿರ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋಗಿ ಇವುಗಳ ಸತ್ಯಾರ್ಥವೇನೆಂದು ವಿಚಾರಿಸಲು ಅವನು ನನಗೆ,
[17] ‘ಆ ನಾಲ್ಕು ದೊಡ್ಡ ಮೃಗಗಳು ಲೋಕಸಾಗರದೊಳಗಿಂದ ಏರತಕ್ಕ ನಾಲ್ಕು ರಾಜ್ಯಗಳು.
[18] ಆದರೆ ರಾಜ್ಯವು ಪರಾತ್ಪರನಾದ ದೇವರ ಭಕ್ತರಿಗೆ ಲಭಿಸುವುದು, ಅವರೇ ಅದನ್ನು ತಲತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವರು’ ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು.
[19] ಆ ಮೇಲೆ ಕಬ್ಬಿಣದ ಹಲ್ಲು, ತಾಮ್ರದ ಉಗುರುಳ್ಳ ಮೃಗವು ಕೆಲವನ್ನು ನುಂಗಿ ಕೆಲವನ್ನು ಚೂರುಚೂರು ಮಾಡಿ ಉಳಿದದ್ದನ್ನು ಕಾಲುಗಳಿಂದ ತುಳಿದು, ಇತರ ಮೃಗಗಳಿಗಿಂತ ವಿಲಕ್ಷಣವಾಗಿ ಅತಿ ಭಯಂಕರವಾಗಿತ್ತು.
[20] ಈ ನಾಲ್ಕನೆಯ ಮೃಗದ ವಿಷಯವಾಗಿಯೂ, ಅದರ ತಲೆಯ ಮೇಲಣ ಹತ್ತು ಕೊಂಬುಗಳ ವಿಷಯವಾಗಿಯೂ
[21] ನಾನು ನೋಡುತ್ತಿದ್ದ ಹಾಗೆ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ,
[22] ದೇವಭಕ್ತರೊಂದಿಗೆ ಯುದ್ಧಮಾಡಿ, ಮಹಾವೃದ್ಧನು ಬಂದು ಪರಾತ್ಪರನಾದ ದೇವರ ಭಕ್ತರಿಗಾಗಿ ನ್ಯಾಯತೀರಿಸಿ ಅವರಿಗೆ ರಾಜ್ಯವನ್ನು ದೊರಕಿಸುವ ತನಕ ಅವರನ್ನು ಗೆಲ್ಲುತ್ತಾ ಬಂದಿತ್ತು.”
[23] ಆಗ ಅವನು ನನಗೆ, “ಆ ನಾಲ್ಕನೆಯ ಮೃಗವು ಲೋಕದಲ್ಲಿ ಉಂಟಾಗುವ ನಾಲ್ಕನೆಯ ರಾಜ್ಯ; ಅದು ಉಳಿದ ರಾಜ್ಯಗಳಿಗಿಂತ ವಿಲಕ್ಷಣವಾಗಿ ಲೋಕವನ್ನೆಲ್ಲಾ ನುಂಗಿ ತುಳಿದು ಚೂರುಚೂರು ಮಾಡುವುದು.
[24] ಆ ಹತ್ತು ಕೊಂಬುಗಳ ವಿಷಯವೇನೆಂದರೆ ಆ ರಾಜ್ಯದಲ್ಲಿ ಹತ್ತು ಮಂದಿ ಅರಸರು ಉಂಟಾಗುವರು, ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮೊದಲಿನ ಅರಸರಿಗಿಂತ ವಿಲಕ್ಷಣನಾಗಿ ಮೂವರು ಅರಸರನ್ನು ಸದೆಬಡೆಯುವನು.
[25] ಪರಾತ್ಪರನಾದ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನಾದ ದೇವರ ಭಕ್ತರನ್ನು ಬಾಧಿಸಿ ಕಟ್ಟಳೆಯ ಕಾಲಗಳನ್ನೂ, ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸು ಮಾಡುವನು; ಆ ಭಕ್ತರು ಒಂದುಕಾಲ, ಎರಡುಕಾಲ, ಅರ್ಧಕಾಲ ಅವನ ಕೈವಶವಾಗಿರುವರು.
[26] ಆ ಮೇಲೆ ನ್ಯಾಯಸಭೆಯು ಕುಳಿತು ಅವನ ದೊರೆತನವನ್ನು ಕಿತ್ತು ತೀರಾ ಧ್ವಂಸಮಾಡಿ ಕೊನೆಗಾಣಿಸಿ ಬಿಡುವುದು.
[27] ಆಗ ಅವನ ರಾಜ್ಯ, ಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನಾದ ದೇವರ ಭಕ್ತ ಜನರಿಗೆ ಕೊಡಲ್ಪಡುವುದು; ಆತನ ರಾಜ್ಯವು ಶಾಶ್ವತ ರಾಜ್ಯ; ಸಕಲ ದೇಶಾಧಿಪತಿಗಳು ಆತನಿಗೆ ಅಧೀನರಾಗಿ ಸೇವೆಮಾಡುವರು” ಎಂದು ಹೇಳಿದನು.
[28] ಈ ಕನಸಿನ ಪ್ರಸ್ತಾಪವು ಇಲ್ಲಿಗೆ ಮುಗಿಯಿತು. ದಾನಿಯೇಲನಾದ ನಾನು ನನ್ನ ಯೋಚನೆಗಳಿಂದ ಬಹು ಕಳವಳಗೊಂಡೆ. ನನ್ನ ಮುಖವು ಕಳೆಗುಂದಿತು. ಆದರೂ ನಡೆದ ಸಂಗತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡೆ.