[1] ರಾಜನಾದ ನೆಬೂಕದ್ನೆಚ್ಚರನು ಅರುವತ್ತು ಮೊಳ ಎತ್ತರದ, ಆರು ಮೊಳ ಅಗಲದ ಒಂದು ಬಂಗಾರದ ಪ್ರತಿಮೆಯನ್ನು ಮಾಡಿಸಿ, ಬಾಬೆಲ್ ಸಂಸ್ಥಾನದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು.
[2] ಆಗ ರಾಜನಾದ ನೆಬೂಕದ್ನೆಚ್ಚರನು ತಾನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಮುಂತಾದವರನ್ನೂ, ಸಮಸ್ತ ಸಂಸ್ಥಾನಾಧಿಕಾರಿಗಳನ್ನೂ ಒಟ್ಟುಗೂಡಿಸುವಂತೆ ಸಮಾಚಾರವನ್ನು ಕಳುಹಿಸಿದನು.
[3] ಆ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿ, ಕೋಶಾಧ್ಯಕ್ಷ, ನ್ಯಾಯಾಧಿಪತಿ, ವಿಚಾರಕ ಇವರೂ ಸಮಸ್ತ ಸಂಸ್ಥಾನಾಧಿಕಾರಿಗಳೂ ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಪ್ರತಿಷ್ಠೋತ್ಸವಕ್ಕೆ ನೆರೆದು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ನಿಂತುಕೊಂಡರು.
[4] ಆಗ ಸಾರುವವನು ಗಟ್ಟಿಯಾಗಿ ಕೂಗಿ, “ವಿವಿಧ ಜನಾಂಗ, ಕುಲ, ಭಾಷೆಗಳವರೇ, ನಿಮಗೆ ರಾಜಾಜ್ಞೆಯಾಗಿದೆ.
[5] ನೀವು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಪೂಜಿಸಬೇಕು.
[6] ಯಾವನು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವನು” ಎಂದು ಸಾರಿದನು.
[7] ಆದಕಾರಣ ಅದೇ ಕಾಲದಲ್ಲಿ ಸಮಸ್ತ ಜನಾಂಗ, ಕುಲ, ಭಾಷೆಗಳವರು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಎಲ್ಲರೂ ಅಡ್ಡಬಿದ್ದು ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸಿದರು.
[8] ಹೀಗಿರಲು ಆ ಸಮಯದಲ್ಲಿ ಕೆಲವು ಮಂದಿ ಪಂಡಿತರು ಯೆಹೂದ್ಯರ ಮೇಲೆ ದೂರು ಹೊರಿಸುವುದಕ್ಕೆ ರಾಜನ ಸನ್ನಿಧಿಗೆ ಬಂದು
[9] ರಾಜನಾದ ನೆಬೂಕದ್ನೆಚ್ಚರನಿಗೆ, “ಅರಸನೇ, ಚಿರಂಜೀವಿಯಾಗಿರು!
[10] ಪ್ರಭುವೇ, ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು, ಬಂಗಾರದ ಪ್ರತಿಮೆಯನ್ನು ಪೂಜಿಸಲಿ.
[11] “ಯಾರು ಅಡ್ಡಬಿದ್ದು ಪೂಜಿಸುವುದಿಲ್ಲವೋ ಅವನು ಧಗಧಗಿಸುವ ಬೆಂಕಿಯೊಳಗೆ ಹಾಕಲ್ಪಡಲಿ ಎಂದು ಆಜ್ಞೆಮಾಡಿದಿಯಲ್ಲಾ.
[12] ನೀನು ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿಕೊಟ್ಟ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬ ಕೆಲವು ಮಂದಿ ಯೆಹೂದ್ಯರು ಇದ್ದಾರೆ. ರಾಜನೇ, ಇವರು ನಿನ್ನನ್ನು ಲಕ್ಷಿಸುವುದಿಲ್ಲ, ನಿನ್ನ ದೇವರುಗಳನ್ನು ಸೇವಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ” ಎಂದು ಅರಿಕೆಮಾಡಿದರು.
[13] ನೆಬೂಕದ್ನೆಚ್ಚರನು ಉಗ್ರರೋಷವುಳ್ಳವನಾಗಿ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಹಿಡಿದು ತರಬೇಕೆಂದು ಆಜ್ಞಾಪಿಸಿದನು.
[14] ಹಾಗೆ ಅವರನ್ನು ಹಿಡಿದು ತರಲು ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ, ನೀವು ನನ್ನ ದೇವರನ್ನು ಸೇವಿಸದೆ, ನಾನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸದೆ ಇರುವುದು ಬೇಕೆಂದೇ ಮಾಡಿದ್ದೋ?
[15] “ಈಗಲಾದರೂ ನೀವು ಸಿದ್ಧವಾಗಿದ್ದು ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು, ನಾನು ನಿಲ್ಲಿಸಿದ ಪ್ರತಿಮೆಯನ್ನು ಪೂಜಿಸಿದರೆ ಸರಿ; ಇಲ್ಲವಾದರೆ ತಕ್ಷಣವೇ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಲ್ಪಡುವಿರಿ; ನಿಮ್ಮನ್ನು ನನ್ನ ಕೈಯೊಳಗಿಂದ ಬಿಡಿಸಬಲ್ಲ ದೇವರು ಯಾರು?” ಎಂದು ಹೇಳಿದನು.
[16] ಇದನ್ನು ಕೇಳಿ ಶದ್ರಕ್ ಮೇಶಕ್, ಅಬೇದ್ನೆಗೋ ಎಂಬುವವರು ರಾಜನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ.
[17] ‘ಅರಸನೇ, ನಾವು ಆರಾಧಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಬೆಂಕಿಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು.
[18] ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಆರಾಧಿಸುವುದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವುದಿಲ್ಲ’” ಎಂದು ಉತ್ತರಕೊಟ್ಟರು.
[19] ಆಗ ನೆಬೂಕದ್ನೆಚ್ಚರನು ಕೋಪೋದ್ರೇಕದಿಂದ ಮುಖಭಾವವನ್ನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ಕಡೆಗೆ ತಿರುಗಿಸಿಕೊಂಡು ಬೆಂಕಿಯನ್ನು ನಿತ್ಯಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕು ಎಂದು ಆಜ್ಞಾಪಿಸಿದನು.
[20] ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು.
[21] ಅದರಂತೆ ಶಲ್ಯ, ಇಜಾರು, ಮುಂಡಾಸ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದ ಹಾಗೆಯೇ ಅವರನ್ನು ಕಟ್ಟಿ ಧಗಧಗನೆ ಉರಿಯುವ ಬೆಂಕಿಯೊಳಗೆ ಹಾಕಿಬಿಟ್ಟರು.
[22] ಹೀಗಾಗಿ ರಾಜಾಜ್ಞೆಯು ಖಂಡಿತವಾಗಿದ್ದುದರಿಂದಲೂ ಬೆಂಕಿಯ ಕಾವು ಅತಿ ತೀಕ್ಷ್ಣವಾಗಿದ್ದುದರಿಂದಲೂ ಅಗ್ನಿಜ್ವಾಲೆಯು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಎತ್ತಿ ಹಾಕಿದವರನ್ನೇ ದಹಿಸಿಬಿಟ್ಟಿತು.
[23] ಶದ್ರಕ್, ಮೇಶಕ್, ಅಬೇದ್ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯ ಮಧ್ಯದಲ್ಲಿ ಬಿದ್ದುಬಿಟ್ಟರು.
[24] ಆಗ ರಾಜನಾದ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳಿಗೆ, “ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ?” ಎಂದು ಕೇಳಲು ಅವರು ರಾಜನಿಗೆ, “ಅರಸನೇ, ಹೌದು, ಹಾಕಿರುವುದು ಸತ್ಯ” ಎಂದು ಉತ್ತರಕೊಟ್ಟರು.
[25] ಅದಕ್ಕೆ ಅವನು, “ಇಗೋ, ಕಟ್ಟಿಲ್ಲದ ನಾಲ್ವರನ್ನು ನೋಡುತ್ತೇನೆ, ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ, ಅವರಿಗೆ ಯಾವ ಹಾನಿಯೂ ಇಲ್ಲ; ನಾಲ್ಕನೆಯವನ ರೂಪವು ದೇವಕುಮಾರನ ರೂಪದಂತಿದೆ” ಎಂದು ಹೇಳಿದನು.
[26] ಆಗ ನೆಬೂಕದ್ನೆಚ್ಚರನು ಧಗಧಗನೆ ಉರಿಯುವ ಬೆಂಕಿಯ ಬಾಯಿಯ ಬಳಿಗೆ ಹೋಗಿ, “ಪರಾತ್ಪರದೇವರ ಸೇವಕರಾದ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರೇ ಬನ್ನಿ, ಹೊರಗೆ ಬನ್ನಿ ಎಂದು ಕೂಗಲು, ಶದ್ರಕ್ ಮೇಶಕ್ ಅಬೇದ್ನೆಗೋ ಎಂಬುವವರು ಬೆಂಕಿಯೊಳಗಿಂದ ಹೊರಟು ಬಂದರು.
[27] ಅಲ್ಲಿ ಕೂಡಿದ್ದ ಉಪರಾಜ, ನಾಯಕ, ದೇಶಾಧಿಪತಿ, ಮಂತ್ರಿಗಳು ಅವರನ್ನು ನೋಡಿ ಅವರ ಮೇಲೆ ಬೆಂಕಿಯ ಅಧಿಕಾರವು ನಡೆದಿಲ್ಲ, ಅವರ ತಲೆಕೂದಲೂ ಸುಟ್ಟಿಲ್ಲ, ಅವರ ಶಲ್ಯಗಳಿಗೆ ವಿಕಾರವಿಲ್ಲ, ಬೆಂಕಿಯ ವಾಸನೆಯೇ ಮುಟ್ಟಿಲ್ಲ” ಎಂದು ತಿಳಿದುಕೊಂಡರು.
[28] ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲವೇ.
[29] ಸಕಲ ಜನಾಂಗ, ಕುಲ, ಭಾಷೆಗಳವರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರ ದೇವರ ವಿಷಯದಲ್ಲಿ ಅಲ್ಲ ಸಲ್ಲದ ಮಾತುಗಳನ್ನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ, ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ; ಹೀಗೆ ಉದ್ಧರಿಸಲು ಸಮರ್ಥನಾದ ಇನ್ಯಾವ ದೇವರೂ ಇಲ್ಲವಲ್ಲಾ” ಎಂದು ಹೇಳಿದನು.
[30] ಬಳಿಕ ರಾಜನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರನ್ನು ಬಾಬೆಲ್ ಸಂಸ್ಥಾನದಲ್ಲಿ ಉನ್ನತ ಪದವಿ ನೀಡಿ ಗೌರವಿಸಿದನು.