Skip to content
Opens in a new window
Listen to this chapter • 10:21

[1] ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಕನಸು ಕಂಡು ತತ್ತರಗೊಂಡನು, ಅವನಿಗೆ ನಿದ್ರೆ ತಪ್ಪಿತು.

[2] ಆಗ ರಾಜನು ತನ್ನ ಕನಸುಗಳ ಅಭಿಪ್ರಾಯವನ್ನು ತಿಳಿದುಕೊಳ್ಳಲು ಜೋಯಿಸರನ್ನೂ, ಮಂತ್ರವಾದಿಗಳನ್ನೂ, ಮಾಟಗಾರರನ್ನೂ, ಪಂಡಿತರನ್ನೂ ಕರೆಯಿಸಲು ಅವರು ಸನ್ನಿಧಿಗೆ ಬಂದು ರಾಜನ ಮುಂದೆ ನಿಂತುಕೊಂಡರು.

[3] ರಾಜನು ಅವರಿಗೆ, “ನಾನು ಕನಸುಕಂಡೆನು, ಅದರ ಅರ್ಥವೇನೋ ಎಂದು ನನ್ನ ಮನಸ್ಸು ತತ್ತರಿಸುತ್ತದೆ” ಎಂಬುದಾಗಿ ಹೇಳಿದನು.

[4] ಆಗ ಆ ಪಂಡಿತರು ಅರಮಾಯ ಭಾಷೆಯಲ್ಲಿ ರಾಜನಿಗೆ, “ಅರಸನೇ, ಚಿರಂಜೀವಿಯಾಗಿರು; ಆ ಕನಸನ್ನು ನಿನ್ನ ದಾಸರಿಗೆ ಹೇಳು; ಅದರ ತಾತ್ಪರ್ಯವನ್ನು ತಿಳಿಸುವೆವು” ಎಂದು ಅರಿಕೆಮಾಡಿದರು.

[5] ಆಗ ರಾಜನು ಪಂಡಿತರಿಗೆ ಪ್ರತ್ಯುತ್ತರವಾಗಿ, “ನನ್ನ ಮಾತು ಖಂಡಿತ; ನೀವೇ ಆ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸದಿದ್ದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುವೆನು, ನಿಮ್ಮ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಿಬಿಡುವೆನು.

[6] ನೀವು ಆ ಕನಸನ್ನೂ, ಅದರ ಅರ್ಥವನ್ನೂ ತಿಳಿಸಿದರೆ ನನ್ನಿಂದ ನಿಮಗೆ ದಾನ ಮತ್ತು ಬಹುಮಾನಗಳೂ, ವಿಶೇಷ ಸನ್ಮಾನಗಳೂ ಲಭಿಸುವವು. ಆದಕಾರಣ ಆ ಕನಸನ್ನೂ, ಅದರ ಅಭಿಪ್ರಾಯವನ್ನೂ ನನಗೆ ತಿಳಿಸಿರಿ” ಎಂದು ಹೇಳಿದನು.

[7] ಪಂಡಿತರು ಉತ್ತರವಾಗಿ, “ರಾಜನು ತನ್ನ ದಾಸರಿಗೆ ಕನಸನ್ನು ತಿಳಿಸಲಿ, ನಾವು ಅದರ ತಾತ್ಪರ್ಯವನ್ನು ವಿವರಿಸುವೆವು” ಎಂಬ ಉತ್ತರವನ್ನೇ ಪುನಃ ಕೊಟ್ಟರು.

[8] ಅದಕ್ಕೆ ರಾಜನು, “ನೀವು ಆ ಕನಸನ್ನು ನನಗೆ ತಿಳಿಸದಿದ್ದರೆ ಮರಣದಂಡನೆಯ ನಿಯಮವೇ ನಿಮಗೆ ಗತಿಯಾಗುವುದು ಎಂಬ ನನ್ನ ಮಾತು ಖಂಡಿತವೆಂದು ನೀವು ತಿಳಿದುಕೊಂಡು ಕಾಲಹರಣ ಮಾಡುತ್ತಿದ್ದೀರಿ, ಇದು ನನಗೆ ಚೆನ್ನಾಗಿ ಗೊತ್ತು.

[9] ಕಾಲಾಂತರವನ್ನು ನಿರೀಕ್ಷಿಸಿಕೊಂಡೇ ನನ್ನ ಮುಂದೆ ಕೆಟ್ಟ ಸುಳ್ಳುಗಳನ್ನು ಆಡುತ್ತಿರಬೇಕೆಂದು ಒಪ್ಪಂದ ಮಾಡಿಕೊಂಡಿದ್ದೀರಿ; ಅಂತು ಆ ಕನಸನ್ನು ತಿಳಿಸಬೇಕು; ಆದುದರಿಂದ ನೀವು ಅದರ ಅರ್ಥವನ್ನೂ ವಿವರಿಸಬಲ್ಲಿರೆಂದು ತಿಳಿದುಕೊಳ್ಳುವೆನು” ಎಂದು ಹೇಳಿದನು.

[10] ಆಗ ಆ ಪಂಡಿತರು ರಾಜನ ಸನ್ನಿಧಿಯ ಮುಂದೆ, “ರಾಜನು ಕೇಳಿದ ಸಂಗತಿಯನ್ನು ತಿಳಿಸಬಲ್ಲವನು ಲೋಕದಲ್ಲಿ ಯಾರೂ ಇಲ್ಲ; ಎಷ್ಟೇ ಬಲಿಷ್ಠನು, ಎಷ್ಟೇ ಪ್ರಬಲನು ಆದ ಯಾವ ಅರಸನೂ ಜೋಯಿಸರನ್ನಾಗಲಿ, ಮಾಟಗಾರನನ್ನಾಗಲಿ, ಪಂಡಿತನನ್ನಾಗಲಿ, ಇಂಥ ಸಂಗತಿಯನ್ನು ಎಂದೂ ಕೇಳಿದ್ದಿಲ್ಲ.

[11] ರಾಜನು ಕೇಳುವ ಸಂಗತಿಯು ಅತಿ ಕಷ್ಟವಾದದ್ದು. ನರಜನ್ಮದವರ ಮಧ್ಯೆ ವಾಸಿಸುವ ದೇವರುಗಳೇ ಹೊರತು ಇನ್ಯಾರೂ ರಾಜನ ಸಮ್ಮುಖದಲ್ಲಿ ಅದನ್ನು ತಿಳಿಸಲಾರರು” ಎಂದು ಉತ್ತರಕೊಟ್ಟರು.

[12] ಇದನ್ನು ಕೇಳಿ, ರಾಜನು ಉಗ್ರರೋಷವುಳ್ಳವನಾಗಿ ಬಾಬೆಲಿನ ಸಕಲ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು.

[13] ಕೂಡಲೆ ಆ ಆಜ್ಞೆಯು ಪ್ರಕಟವಾಯಿತು. ವಿದ್ವಾಂಸರು ಪ್ರಾಣಾಪಾಯಕ್ಕೆ ಗುರಿಯಾದರು; ದಾನಿಯೇಲನನ್ನೂ, ಅವನ ಸ್ನೇಹಿತರನ್ನೂ ಕೊಲ್ಲುವುದಕ್ಕೆ ಹುಡುಕಿದರು.

[14] ರಾಜನ ಮೈಗಾವಲಿನವರ ದಳವಾಯಿಯಾದ ಅರ್ಯೋಕನು ಬಾಬೆಲಿನ ವಿದ್ವಾಂಸರ ಸಂಹಾರಕ್ಕೆ ಹೊರಟಾಗ, ದಾನಿಯೇಲನು ಬುದ್ಧಿವಿವೇಕಗಳಿಂದ ಅವನ ಸಂಗಡ ಮಾತನಾಡಿ,

[15] “ಈ ರಾಜಾಜ್ಞೆಯು ಏಕೆ ಇಷ್ಟು ಉಗ್ರವಾಗಿದೆ?” ಎಂದು ಕೇಳಲು ಅರ್ಯೋಕನು ನಡೆದ ಸಂಗತಿಯನ್ನು ದಾನಿಯೇಲನಿಗೆ ತಿಳಿಸಿದನು.

[16] ಆ ಮೇಲೆ ದಾನಿಯೇಲನು ಅರಮನೆಗೆ ಬಂದು, “ನನಗೆ ಸಮಯವನ್ನು ಕೊಟ್ಟರೆ ನಾನು ಆ ಕನಸಿನ ಅರ್ಥವನ್ನು ರಾಜನಿಗೆ ವಿವರಿಸುವೆನು” ಎಂದು ಅರಿಕೆ ಮಾಡಿದನು.

[17] ಬಳಿಕ ದಾನಿಯೇಲನು ತನ್ನ ಮನೆಗೆ ಹೋಗಿ ಹನನ್ಯ, ಮೀಶಾಯೇಲ, ಅಜರ್ಯ ಎಂಬ ತನ್ನ ಸ್ನೇಹಿತರಿಗೆ,

[18] “ದಾನಿಯೇಲನು ಆ ಸಮಾಚಾರವನ್ನು ತಿಳಿಸಿ, ನಾವು ಬಾಬೆಲಿನ ಇತರ ವಿದ್ವಾಂಸರೊಂದಿಗೆ ನಾಶವಾಗದಂತೆ ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರಿಸಲು ಆತನನ್ನು ಬೇಡಿಕೊಳ್ಳೋಣ” ಎಂದನು.

[19] ಆಗ ಆ ರಹಸ್ಯವು ರಾತ್ರಿಯ ಸ್ವಪ್ನದಲ್ಲಿ ದಾನಿಯೇಲನಿಗೆ ಪ್ರಕಟವಾಯಿತು. ಕೂಡಲೆ ದಾನಿಯೇಲನು ಪರಲೋಕ ದೇವರನ್ನು ಹೀಗೆ ಸ್ತುತಿಸಿದನು,

[20] “ದೇವರ ನಾಮಕ್ಕೆ ಯುಗಯುಗಾಂತರಗಳಲ್ಲಿಯೂ ಸ್ತುತಿಸ್ತೋತ್ರ ಉಂಟಾಗಲಿ! ಜ್ಞಾನ ತ್ರಾಣಗಳು ಆತನವುಗಳೇ.

[21] ಕಾಲ ಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ಕಡೆಗಣಿಸುತ್ತಾನೆ, ನೆಲೆಸುವಂತೆ ಮಾಡುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ.

[22] ಆತನು ಅಗಾಧ ವಿಷಯಗಳನ್ನೂ ಗೂಢಾರ್ಥಗಳನ್ನೂ ಬಯಲಿಗೆ ತರುತ್ತಾನೆ; ಕಗ್ಗತ್ತಲೆಯಲ್ಲಿ ಅಡಗಿರುವುದೂ ಆತನಿಗೆ ಗೋಚರವಾಗುವುದು; ತೇಜಸ್ಸು ಆತನಲ್ಲೇ ನೆಲೆಗೊಂಡಿದೆ.

[23] ನನ್ನ ಪೂರ್ವಿಕರ ದೇವರೇ, ನಿನ್ನನ್ನು ಸ್ತುತಿಸುತ್ತೇನೆ, ಕೊಂಡಾಡುತ್ತೇನೆ, ನೀನು ನನಗೆ ಜ್ಞಾನತ್ರಾಣಗಳನ್ನು ದಯಪಾಲಿಸಿ ನಾವು ಬೇಡಿದ್ದನ್ನು ನನಗೆ ತೋರ್ಪಡಿಸಿದ್ದಿಯಲ್ಲಾ; ಹೌದು, ರಾಜನ ರಹಸ್ಯವನ್ನು ನಮಗೆ ಪ್ರಕಟಪಡಿಸಿರುವೆ” ಎಂದನು.

[24] ನಂತರ ದಾನಿಯೇಲನು ಬಾಬೆಲಿನ ವಿದ್ವಾಂಸರನ್ನು ಕೊಲ್ಲುವುದಕ್ಕೆ ರಾಜನು ನೇಮಿಸಿದ ಅರ್ಯೋಕನ ಬಳಿಗೆ ಹೋಗಿ ಅವನಿಗೆ, “ಬಾಬೆಲಿನ ವಿದ್ವಾಂಸರನ್ನು ಕೊಲ್ಲಬೇಡ; ನನ್ನನ್ನು ರಾಜನ ಸನ್ನಿಧಿಗೆ ಬಿಡು; ನಾನು ಕನಸಿನ ಅಭಿಪ್ರಾಯವನ್ನು ರಾಜನಿಗೆ ತಿಳಿಸುವೆನು” ಎಂದು ಹೇಳಿದನು.

[25] ಕೂಡಲೆ ಅರ್ಯೋಕನು ದಾನಿಯೇಲನನ್ನು ರಾಜನ ಬಳಿಗೆ ಶೀಘ್ರವಾಗಿ ಕರೆದುಕೊಂಡು ಹೋಗಿ, “ರಾಜನೇ, ಕನಸಿನ ಅಭಿಪ್ರಾಯವನ್ನು ನಿನಗೆ ತಿಳಿಸಬಲ್ಲವನೊಬ್ಬನು ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ನನಗೆ ಸಿಕ್ಕಿದ್ದಾನೆ” ಎಂದು ಅರಿಕೆಮಾಡಿದನು.

[26] ರಾಜನು ಬೇಲ್ತೆಶಚ್ಚರನೆಂಬ ಅಡ್ಡಹೆಸರಿನ ದಾನಿಯೇಲನನ್ನು, “ನಾನು ಕಂಡ ಕನಸನ್ನೂ, ಅದರ ಅರ್ಥವನ್ನೂ ನನಗೆ ತಿಳಿಸಬಲ್ಲೆಯಾ?” ಎಂದು ಕೇಳಿದನು.

[27] ಅದಕ್ಕೆ ದಾನಿಯೇಲನು ರಾಜನನ್ನು ಕುರಿತು, “ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ, ಮಾಟಗಾರರಾಗಲಿ, ಜೋಯಿಸರಾಗಲಿ, ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು.

[28] ಆದರೆ ರಹಸ್ಯಗಳನ್ನು ಪ್ರಕಟಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಆತನು ಪರಲೋಕದಲ್ಲಿದ್ದಾನೆ. ಮುಂದೆ ನಡೆಯತಕ್ಕದ್ದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ. ನಿನ್ನ ಕನಸು, ಹಾಸಿಗೆಯ ಮೇಲೆ ನಿನ್ನ ಮನಸ್ಸಿನಲ್ಲಿ ಬಿದ್ದ ಸ್ವಪ್ನಗಳು ಇವೇ.

[29] “ರಾಜನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಮುಂದೆ ಏನಾಗುವುದೋ? ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ; ರಹಸ್ಯಗಳನ್ನು ವ್ಯಕ್ತಗೊಳಿಸುವಾತನು ಮುಂದೆ ಸಂಭವಿಸುವುದನ್ನು ನಿನಗೆ ಗೋಚರಮಾಡಿದ್ದಾನೆ.

[30] ನಾನೇ ಎಲ್ಲಾ ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತನಲ್ಲ, ಕನಸಿನ ಅಭಿಪ್ರಾಯವು ರಾಜನಿಗೆ ಗೋಚರವಾಗಿ ನಿನ್ನ ಮನಸ್ಸಿನ ಯೋಚನೆಯ ವಿಷಯವು ನಿನಗೆ ತಿಳಿದು ಬರಲಿ ಎಂದು ಈ ರಹಸ್ಯವು ನನಗೂ ಪ್ರಕಟವಾಗಿದೆ.

[31] “ರಾಜನೇ, ನೀನು ಕಂಡದ್ದು ಆಹಾ, ಅದ್ಭುತಪ್ರತಿಮೆ; ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆಯು ನಿನ್ನೆದುರಿಗೆ ನಿಂತಿತ್ತು; ಭಯಂಕರವಾಗಿ ಕಾಣಿಸಿತು.

[32] ಆ ಪ್ರತಿಮೆಯ ತಲೆಯು ಅಪರಂಜಿ, ಎದೆತೋಳುಗಳು ಬೆಳ್ಳಿ, ಹೊಟ್ಟೆಸೊಂಟಗಳು ತಾಮ್ರ,

[33] ಕಾಲುಗಳು ಕಬ್ಬಿಣ, ಪಾದಗಳು ಕಬ್ಬಿಣ ಮತ್ತು ಮಣ್ಣು.

[34] “ನೀನು ನೋಡುತ್ತಿರಲಾಗಿ ಬೆಟ್ಟದೊಳಗಿಂದ ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು, ಸಿಡಿದು ಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನ ಪಾದಗಳಿಗೆ ಬಡಿದು, ಚೂರುಚೂರು ಮಾಡಿತು.

[35] ಆಗ ಕಬ್ಬಿಣ, ಮಣ್ಣು, ತಾಮ್ರ, ಬೆಳ್ಳಿ ಬಂಗಾರಗಳೆಲ್ಲವೂ ಪುಡಿಪುಡಿಯಾಗಿ ಸುಗ್ಗಿಯ ಕಣಗಳ ಹೊಟ್ಟಿನಂತಾದವು; ಗಾಳಿಯು ತೂರಿಕೊಂಡು ಹೋಗಲು ಅವುಗಳಿಗೆ ನೆಲೆಯೇ ಇಲ್ಲವಾಯಿತು; ಪ್ರತಿಮೆಗೆ ಬಡಿದ ಆ ಬಂಡೆಯು ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು.

[36] “ಕನಸು ಇದೇ; ಇದರ ಅರ್ಥವನ್ನೂ ನಿನ್ನಲ್ಲಿ ಅರಿಕೆಮಾಡುತ್ತೇನೆ.

[37] ಅರಸನೇ, ನೀನು ರಾಜಾಧಿರಾಜ, ಪರಲೋಕ ದೇವರು ನಿನಗೆ ರಾಜ್ಯಬಲ, ಪರಾಕ್ರಮ, ವೈಭವಗಳನ್ನು ದಯಪಾಲಿಸಿದ್ದಾನೆ.

[38] ನರಜಾತಿಯವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ, ಭೂಜಂತುಗಳನ್ನೂ ನಿನ್ನ ಕೈಗೆ ಒಪ್ಪಿಸಿ ನೀನು ಅವುಗಳನ್ನೆಲ್ಲಾ ಆಳುವಂತೆ ಮಾಡಿದ್ದಾನೆ; ನೀನೇ ಆ ಬಂಗಾರದ ತಲೆ.

[39] “ನಿನ್ನ ಕಾಲವಾದ ಮೇಲೆ ನಿನಗಿಂತ ಬಿಳುಪಾದ (ಬೆಳ್ಳಿ) ಮತ್ತೊಂದು ರಾಜ್ಯವು ಉಂಟಾಗುವುದು. ಅನಂತರ ಬೇರೊಂದು ಮೂರನೆಯ ರಾಜ್ಯವು ತಾಮ್ರದ್ದಾಗಿ ತಲೆದೋರಿ ಭೂಮಂಡಲವನ್ನೆಲ್ಲಾ ಆಳುವುದು.

[40] “ನಾಲ್ಕನೆಯ ರಾಜ್ಯವು ಕಬ್ಬಿಣದಷ್ಟು ಗಟ್ಟಿ; ಕಬ್ಬಿಣವು ಎಲ್ಲಾ ವಸ್ತುಗಳನ್ನು ಚೂರುಚೂರಾಗಿ ಒಡೆದು ಹಾಕುತ್ತದಷ್ಟೆ; ಸಕಲವನ್ನೂ ಧ್ವಂಸಮಾಡುವ ಕಬ್ಬಿಣದಂತೆಯೇ ಅದು ಚೂರುಚೂರಾಗಿ ಧ್ವಂಸಮಾಡುವುದು.

[41] “ಪಾದಗಳಲ್ಲಿ ಮತ್ತು ಬೆರಳುಗಳಲ್ಲಿ ಒಂದಂಶವು ಕುಂಬಾರನ ಮಣ್ಣೂ, ಒಂದಂಶವು ಕಬ್ಬಿಣವೂ ಆಗಿದ್ದುದನ್ನು ನೀನು ನೋಡಿದ ಪ್ರಕಾರ ಆ ರಾಜ್ಯವು ಭಿನ್ನ ಭಿನ್ನವಾಗಿರುವುದು; ಜೇಡಿಮಣ್ಣಿನೊಂದಿಗೆ ಕಬ್ಬಿಣವು ಮಿಶ್ರವಾಗಿದ್ದದ್ದನ್ನು ನೀನು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲವು ಸೇರಿರುವುದು.

[42] ಕಾಲ್ಬೆರಳುಗಳ ಒಂದಂಶವು ಕಬ್ಬಿಣ, ಒಂದಂಶವು ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶವು ಗಟ್ಟಿ, ಒಂದಂಶವು ಜೊಂಡಾಗಿರುವುದು.

[43] ಕಬ್ಬಿಣವು ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀನು ನೋಡಿದ ಮೇರೆಗೆ, ಆ ರಾಜ್ಯಾಗಳ ಸಂತತಿ ಸಂಬಂಧದಿಂದ ಬೆರೆತುಕೊಳ್ಳುವವು. ಆದರೆ ಕಬ್ಬಿಣವು ಮಣ್ಣಿನೊಂದಿಗೆ ಹೇಗೆ ಕೂಡಿಕೊಳ್ಳುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಹೊಂದಿಕೊಳ್ಳುವುದಿಲ್ಲ.

[44] “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು. ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವುದು.

[45] ಬೆಟ್ಟದೊಳಗಿಂದ ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು ಕಬ್ಬಿಣ, ತಾಮ್ರ, ಮಣ್ಣು, ಬೆಳ್ಳಿಬಂಗಾರಗಳನ್ನು ಚೂರುಚೂರು ಮಾಡಿದ್ದು ನಿನ್ನ ಕಣ್ಣಿಗೆ ಬಿತ್ತಲ್ಲಾ. ಇದರಿಂದ ಪರಲೋಕದೇವರು ಮುಂದೆ ನಡೆಯುವ ವಿಷಯಗಳನ್ನು ರಾಜನಿಗೆ ತಿಳಿಯಪಡಿಸಿದ್ದಾನೆ. ಕನಸು ನಿಜ, ಅದರ ಅರ್ಥವು ನಂಬತಕ್ಕದು” ಎಂದು ಹೇಳಿದನು.

[46] ಆಗ ರಾಜನಾದ ನೆಬೂಕದ್ನೆಚ್ಚರನು ಅಡ್ಡಬಿದ್ದು, “ದಾನಿಯೇಲನನ್ನು ಪೂಜಿಸಿ, ಅವನಿಗೆ ನೈವೇದ್ಯಮಾಡಿ ಧೂಪ ಹಾಕಬೇಕು” ಎಂದು ಆಜ್ಞಾಪಿಸಿದನು.

[47] ಅರಸನು ದಾನಿಯೇಲನಿಗೆ ಪ್ರತ್ಯುತ್ತರವಾಗಿ, “ನೀನು ಈ ರಹಸ್ಯವನ್ನು ಬಯಲಿಗೆ ತರಲು ಸಮರ್ಥನಾದ ಕಾರಣ ನಿಮ್ಮ ದೇವರು ದೇವಾಧಿದೇವನೂ, ರಾಜರ ಒಡೆಯನೂ, ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ ಎಂಬುದು ನಿಶ್ಚಯ” ಎಂದು ಹೇಳಿದನು.

[48] ಬಳಿಕ ರಾಜನು ದಾನಿಯೇಲನನ್ನು ಸನ್ಮಾನಿಸಿ, ಅವನಿಗೆ ಅಮೂಲ್ಯವಾದ ಅನೇಕ ಬಹುಮಾನಗಳನ್ನೂ ದಾನಗಳನ್ನು ಕೊಟ್ಟು, ಬಾಬೆಲ್ ಸಂಸ್ಥಾನವನ್ನೆಲ್ಲಾ ಅಧೀನಪಡಿಸಿ, ಬಾಬೆಲಿನ ವಿದ್ವಾಂಸರ ಸಕಲ ಮುಖ್ಯಸ್ಥರಿಗೂ ಅವನನ್ನು ಮುಖ್ಯಸ್ಥನನ್ನಾಗಿ ನೇಮಿಸಿದನು.

[49] ದಾನಿಯೇಲನು ಬಿನ್ನಹ ಮಾಡಲು ರಾಜನು ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನು ಅರಮನೆಯಲ್ಲಿ ಉಳಿದನು.

ದಾನಿಯೇಲನು — Chapters