Skip to content
Opens in a new window
Listen to this chapter • 2:48

[1] “ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕನಾದ ದೇವದೂತ ಮೀಕಾಯೇಲನು ಆ ಕಾಲದಲ್ಲಿ ಏಳುವನು. ಮೊಟ್ಟಮೊದಲು ಜನಾಂಗವು ಉಂಟಾದ ದಿನದಿಂದ ಇಂದಿನವರೆಗೂ ಸಂಭವಿಸದಂಥ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು.

[2] ಸತ್ತು ಧೂಳಿನ ನೆಲದೊಳಗೆ ದೀರ್ಘ ನಿದ್ರೆಮಾಡುವವರಲ್ಲಿ ಅನೇಕರು ಎಚ್ಚೆತ್ತು ಕೆಲವರು ನಿತ್ಯಜೀವವನ್ನು, ಕೆಲವರು ನಿಂದನೆ ಮತ್ತು ನಿತ್ಯತಿರಸ್ಕಾರಗಳನ್ನು ಅನುಭವಿಸುವರು.

[3] ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು. ಬಹಳ ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.

[4] ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆ ಹಾಕು. ಅಂತ್ಯಕಾಲದ ವರೆಗೆ ಮರೆಯಾಗಿರಲಿ. ಬಹಳ ಜನರು ಅತ್ತಿತ್ತ ತಿರುಗುವರು, ತಿಳಿವಳಿಕೆಯು ಹೆಚ್ಚುವುದು.”

[5] ಕೂಡಲೆ ದಾನಿಯೇಲನಾದ ನಾನು ಮತ್ತಿಬ್ಬರನ್ನು ಕಂಡೆನು. ಅವರೊಳಗೆ ಒಬ್ಬನು ನದಿಯ ಈ ದಡದಲ್ಲಿ, ಇನ್ನೊಬ್ಬನು ಆ ದಡದಲ್ಲಿ ನಿಂತಿದ್ದರು.

[6] ಇವರಲ್ಲಿ ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದುಕೊಂಡಿದ್ದ ಒಬ್ಬನು, “ಈ ಅಪೂರ್ವ ಕಾರ್ಯಗಳು ಕೊನೆಗಾಣುವುದಕ್ಕೆ ಎಷ್ಟು ಕಾಲ ಹಿಡಿಯುವುದು?” ಎಂದು ಕೇಳಿದನು.

[7] ನದಿಯ ನೀರಿನ ಮೇಲೆ ನಾರಿನ ಹೊದಿಕೆಯನ್ನು ಹೊದ್ದುಕೊಂಡು ನಿಂತಿದ್ದ ಪುರುಷನನ್ನು ಕೇಳಲು, ಆ ಪುರುಷನು ಎಡ ಮತ್ತು ಬಲಗೈಗಳನ್ನು ಆಕಾಶದ ಕಡೆಗೆ ಎತ್ತಿಕೊಂಡು, “ಶಾಶ್ವತ ಜೀವಸ್ವರೂಪನಾಣೆ, ಒಂದು ಕಾಲ, ಎರಡುಕಾಲ, ಅರ್ಧಕಾಲ ಕಳೆಯಬೇಕು. ದೇವಜನರ ಬಲವನ್ನು ಸಂಪೂರ್ಣವಾಗಿ ಮುರಿದುಬಿಟ್ಟ ಮೇಲೆ ಈ ಕಾರ್ಯಗಳೆಲ್ಲಾ ಮುಕ್ತಾಯವಾಗುವವು” ಎಂಬುದಾಗಿ ನನ್ನ ಕಿವಿಗೆ ಬೀಳುವಂತೆ ಹೇಳಿದನು.

[8] ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ. ಆಗ ನಾನು, “ಎನ್ನೊಡೆಯನೇ, ಈ ಕಾರ್ಯಗಳ ಪರಿಣಾಮವೇನು?” ಎಂದು ಪ್ರಶ್ನೆ ಮಾಡಲು,

[9] ಅವನು, “ದಾನಿಯೇಲನೇ, ಈ ಮಾತುಗಳು ಅಂತ್ಯಕಾಲದ ವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ, ಹೋಗು.

[10] ಅನೇಕರು ತಮ್ಮನ್ನು ಶುದ್ಧೀಕರಿಸಿ, ಶುಭ್ರಮಾಡಿಕೊಂಡು ಶೋಧಿತರಾಗುವರು; ದುಷ್ಟರು ದುಷ್ಟರಾಗಿಯೇ ನಡೆಯುವರು, ಅವರಲ್ಲಿ ಯಾರಿಗೂ ವಿವೇಕವಿರದು; ಜ್ಞಾನಿಗಳಿಗೆ ವಿವೇಕವಿರುವುದು.

[11] ನಿತ್ಯಹೋಮವು ನೀಗಿಸಲ್ಪಟ್ಟು, ಹಾಳುಮಾಡುವ ಅಸಹ್ಯ ವಸ್ತುವು ಪ್ರತಿಷ್ಠಿತವಾದ ಮೇಲೆ ಸಾವಿರದ ಇನ್ನೂರತ್ತೊಂಭತ್ತು ದಿನಗಳು ಕಳೆಯಬೇಕು.

[12] ಕಾದುಕೊಂಡು, ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯವರೆಗೆ ತಾಳುವವನು ಧನ್ಯನು.

[13] ನೀನು ಹೋಗಿ ಅಂತ್ಯದ ವರೆಗೆ ವಿಶ್ವಾಸದಿಂದ ಇರು. ನೀನು ದೀರ್ಘನಿದ್ರೆಯನ್ನು ಹೊಂದಿ, ಯುಗದ ಸಮಾಪ್ತಿಯಲ್ಲಿ ಎದ್ದು, ನಿನಗಾಗುವ ಸ್ವತ್ತಿನೊಳಗೆ ನಿಲ್ಲುವಿ” ಎಂದು ಹೇಳಿದನು.

ದಾನಿಯೇಲನು — Chapters