Skip to content
Opens in a new window
Listen to this chapter • 4:20

[1] ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆ ಹಾಕಿದನು.

[2] ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನೂ, ದೇವಾಲಯದ ಅನೇಕ ಪಾತ್ರೆಗಳನ್ನೂ ಅವನ ವಶಕ್ಕೆ ಕೊಡಲು ಅವನು ಅವುಗಳನ್ನು ಶಿನಾರ್ ದೇಶಕ್ಕೆ ಸಾಗಿಸಿ ತನ್ನ ದೇವರ ಮಂದಿರಕ್ಕೆ ತಂದು ಆ ದೇವರ ಭಂಡಾರದಲ್ಲಿ ಸೇರಿಸಿಬಿಟ್ಟನು.

[3] ಅನಂತರ ಆ ರಾಜನು ತನ್ನ ಕಂಚುಕಿಯರಲ್ಲಿ ಮುಖ್ಯಸ್ಥನಾದ ಅಶ್ಪೆನಜನಿಗೆ, “ನೀನು ಇಸ್ರಾಯೇಲರಲ್ಲಿ ಅಂದರೆ ರಾಜವಂಶೀಯರಲ್ಲಿ

[4] ಮತ್ತು ಪ್ರಧಾನರಲ್ಲಿ ಅಂಗದೋಷವಿಲ್ಲದವರೂ, ಸುಂದರರೂ, ಸಮಸ್ತ ಶಾಸ್ತ್ರಜ್ಞರೂ, ಪಂಡಿತರೂ, ವಿದ್ಯಾನಿಪುಣರೂ, ರಾಜಾಲಯದಲ್ಲಿ ಸನ್ನಿಧಿ ಸೇವೆಮಾಡಲು ಸಮರ್ಥರೂ ಆದ ಕೆಲವು ಯುವಕರನ್ನು ಇಲ್ಲಿಗೆ ಕರೆದುತಂದು ಅವರಿಗೆ ಕಸ್ದೀಯ ಪಂಡಿತರ ಭಾಷೆಯನ್ನೂ, ಶಾಸ್ತ್ರಗಳನ್ನೂ ಕಲಿಸಬೇಕು” ಎಂಬುದಾಗಿ ಅಪ್ಪಣೆಕೊಟ್ಟನು.

[5] ಇದಲ್ಲದೆ, “ಇನ್ನು ಮುಂದೆ ಅವರು ಸನ್ನಿಧಿಸೇವಕರಾಗಲೆಂದು ತನ್ನ ಭೋಜನ ಪದಾರ್ಥಗಳನ್ನೂ, ರಾಜನು ಕುಡಿಯುವ ದ್ರಾಕ್ಷಾರಸವನ್ನೂ ಅವರಿಗೆ ಪ್ರತಿದಿನ ಬಡಿಸುವ ಏರ್ಪಾಡುಮಾಡಿ ಅವರನ್ನು ಮೂರು ವರ್ಷ ಪೋಷಿಸಬೇಕು” ಎಂದು ಆಜ್ಞಾಪಿಸಿದನು.

[6] ಆರಿಸಲ್ಪಟ್ಟ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬ ಯೆಹೂದ್ಯರು ಸೇರಿದ್ದರು.

[7] ಕಂಚುಕಿಯರ ಅಧ್ಯಕ್ಷನು ಇವರಿಗೆ ನಾಮಕರಣಮಾಡಿ ದಾನಿಯೇಲನಿಗೆ ಬೇಲ್ತೆಶಚ್ಚರ್, ಹನನ್ಯನಿಗೆ ಶದ್ರಕ್, ಮೀಶಾಯೇಲನಿಗೆ ಮೇಶಕ್, ಅಜರ್ಯನಿಗೆ ಅಬೇದ್ನೆಗೋ ಎಂಬ ಹೆಸರಿಟ್ಟನು.

[8] ಆದರೆ ದಾನಿಯೇಲನು ರಾಜನ ಭೋಜನ ಪದಾರ್ಥಗಳನ್ನು ತಿಂದು ರಾಜನು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿ ಕಂಚುಕಿಯರ ಅಧ್ಯಕ್ಷನಿಗೆ, “ನಾನು ಅಶುದ್ಧನಾಗಲಾರೆ, ಕ್ಷಮಿಸು” ಎಂದು ವಿಜ್ಞಾಪಿಸಿದನು.

[9] ದೇವರು ಕಂಚುಕಿಯರ ಅಧ್ಯಕ್ಷನ ಮನಸ್ಸಿನಲ್ಲಿ ದಾನಿಯೇಲನ ಮೇಲೆ ಕನಿಕರವನ್ನೂ, ದಯೆಯನ್ನೂ ಹುಟ್ಟಿಸಿದನು.

[10] ಆ ವಿಜ್ಞಾಪನೆಯನ್ನು ಕೇಳಿ ಕಂಚುಕಿಯರ ಅಧ್ಯಕ್ಷನು ದಾನಿಯೇಲನಿಗೆ, “ನಿಮಗೆ ಆಹಾರ ಮತ್ತು ಪಾನಗಳನ್ನು ಏರ್ಪಡಿಸಿದ್ದ ನನ್ನ ಒಡೆಯನಾದ ರಾಜನು ನಿಮ್ಮಂತೆ ಆರಿಸಲ್ಪಟ್ಟ ಯುವಕರ ಮುಖಕ್ಕಿಂತ ನಿಮ್ಮ ಮುಖವು ಬಾಡಿರುವುದನ್ನು ನೋಡಿ, ರಾಜನು ನನ್ನ ತಲೆಯನ್ನು ತೆಗೆಯಿಸಲು ನೀವು ಕಾರಣರಾಗುವಿರಿ” ಎಂದು ಭಯ ವ್ಯಕ್ತಪಡಿಸಿದನು.

[11] ದಾನಿಯೇಲನು ತನ್ನನ್ನೂ, ಹನನ್ಯ, ಮೀಶಾಯೇಲ, ಅಜರ್ಯ, ಇವರನ್ನೂ ನೋಡಿಕೊಳ್ಳುವುದಕ್ಕೆ ಕಂಚುಕಿಯರ ಅಧ್ಯಕ್ಷನು

[12] ನೇಮಿಸಿದ್ದ ವಿಚಾರಕನಿಗೆ, “ಅಯ್ಯಾ, ಹತ್ತು ದಿನಗಳ ಮಟ್ಟಿಗೆ ನಿನ್ನ ಸೇವಕರಾದ ನಮ್ಮನ್ನು ಪರೀಕ್ಷಿಸು; ಆಹಾರಕ್ಕೆ ಕಾಯಿಪಲ್ಯ ಮತ್ತು ಪಾನಕ್ಕೆ ನೀರು ನಮಗೆ ಒದಗಲಿ.

[13] ಆ ಮೇಲೆ ನಮ್ಮ ಮುಖಗಳನ್ನೂ ರಾಜನ ಆಹಾರವನ್ನು ಉಣ್ಣುವ ಯುವಕರ ಮುಖಗಳನ್ನೂ, ಹೋಲಿಸಿನೋಡು; ನೋಡಿದ್ದಕ್ಕೆ ತಕ್ಕ ಹಾಗೆ ನಿನ್ನ ಸೇವಕರನ್ನು ನಡೆಸು” ಎಂದು ಬಿನ್ನವಿಸಿದನು.

[14] ಅವನು ಅವರ ಬಿನ್ನಹಕ್ಕೆ ಒಪ್ಪಿ ಹತ್ತು ದಿನ ಪರೀಕ್ಷಿಸಿದನು.

[15] ಅವರು ಹತ್ತು ದಿನಗಳ ನಂತರ ರಾಜನ ಆಹಾರವನ್ನು ಉಣ್ಣುತ್ತಿದ್ದ ಸಕಲ ಯುವಕರಿಗಿಂತ ಸುಂದರರಾಗಿಯೂ, ಪುಷ್ಟರಾಗಿಯೂ ಕಾಣಿಸಿದರು.

[16] ಅಂದಿನಿಂದ ವಿಚಾರಕನು ಅವರಿಗೆ ನೇಮಕವಾದ ಭೋಜನ ಪದಾರ್ಥಗಳನ್ನೂ, ಅವರು ಕುಡಿಯಬೇಕಾದ ದ್ರಾಕ್ಷಾರಸವನ್ನೂ ತೆಗೆದಿಟ್ಟು ಕಾಯಿಪಲ್ಯಗಳನ್ನು ಕೊಡುತ್ತಾ ಬಂದನು.

[17] ಹೀಗಿರಲು ದೇವರು ಆ ನಾಲ್ಕು ಮಂದಿ ಯುವಕರಿಗೆ ಸಕಲ ಶಾಸ್ತ್ರಗಳಲ್ಲಿಯೂ, ವಿದ್ಯೆಗಳಲ್ಲಿಯೂ, ಜ್ಞಾನವಿವೇಕಗಳನ್ನು ದಯಪಾಲಿಸಿದನು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ, ದಿವ್ಯದರ್ಶನಗಳನ್ನೂ ಗ್ರಹಿಸುವುದರಲ್ಲಿ ಪ್ರವೀಣನಾದನು.

[18] ರಾಜನು ನೇಮಿಸಿದ ಕಾಲವು ಕಳೆದು ಯುವಕರನ್ನು ಸನ್ನಿಧಿಗೆ ತರತಕ್ಕ ಸಮಯವು ಬಂದಾಗ, ಕಂಚುಕಿಯರ ಅಧ್ಯಕ್ಷನು ಅವರನ್ನು ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆದು ತಂದನು.

[19] ರಾಜನು ಅವರ ಸಂಗಡ ಮಾತನಾಡುವಾಗ ಆ ಸಮಸ್ತ ಯುವಕರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರ ಹಾಗೆ ಯಾರೂ ಕಂಡುಬರಲಿಲ್ಲ; ಆದಕಾರಣ ಅವರು ರಾಜನ ಸನ್ನಿಧಿಸೇವಕರಾದರು.

[20] ಬಳಿಕ ರಾಜನು ಶಾಸ್ತ್ರೀಯ ವಿದ್ಯೆಯ ಸರ್ವವಿಷಯಗಳಲ್ಲಿ ಅವರನ್ನು ವಿಚಾರಮಾಡಲು ಅವನ ಪೂರ್ಣ ರಾಜ್ಯದಲ್ಲಿನ ಎಲ್ಲಾ ಜೋಯಿಸರಿಗಿಂತಲೂ, ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು.

[21] ದಾನಿಯೇಲನು ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದ ತನಕ ಸನ್ನಿಧಿ ಸೇವಕನಾಗಿಯೇ ಇದ್ದನು.

ದಾನಿಯೇಲನು — Chapters