Skip to content
Opens in a new window
Listen to this chapter • 9:45

[1] ಮೇದ್ಯನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ನಾನೇ ಮೀಕಾಯೇಲನಿಗೆ ಬೆಂಬಲಕೊಟ್ಟು ಆಶ್ರಯನಾಗಿ ನಿಂತೆನು.

[2] ನಾನು ಈಗ ಸತ್ಯಾಂಶವನ್ನು ನಿನಗೆ ತಿಳಿಸುವೆನು, “ಇಗೋ, ಪಾರಸಿಯ ದೇಶದಲ್ಲಿ ಇನ್ನು ಮೂವರು ರಾಜರು ಏಳುವರು; ನಾಲ್ಕನೆಯ ರಾಜನು ಎಲ್ಲರಿಗಿಂತಲೂ ಅಧಿಕ ಧನವಂತನಾಗಿರುವನು; ಅವನು ತನ್ನ ಧನದಿಂದ ಪ್ರಬಲನಾಗಿ ಗ್ರೀಕ್ ರಾಜ್ಯಕ್ಕೆ ವಿರುದ್ಧವಾಗಿ ತನ್ನ ಬಲವನ್ನೆಲ್ಲಾ ಎಬ್ಬಿಸುವನು.

[3] ಅನಂತರ ಪರಾಕ್ರಮಶಾಲಿಯಾದ ಒಬ್ಬ ರಾಜನು ಎದ್ದು ಮಹಾ ಪ್ರಭುತ್ವದಿಂದ ಆಳುತ್ತಾ, ತನ್ನ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳುವನು.

[4] ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯವು ಒಡೆದು ನಾಲ್ಕು ದಿಕ್ಕುಗಳಿಗೂ ನಾಲ್ಕು ಪಾಲಾಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ರಾಜ್ಯವು ಪ್ರಬಲವಾಗಿದ್ದಂತೆ ಇನ್ನು ಪ್ರಬಲವಾಗದು. ಆ ರಾಜ್ಯವು ಕೀಳಲ್ಪಟ್ಟು ನಾಲ್ವರಿಗೆ ಮಾತ್ರವಲ್ಲದೆ ಇತರರಿಗೂ ಪಾಲಾಗುವುದು.

[5] ದಕ್ಷಿಣ ರಾಜ್ಯದ ರಾಜನೂ, ಅವನ ಸರದಾರರಲ್ಲಿ ಒಬ್ಬನೂ ಬಲಗೊಳ್ಳುವರು. ಸರದಾರನು ರಾಜನಿಗಿಂತ ಹೆಚ್ಚು ಬಲಗೊಂಡು ಪ್ರಭುತ್ವಕ್ಕೆ ಬರುವನು. ಅವನ ರಾಜ್ಯವು ದೊಡ್ಡ ರಾಜ್ಯವಾಗಿರುವುದು.

[6] ಕೆಲವು ವರ್ಷಗಳಾದ ಮೇಲೆ ಅವರು ಸೇರಿಕೊಳ್ಳುವರು. ದಕ್ಷಿಣ ದಿಕ್ಕಿನ ರಾಜನ ಕುಮಾರಿಯು ಉತ್ತರ ರಾಜ್ಯದ ರಾಜನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಕ್ಕೆ ಬರುವಳು. ಆದರೂ ತನ್ನ ಭುಜಬಲವನ್ನು ಉಳಿಸಿಕೊಳ್ಳಲು ಆಗದು; ಅವನೂ, ಅವನ ತೋಳೂ ನಿಲ್ಲವು; ಅವಳೂ, ಅವಳನ್ನು ಕರೆದು ತಂದವರೂ, ಪಡೆದವನೂ, ತಕ್ಕೊಂಡವನೂ ಆ ಕಾಲದಲ್ಲಿ ನಾಶನಕ್ಕೆ ಈಡಾಗುವರು.

[7] ಅನಂತರ ಅವಳು ಹುಟ್ಟಿದ ವಂಶವೃಕ್ಷದಲ್ಲಿ ಹುಟ್ಟಿದವರು ಅದರ ಸ್ಥಾನದಲ್ಲಿ ನಿಂತು ಉತ್ತರ ದಿಕ್ಕಿನ ರಾಜನ ಸೈನ್ಯಕ್ಕೆ ವಿರುದ್ಧವಾಗಿ ಹೊರಟು ಅವನ ದುರ್ಗದೊಳಗೆ ನುಗ್ಗಿ, ಅವರೊಡನೆ ಯುದ್ಧಮಾಡಿ, ಅವರನ್ನು ಗೆಲ್ಲುವರು.

[8] ಅವರ ದೇವರುಗಳನ್ನೂ, ಎರಕದ ಬೊಂಬೆಗಳನ್ನೂ, ಒಳ್ಳೊಳ್ಳೆ ಬೆಳ್ಳಿಬಂಗಾರದ ಪಾತ್ರೆಗಳನ್ನೂ, ಸೂರೆ ಮಾಡಿಕೊಂಡು ಐಗುಪ್ತಕ್ಕೆ ಬಂದು, ಕೆಲವು ವರ್ಷಗಳ ತನಕ ಉತ್ತರ ದಿಕ್ಕಿನ ರಾಜನ ತಂಟೆಗೆ ಹೋಗುವುದಿಲ್ಲ.

[9] ಬಳಿಕ ಉತ್ತರ ದಿಕ್ಕಿನ ರಾಜನು ದಕ್ಷಿಣ ದಿಕ್ಕಿನ ರಾಜನ ಮೇಲೆ ಯುದ್ಧಕ್ಕೆ ಬರುವನು. ಆದರೆ ತನ್ನ ಸ್ವದೇಶಕ್ಕೆ ಹಿಂದಿರುಗುವನು.

[10] ಆ ಮೇಲೆ ಅವನ ಮಕ್ಕಳು ಯುದ್ಧ ಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯವು ಮುಂದುವರೆದು ತುಂಬಿತುಳುಕಿ ಹಬ್ಬಿಕೊಳ್ಳುವುದು. ಅವರು ಪುನಃ ಯುದ್ಧಕ್ಕೆ ಹೊರಟು ದಕ್ಷಿಣ ದಿಕ್ಕಿನ ರಾಜನ ದುರ್ಗದವರೆಗೆ ನುಗ್ಗುವರು.

[11] ಆಗ ದಕ್ಷಿಣ ದಿಕ್ಕಿನ ರಾಜನು ಕ್ರೋಧದಿಂದ ಉರಿಯುತ್ತಾ ಹೊರಟು ಬಂದು, ಉತ್ತರ ದಿಕ್ಕಿನ ರಾಜನ ಸಂಗಡ ಯುದ್ಧ ಮಾಡುವನು. ಉತ್ತರ ದಿಕ್ಕಿನ ರಾಜನು ಮಹಾವ್ಯೂಹವನ್ನು ಕಟ್ಟಿದರೂ, ಅದೆಲ್ಲಾ ದಕ್ಷಿಣ ದಿಕ್ಕಿನ ರಾಜನ ಕೈಗೆ ಸಿಕ್ಕಿ ಒಯ್ಯಲ್ಪಡುವುದು.

[12] ಆದುದರಿಂದ ಅವನ ಮನಸ್ಸು ಗರ್ವದಿಂದ ತುಂಬುವುದು. ಅವನು ಲಕ್ಷಾಂತರ ಸೈನಿಕರನ್ನು ಬೀಳಿಸಿದರೂ ಪ್ರಾಬಲ್ಯಕ್ಕೆ ಬರುವುದಿಲ್ಲ.

[13] ತರುವಾಯ ಉತ್ತರ ದಿಕ್ಕಿನ ರಾಜನು ಹಿಂದಿನ ದಂಡಿಗಿಂತ ದೊಡ್ಡ ದಂಡನ್ನು ಮತ್ತೆ ಕೂಡಿಸಿ ಬಹಳ ವರ್ಷಗಳ ನಂತರ ಮಹಾ ಸೈನ್ಯದಿಂದಲೂ, ಅಧಿಕ ಆಯುಧಗಳ ಸಮೇತವಾಗಿಯೂ ಬರುವನು.

[14] ಆ ಕಾಲದಲ್ಲಿ ಅನೇಕರು ದಕ್ಷಿಣ ದಿಕ್ಕಿನ ರಾಜನಿಗೆ ಎದುರು ನಿಲ್ಲುವರು. ಇದಲ್ಲದೆ ನಿನ್ನ ಜನರಲ್ಲಿ ಹಿಂಸಕರು ಕನಸನ್ನು ನಿಜ ಮಾಡಬೇಕೆಂದು ದಂಗೆ ಏಳುವರು. ಆದರೆ ಬಿದ್ದುಹೋಗುವರು.

[15] ಉತ್ತರ ದಿಕ್ಕಿನ ರಾಜನು ಬಂದು ದಿಬ್ಬ ಹಾಕಿ, ಕೋಟೆ ಕೊತ್ತಲದ ಪಟ್ಟಣವನ್ನು ಹಿಡಿಯುವನು; ದಕ್ಷಿಣದ ಭುಜಬಲವು ನಿಲ್ಲದು, ಅಲ್ಲಿನ ಮಹಾವೀರರು ತಡೆಯಲಾರರು, ಎದುರಿಸುವ ಯಾವ ಶಕ್ತಿಯೂ ಇರದು.

[16] ದಕ್ಷಿಣ ದಿಕ್ಕಿನ ರಾಜನಿಗೆ ವಿರುದ್ಧವಾಗಿ ಬರುವವನು ತನ್ನ ಇಚ್ಛಾನುಸಾರ ನಡೆಯುವನು. ಅವನನ್ನು ಎದುರಿಸುವವರು ಯಾರು ಇಲ್ಲ, ನಾಶವನ್ನು ಕೈಯಲ್ಲಿಟ್ಟುಕೊಂಡು ಅಂದ ಚಂದದ ದೇಶದಲ್ಲಿ ನಿಂತಿರುವನು.

[17] ದಕ್ಷಿಣ ದಿಕ್ಕಿನ ರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು, ಅವನ ಸಂಗಡ ಒಪ್ಪಂದ ಮಾಡಿಕೊಳ್ಳುವನು. ಅವನ ರಾಜ್ಯದ ಹಾನಿಗಾಗಿ ಅವನಿಗೆ ಹೆಣ್ಣು ಮಗಳನ್ನು ಕೊಡುವನು. ಆದರೆ ಆ ಉಪಾಯವೂ ನಿಲ್ಲದು, ತನಗೆ ಅನುಕೂಲವಾಗುವುದಿಲ್ಲ.

[18] ಆ ಮೇಲೆ ಅವನು ಕರಾವಳಿಯ ಕಡೆಗೆ ಕಣ್ಣಿಟ್ಟು ಅಲ್ಲಿ ಬಹಳ ದೇಶಗಳನ್ನು ಆಕ್ರಮಿಸುವನು. ಆದರೆ ಅವನು ಮಾಡುವ ನಿಂದೆಯನ್ನು ಒಬ್ಬ ಸರದಾರನು ನಿಲ್ಲಿಸಿ ಬಿಡುವುದಲ್ಲದೆ, ಅದು ಅವನ ಮೇಲೆಯೇ ತಿರುಗುವಂತೆ ಮಾಡುವನು.

[19] ಆ ಮೇಲೆ ಸ್ವದೇಶದ ದುರ್ಗಗಳ ಕಡೆಗೆ ಹಿಂದಿರುಗಿ ಎಡವಿ ಬಿದ್ದು ಇಲ್ಲವಾಗುವನು.

[20] ಅವನ ಸ್ಥಾನದಲ್ಲಿ ಮತ್ತೊಬ್ಬನು ಎದ್ದು, ರಾಜ್ಯದಲ್ಲಿ ಶಿರೋಮಣಿಯಾದ ದೇಶವನ್ನೆಲ್ಲ ದೋಚಿಕೊಳ್ಳತಕ್ಕವನನ್ನು ನೇಮಿಸುವನು. ಅವನು ಕೆಲವು ದಿನಗಳೊಳಗೆ ನಾಶವಾಗುವನು. ಅವನ ನಾಶ ಕೋಪದ ಪೆಟ್ಟಿನಿಂದಲ್ಲ, ಯುದ್ಧದಿಂದಲೂ ಅಲ್ಲ.

[21] “ಅವನ ಸ್ಥಾನದಲ್ಲಿ ರಾಜ್ಯಪದವಿಗೆ ಹಕ್ಕುದಾರನಲ್ಲದ ಒಬ್ಬ ನೀಚನು ಎದ್ದು, ನೆಮ್ಮದಿಯ ಕಾಲದಲ್ಲಿ ಬಂದು ನಯವಾದ ನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು.

[22] ತುಂಬಿ ತುಳುಕುವ ವ್ಯೂಹಗಳೂ, ದೇವರ ನಿಬಂಧನಾಧಿಪತಿಯೂ ಅವನ ರಭಸಕ್ಕೆ ಸಿಕ್ಕಿ ಹೊಡೆದುಕೊಂಡು ಹೋಗಿ ಭಂಗವಾಗುವರು.

[23] ಅವನ ಸಂಗಡ ಒಪ್ಪಂದ ಮಾಡಿಕೊಂಡವನಿಗೆ ಕೂಡಲೆ ಮೋಸ ಮಾಡುವನು; ಸ್ವಲ್ಪ ಜನರ ಸಹಾಯದಿಂದ ಏಳಿಗೆಯಾಗಿ ಬಲಗೊಳ್ಳುವನು.

[24] ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ನುಗ್ಗುವನು. ತಂದೆ, ತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು, ಸೂರೆ, ಸುಲಿಗೆ, ಕೊಳ್ಳೆ ಹೊಡೆದವುಗಳನ್ನು ತನ್ನವರಿಗೆ ಚೆಲ್ಲಿಬಿಡುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕೊನೆಯವರೆಗೂ ಮುಂದುವರೆಸುವನು.

[25] ಅವನು ದೊಡ್ಡ ದಂಡೆತ್ತಿ ದಕ್ಷಿಣ ದಿಕ್ಕಿನ ರಾಜನ ವಿರುದ್ಧವಾಗಿ ತನ್ನ ರಾಜ್ಯದ ಬಲವನ್ನೆಲ್ಲ ಕೂಡಿಸಿ ಧೈರ್ಯದಿಂದ ಹೊರಡುವನು. ದಕ್ಷಿಣ ದಿಕ್ಕಿನ ರಾಜನು ಅತ್ಯಧಿಕ ಬಲವುಳ್ಳ ಮಹಾ ಸೈನ್ಯಸಮೇತನಾಗಿ ಯುದ್ಧಕ್ಕೆ ಹೊರಡುವನು. ಆದರೆ ನಿಲ್ಲಲಾರನು, ಅವನು ಸೋಲುವ ಹಾಗೆ ಕುಯುಕ್ತಿಗಳನ್ನು ಕಲ್ಪಿಸುವನು.

[26] ಅವನ ಮೃಷ್ಟಾನ್ನವನ್ನು ತಿನ್ನುವವರೇ ಅವನನ್ನು ಭಂಗಪಡಿಸುವರು; ಉತ್ತರ ದಿಕ್ಕಿನ ರಾಜನ ಸೈನ್ಯವು ತುಂಬಿ ತುಳುಕುವುದು. ಬಹಳ ಜನರು ಹತರಾಗಿ ಬೀಳುವರು.

[27] ಆ ಇಬ್ಬರು ರಾಜರು ಒಬ್ಬರಿಗೊಬ್ಬರು ಕೇಡಿನ ಮನಸುಳ್ಳವರಾಗಿ ಸಹ ಪಂಕ್ತಿಯಲ್ಲಿ ಸುಳ್ಳುಸುಳ್ಳು ಮಾತನಾಡಿಕೊಳ್ಳುವರು. ಆದರೆ ಏನೂ ಸಾಗದು, ಪರಿಣಾಮವು ನಿಶ್ಚಿತ ಕಾಲದಲ್ಲೇ ತಲೆದೋರುವುದು.

[28] ಅನಂತರ ಉತ್ತರ ದಿಕ್ಕಿನ ರಾಜನು ಬಹಳ ಆಸ್ತಿಯನ್ನು ಐಶ್ವರ್ಯವನ್ನು ಕೊಳ್ಳೆಹೊಡೆದು ಸ್ವದೇಶಕ್ಕೆ ಹಿಂದಿರುಗುವನು. ಅವನ ಮನಸ್ಸು ಪರಿಶುದ್ಧ ನಿಬಂಧನೆಗೆ ವಿರುದ್ಧವಾಗಿರುವುದು. ಅವನು ತನಗೆ ಇಷ್ಟ ಬಂದಂತೆ ಮಾಡಿ ಮತ್ತೆ ಸ್ವದೇಶವನ್ನು ಸೇರುವನು.

[29] ನಿಶ್ಚಿತ ಕಾಲದಲ್ಲಿ ಪುನಃ ದಕ್ಷಿಣ ದಿಕ್ಕಿನ ದೇಶದ ಮೇಲೆ ನುಗ್ಗುವನು. ಆದರೆ ಮೊದಲು ಆದಂತೆಯೇ ಎರಡನೆಯ ಸಲ ಆಗದು.

[30] ಅವನ ವಿರುದ್ಧವಾಗಿ ಕಿತ್ತೀಮಿನ ಹಡಗುಗಳು ಬರಲು, ಅವನು ಎದೆಗುಂದಿ ಹಿಂದಿರುಗಿ ಪರಿಶುದ್ಧ ನಿಬಂಧನೆಯ ಮೇಲೆ ಮತ್ಸರಗೊಂಡು ತನಗೆ ಇಷ್ಟ ಬಂದಂತೆ ಮಾಡುವನು. ಅವನು ಸ್ವದೇಶಕ್ಕೆ ಸೇರಿ ಪರಿಶುದ್ಧ ನಿಬಂಧನೆಯನ್ನು ತೊರೆದವರನ್ನು ಕಟಾಕ್ಷಿಸುವನು.

[31] ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯಹೋಮವನ್ನು ನೀಗಿಸಿ, ಹಾಳುಮಾಡುವ ಅಸಹ್ಯವಸ್ತುವನ್ನು ಪ್ರತಿಷ್ಠಿಸುವುದು.

[32] ನಿಬಂಧನ ದ್ರೋಹಿಗಳು ಅವನ ನಯನುಡಿಗಳಿಂದ ಕೆಟ್ಟುಹೋಗುವರು. ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು.

[33] ಜನರಲ್ಲಿನ ಜ್ಞಾನಿಗಳು ಅನೇಕರಿಗೆ ವಿವೇಕ ಹೇಳಲಾಗಿ, ಅವರು ಬಹಳ ದಿನ ಕತ್ತಿ, ಬೆಂಕಿ, ಸೆರೆಸೂರೆಗಳಿಗೆ ಸಿಕ್ಕಿ ಬೀಳುವರು.

[34] ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವುದು. ಆ ಮೇಲೆ ಬಹಳ ಮಂದಿ ನಯವಾದ ನುಡಿಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು.

[35] ಜ್ಞಾನಿಗಳಲ್ಲಿಯೂ ಕೆಲವರು ಅಂತ್ಯಕಾಲದವರೆಗೆ ಬೀಳುತ್ತಿರುವರು. ಆದುದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ನಿಶ್ಚಿತಕಾಲದಲ್ಲೇ ಆಗುವುದು.

[36] “ರಾಜನು ತನ್ನ ಇಚ್ಛಾನುಸಾರ ನಡೆದು ತಾನು ಎಲ್ಲಾ ದೇವರುಗಳಿಗಿಂತ ದೊಡ್ಡವನೆಂದು ತನ್ನನ್ನು ಹೆಚ್ಚಿಸಿಕೊಂಡು ಗರ್ವದಿಂದ ಉಬ್ಬಿ, ದೇವಾಧಿ ದೇವನನ್ನು ಮಿತಿಮೀರಿ ದೂಷಿಸಿ ನಿಮ್ಮ ಮೇಲಿನ ದೈವ ಕೋಪವು ತೀರುವ ತನಕ ವೃದ್ಧಿಯಾಗಿರುವನು. ದೈವಸಂಕಲ್ಪವು ನೆರವೇರಲೇ ಬೇಕು.

[37] ಅವನು ತನ್ನ ಪೂರ್ವಿಕರ ದೇವರುಗಳನ್ನಾಗಲಿ, ಸ್ತ್ರೀಯರು ಮೋಹಿಸುವ ದೇವರನ್ನಾಗಲಿ, ಯಾವ ದೇವರನ್ನಾಗಲಿ ಲಕ್ಷಿಸುವುದಿಲ್ಲ. ಎಲ್ಲಾ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.

[38] ಕುಲದೇವರಿಗೆ ಬದಲಾಗಿ ದುರ್ಗಾಭಿಮಾನಿ ದೇವರನ್ನು ಘನಪಡಿಸುವನು; ಪೂರ್ವಿಕರಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ, ರತ್ನಗಳಿಂದಲೂ, ಅಮೂಲ್ಯ ವಸ್ತುಗಳಿಂದಲೂ ಸೇವಿಸುವನು.

[39] ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು; ಯಾರನ್ನು ಕಟಾಕ್ಷಿಸುವನೋ ಅವರಿಗೆ ಮಹಿಮೆ ಹೆಚ್ಚುವುದು; ಬಹಳ ಜನರ ಮೇಲೆ ಆಳ್ವಿಕೆಯನ್ನು ನಡೆಸುವನು; ದೇಶವನ್ನು ಕ್ರಯಕ್ಕೆ ಹಂಚುವನು.

[40] “ಅಂತ್ಯಕಾಲದಲ್ಲಿ ದಕ್ಷಿಣ ದಿಕ್ಕಿನ ರಾಜನು ಉತ್ತರ ದಿಕ್ಕಿನ ರಾಜನ ಮೇಲೆ ಬೀಳಲು, ಅವನು ರಥಾಶ್ವಬಲಗಳಿಂದಲೂ, ಬಹು ನಾವೆಗಳಿಂದಲೂ ಕೂಡಿ ದಕ್ಷಿಣ ದಿಕ್ಕಿನ ರಾಜನ ಮೇಲೆ ರಭಸವಾಗಿ ಬಿದ್ದು ಎಲ್ಲಾ ನಾಡುನಾಡುಗಳಲ್ಲಿ ನುಗ್ಗಿ, ತುಂಬಿ ತುಳುಕಿ ಹರಡಿಕೊಳ್ಳುವನು.

[41] ಅಂದ ಚಂದದ ದೇಶಕ್ಕೂ ನುಗ್ಗುವನು. ಅನೇಕ ಸೀಮೆಗಳು ಅವನಿಂದ ಹಾಳಾಗುವವು. ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು, ಅವನ ಕೈಯಿಂದ ತಪ್ಪಿಸಿಕೊಳ್ಳುವರು.

[42] ಅವನು ದೇಶಗಳ ಮೇಲೆ ಕೈಮಾಡಲು ಐಗುಪ್ತ ದೇಶವೂ ತನ್ನನ್ನು ರಕ್ಷಿಸಿಕೊಳ್ಳದು.

[43] ಅವನು ಬೆಳ್ಳಿ ಬಂಗಾರಗಳ ನಿಧಿನಿಕ್ಷೇಪಗಳನ್ನೂ, ಐಗುಪ್ತದ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನೂ ವಶಮಾಡಿಕೊಳ್ಳುವನು. ಲೂಬ್ಯರೂ, ಕೂಷ್ಯರೂ ಅವನನ್ನು ಹಿಂಬಾಲಿಸಿ ಹೋಗುವರು.

[44] ಹೀಗಿರಲು ಪೂರ್ವದಿಂದಲೂ, ಉತ್ತರದಿಂದಲೂ ಬರುವ ಸುದ್ದಿಯು ಅವನನ್ನು ಬಾಧಿಸುವುದು ಅವನು ಅತಿ ರೋಷಗೊಂಡು ಬಹಳ ಜನರನ್ನು ಧ್ವಂಸ ಮಾಡಿ, ನಿರ್ನಾಮ ಮಾಡುವುದಕ್ಕೆ ಹೊರಡುವನು.

[45] ಸಮುದ್ರಕ್ಕೂ, ಅಂದ ಚಂದದ ಪರಿಶುದ್ಧ ಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು. ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯ ಮಾಡರು.”

ದಾನಿಯೇಲನು — Chapters