Skip to content
Opens in a new window
Listen to this chapter • 3:19

[1] ಅರಸನಾದ ದಾರ್ಯಾವೆಷನ ನಾಲ್ಕನೆಯ ವರ್ಷದಲ್ಲಿ ಒಂಬತ್ತನೆಯ ತಿಂಗಳಿನ ಅಂದರೆ ಕಿಸ್ಲೇವ್ ತಿಂಗಳಿನ ನಾಲ್ಕನೆಯ ದಿವಸದಲ್ಲಿ ಯೆಹೋವ ದೇವರ ವಾಕ್ಯವು ಜೆಕರ್ಯನಿಗೆ ಬಂದಿತು.

[2] ಅಷ್ಟರಲ್ಲಿ ಬೇತೇಲಿನ ಜನರು ಸರೆಚರನನ್ನೂ, ರೆಗೆಮ್ ಮೆಲೆಕನನ್ನೂ, ಅವರ ಮನುಷ್ಯರನ್ನೂ ಯೆಹೋವ ದೇವರ ಪ್ರಸನ್ನತೆಯನ್ನು ಕೋರಲು ದೇವಾಲಯಕ್ಕೆ ಕಳುಹಿಸಿದರು.

[3] ಆಗ ಸರ್ವಶಕ್ತರಾದ ಯೆಹೋವ ದೇವರ ಆಲಯದಲ್ಲಿದ್ದ ಯಾಜಕರ ಸಂಗಡ ಮತ್ತು ಪ್ರವಾದಿಗಳ ಸಂಗಡ ನಾನು ಮಾತನಾಡಿ, “ಇಷ್ಟು ವರ್ಷ ಮಾಡಿದ ಪ್ರಕಾರ, ಐದನೆಯ ತಿಂಗಳಿನಲ್ಲಿ ಉಪವಾಸವಿದ್ದು, ಪ್ರಲಾಪಿಸಬೇಕೋ?” ಎಂದು ವಿಚಾರಿಸಿಕೊಂಡು ಬರಬೇಕೆಂದು ಅವರಿಗೆ ಆಜ್ಞಾಪಿಸಿದರು.

[4] ಆಗ ಸರ್ವಶಕ್ತರಾದ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ,

[5] “ದೇಶದ ಜನರೆಲ್ಲರಿಗೂ, ಯಾಜಕರಿಗೂ ಹೀಗೆ ಹೇಳು: ‘ನೀವು ಈ ಎಪ್ಪತ್ತು ವರ್ಷಗಳು ಐದನೆಯ ಮತ್ತು ಏಳನೆಯ ತಿಂಗಳುಗಳಲ್ಲಿ ಉಪವಾಸ ಮಾಡಿ, ದುಃಖಿಸುತ್ತಿದ್ದಾಗ, ಆ ನಿಮ್ಮ ಉಪವಾಸವು ನಿಜವಾಗಿಯೂ ನನಗಾಗಿ ಮಾಡಿದ್ದೀರೋ?

[6] ನೀವು ಉಂಡು ಕುಡಿಯುತ್ತಿದ್ದಾಗ, ನಿಮಗಾಗಿಯೇ ಉಂಡು ಕುಡಿದಿರಲ್ಲಾ?

[7] ಯೆರೂಸಲೇಮು, ಅದರ ಸುತ್ತಲಿನ ಪಟ್ಟಣಗಳೂ ನಿವಾಸಿಗಳುಳ್ಳವುಗಳಾಗಿಯೂ, ಸುಖವಾಗಿಯೂ, ಸಮೃದ್ಧಿಯಾಗಿಯೂ ದಕ್ಷಿಣವೂ, ಪಶ್ಚಿಮ ನಿವಾಸಿಗಳುಳ್ಳವುಗಳಾಗಿಯೂ ಇದ್ದಾಗ, ಯೆಹೋವ ದೇವರು ಪೂರ್ವದ ಪ್ರವಾದಿಗಳ ಮೂಲಕ ಸಾರಿದ ಮಾತುಗಳು ಅವು ಅಲ್ಲವೋ?’ ಎಂಬುದು.”

[8] ಯೆಹೋವ ದೇವರ ವಾಕ್ಯವು ಜೆಕರ್ಯನಿಗೆ ಪುನಃ ಬಂದು ಹೇಳಿದ್ದೇನೆಂದರೆ,

[9] “ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನಿಜವಾದ ನ್ಯಾಯವನ್ನು ತೀರಿಸಿರಿ; ಒಬ್ಬರಿಗೊಬ್ಬರು ಪ್ರೀತಿಯನ್ನೂ, ಕನಿಕರವನ್ನೂ ತೋರಿಸಿರಿ;

[10] ವಿಧವೆಗೂ, ದಿಕ್ಕಿಲ್ಲದವನಿಗೂ, ಅನ್ಯನಿಗೂ, ಬಡವನಿಗೂ ಹಿಂಸಾಚಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ,’ ” ಎಂಬುದು.

[11] “ಆದರೆ ಅವರು ಕೇಳುವುದಕ್ಕೆ ನಿರಾಕರಿಸಿದರು. ಅವರು ಬೆನ್ನನ್ನು ತಿರುಗಿಸಿ, ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದ ಮಾಡಿಕೊಂಡರು.

[12] ಅವರು ನಿಯಮವನ್ನೂ, ಸರ್ವಶಕ್ತದರಾದ ಯೆಹೋವ ದೇವರು ತಮ್ಮ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯಗಳನ್ನೂ ಕೇಳದ ಹಾಗೆ, ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಕಠಿಣಮಾಡಿಕೊಂಡರು. ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರ ಮಹಾಕೋಪಕ್ಕೆ ಗುರಿಯಾದರು.

[13] “ಆಗ, ‘ನಾನು ಕೂಗಲು, ಅವರು ಕೇಳದೆ ಇದ್ದ ಪ್ರಕಾರ, ಅವರು ಕೂಗಲು ನಾನು ಕೇಳದೆ ಇದ್ದೇನೆಂದು,’ ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.

[14] ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರಗಾಳಿಯಿಂದ ಚದರಿಸಿ ಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು. ಹಾದು ಹೋಗುವವನೂ, ತಿರುಗಿಕೊಳ್ಳುವವನೂ ಇಲ್ಲದೆ ಹೋಯಿತು. ಏಕೆಂದರೆ ರಮ್ಯವಾದ ದೇಶವನ್ನು ಹಾಳುಮಾಡಿದರು.”

ಜೆಕರ್ಯ — Chapters