[1] ನಾನು ಕಣ್ಣೆತ್ತಿ ನೋಡಿದಾಗ, ನಾಲ್ಕು ರಥಗಳು ಎರಡು ಬೆಟ್ಟಗಳ ಮಧ್ಯದಿಂದ ಹೊರಟು ಬಂದವು. ಆ ಬೆಟ್ಟಗಳು ಕಂಚಿನ ಬೆಟ್ಟಗಳಾಗಿದ್ದವು.
[2] ಮೊದಲನೆಯ ರಥಕ್ಕೆ ಕೆಂಪು ಕುದುರೆಗಳಿದ್ದವು, ಎರಡನೆಯ ರಥಕ್ಕೆ ಕಪ್ಪು ಕುದುರೆಗಳು,
[3] ಮೂರನೆಯ ರಥಕ್ಕೆ ಬಿಳಿ ಕುದುರೆಗಳು, ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಕುದುರೆಗಳಿದ್ದವು. ಇವೆಲ್ಲವೂ ಬಲವಾದ ಕುದುರೆಗಳು.
[4] ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ, “ನನ್ನ ಒಡೆಯನೇ, ಇದೇನು?” ಎಂದೆನು.
[5] ದೂತನು ನನಗೆ, “ಇವು ಸ್ವರ್ಗದ ನಾಲ್ಕು ಆತ್ಮಗಳು. ಇವು ಇಡೀ ಜಗತ್ತಿನ ಕಡೆಗೆ ಯೆಹೋವ ದೇವರ ಮುಂದೆ ನಿಂತಲ್ಲಿಂದ ಹೊರಟಿವೆ.
[6] ಕಪ್ಪು ಕುದುರೆಗಳ ರಥ, ಉತ್ತರ ದೇಶಕ್ಕೆ ಹೊರಟಿತು. ಬಿಳಿ ಕುದುರೆಗಳು ಪಶ್ಚಿಮಕ್ಕೆ ಹಿಂದೆ ಹೋಯಿತು. ಮಚ್ಚೆ ಮಚ್ಚೆಯ ಕುದುರೆಯ ರಥ ದಕ್ಷಿಣಕ್ಕೆ ಹೊರಟಿತು.”
[7] ಕೆಂಪು ಕುದುರೆಗಳ ರಥ ಹೊರಟು ಲೋಕದಲ್ಲಿ ಸಂಚಾರ ಮಾಡಲು ಹೋಗುವುದಕ್ಕೆ ನೋಡಿದವು. ಆಗ ಅವನು, “ಹೋಗಿ ಲೋಕದಲ್ಲಿ ಅತ್ತಿತ್ತ ನಡೆದಾಡುವುದಕ್ಕೆ ಇಲ್ಲಿಂದ ಹೋಗಿರಿ,” ಎಂದನು. ಹಾಗೆ ಅವು ದೇಶದಲ್ಲಿ ಅತ್ತಿತ್ತ ತಿರುಗಾಡಿದವು.
[8] ಆಗ ದೂತನು ನನಗೆ ಕೂಗಿ, “ನೋಡು, ಉತ್ತರ ದೇಶಕ್ಕೆ ಹೊರಟವುಗಳು, ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿ ಪಡಿಸಿವೆ,” ಎಂದನು.
[9] ಯೆಹೋವ ದೇವರ ವಾಕ್ಯವು ನನಗೆ ಬಂದಿತು:
[10] “ಆ ಸೆರೆಯವರಿಂದ, ಅಂದರೆ ಬಾಬಿಲೋನಿನಿಂದ ಬಂದಿರುವ ಹೆಲ್ದಾಯನಿಂದಲೂ, ತೋಬೀಯನಿಂದಲೂ, ಯೆದಾಯನಿಂದಲೂ ಬೆಳ್ಳಿಬಂಗಾರವನ್ನು ತೆಗೆದುಕೊಂಡು, ಅದೇ ದಿವಸದಲ್ಲಿ ನೀನು ಜೆಫನ್ಯನ ಮಗ ಯೋಷೀಯನ ಮನೆಗೆ ಹೋಗು.
[11] ಅಲ್ಲಿ ಬೆಳ್ಳಿ, ಬಂಗಾರವನ್ನು ತೆಗೆದುಕೊಂಡು, ಕಿರೀಟಗಳನ್ನು ಮಾಡಿ, ಅವುಗಳನ್ನು ಯೆಹೋಚಾದಾಕನ ಮಗ ಮತ್ತು ಮಹಾಯಾಜಕನಾದ ಯೆಹೋಶುವನ ತಲೆಯ ಮೇಲೆ ಇಟ್ಟು,
[12] ಅವನಿಗೆ ಹೇಳತಕ್ಕದ್ದೇನೆಂದರೆ: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ರೆಂಬೆ,’ ಎಂದು ಹೆಸರುಳ್ಳ ಮನುಷ್ಯನು, ತನ್ನ ಸ್ಥಳದೊಳಗಿಂದ ರೆಂಬೆಯನ್ನು ತೆಗೆದುಹಾಕಿ, ಯೆಹೋವ ದೇವರ ಆಲಯವನ್ನು ಕಟ್ಟುವನು.
[13] ಅವನೇ ಯೆಹೋವ ದೇವರ ದೇವಾಲಯವನ್ನು ಕಟ್ಟಿದ ಮೇಲೆ, ರಾಜವೈಭವವನ್ನು ಧರಿಸಿ ಸಿಂಹಾಸನದ ಮೇಲೆ ಆಸೀನನಾಗಿ ಆಳುವನು. ಅವನ ಸಿಂಹಾಸನದಲ್ಲಿ ಒಬ್ಬ ಯಾಜಕನಾಗಿರುವನು. ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವುದು.
[14] ಆ ಕಿರೀಟಗಳು ಹೇಲೆಮ್, ತೋಬೀಯ, ಯೆದಾಯ ಮತ್ತು ಜೆಫನ್ಯನ ಮಗ ಹೇನ್ ಇವರ ಜ್ಞಾಪಕಾರ್ಥವಾಗಿ ಯೆಹೋವ ದೇವರ ಆಲಯದಲ್ಲಿ ಇರುವುವು.
[15] ದೂರದಲ್ಲಿರುವವರು ಬಂದು ಯೆಹೋವ ದೇವರ ಆಲಯವನ್ನು ಕಟ್ಟುವುದಕ್ಕೆ ಸಹಾಯ ಮಾಡುವರು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆಂದು ನೀವು ತಿಳಿಯುವಿರಿ. ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತಿಗೆ ಜಾಗ್ರತೆಯಾಗಿ ಕಿವಿಗೊಟ್ಟರೆ, ಇದು ನೆರವೇರುವುದು.”