[1] ಯೆಹೋವ ದೇವರಿಂದ ಹಿಂಗಾರು ಮಳೆಯ ಕಾಲದಲ್ಲಿ, ಮಳೆಯನ್ನು ಬೇಡಿಕೊಳ್ಳಿರಿ. ಹೀಗೆ ಯೆಹೋವ ದೇವರು ಮಿಂಚುವ ಮೋಡಗಳನ್ನು ಮಾಡಿ, ಅವರಿಗೆ ಸಮೃದ್ಧಿಯಾದ ಮಳೆಯನ್ನೂ, ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವರು.
[2] ವಿಗ್ರಹಗಳು ವ್ಯರ್ಥವಾಗಿ ಮಾತನಾಡುವವು. ಶಕುನಗಾರರು ಸುಳ್ಳು ದರ್ಶನವನ್ನು ಕಾಣುವರು. ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ. ವ್ಯರ್ಥವಾಗಿ ಆದರಿಸುತ್ತಾರೆ, ಆದ್ದರಿಂದ ಕುರಿಗಳಂತೆ ಚದರಿದ್ದಾರೆ, ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.
[3] “ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯುತ್ತಿದೆ. ನಾಯಕರನ್ನು ದಂಡಿಸುವೆನು. ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ತಮ್ಮ ಮಂದೆಯಾಗಿರುವ ಯೆಹೂದನ ಮನೆತನದವರನ್ನು ಪರಿಪಾಲಿಸಿ, ಅವರನ್ನು ಯುದ್ಧದಲ್ಲಿ ತಮ್ಮ ಘನವಾದ ಕುದುರೆಯ ಹಾಗೆ ಮಾಡಿದ್ದಾರೆ.
[4] ಆ ಕುಲದಿಂದಲೇ ಮೂಲೆಗಲ್ಲೂ, ಗುಡಾರದ ಮೊಳೆಯೂ, ಯುದ್ಧದ ಬಿಲ್ಲೂ, ಸಕಲ ಅಧಿಕಾರಿಗಳೂ ಕೂಡಿಕೊಂಡು ಹೊರಬರುವರು.
[5] ಅವರು ಯುದ್ಧದಲ್ಲಿ ಶತ್ರುವನ್ನು ಕೆಸರಿನ ಬೀದಿಗಳಲ್ಲಿ ತುಳಿಯುವ ಶೂರರ ಹಾಗಿರುವರು. ಯೆಹೋವ ದೇವರು ಅವರ ಸಂಗಡ ಇರುವುದರಿಂದ ಯುದ್ಧಮಾಡುವರು. ಕುದುರೆಗಳ ಮೇಲೆ ಸವಾರಿ ಮಾಡುವ ಶತ್ರುವನ್ನು ನಾಚಿಕೆ ಪಡಿಸುವರು.
[6] “ನಾನು ಯೆಹೂದ ವಂಶವನ್ನು ಬಲಪಡಿಸಿ, ಯೋಸೇಫ ಗೋತ್ರವನ್ನು ರಕ್ಷಿಸುವೆನು. ಅವರನ್ನು ಕನಿಕರಿಸುವುದರಿಂದ ಅವರನ್ನು ತಿರುಗಿ ಬರಮಾಡುವೆನು. ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಇರುವರು. ಏಕೆಂದರೆ ನಾನೇ ಅವರ ದೇವರಾದ ಯೆಹೋವ ದೇವರಾಗಿದ್ದು, ಅವರಿಗೆ ಉತ್ತರಕೊಡುವೆನು.
[7] ಎಫ್ರಾಯೀಮಿನವರು ಶೂರರಂತೆ ಇರುವರು. ಅವರ ಹೃದಯವು ದ್ರಾಕ್ಷಾರಸ ಕುಡಿದವರಂತೆ ಸಂತೋಷಪಡುವುದು. ಅವರ ಮಕ್ಕಳು ಇದನ್ನು ಕಂಡು ಸಂತೋಷಿಸುವರು. ಅವರ ಹೃದಯವು ಯೆಹೋವ ದೇವರಲ್ಲಿ ಆನಂದಿಸುವುದು.
[8] ನಾನು ಅವರಿಗೆ ಸಿಳ್ಳುಹಾಕಿ, ಅವರನ್ನು ಕೂಡಿಸುವೆನು. ನಿಶ್ಚಯವಾಗಿ ಅವರನ್ನು ವಿಮೋಚಿಸಿದ್ದೇನೆ. ಅವರು ಹಿಂದಿನಂತೆ ಮುಂದೆಯೂ ಸಮೃದ್ಧಿಯಾಗಿರುವರು.
[9] ನಾನು ಅವರನ್ನು ಜನಗಳಲ್ಲಿ ಚದುರಿಸಿದರೂ ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡಿಕೊಳ್ಳುವರು. ತಮ್ಮ ಮಕ್ಕಳ ಸಂಗಡ ಬದುಕಿ ಮತ್ತೆ ತಿರುಗಿಕೊಳ್ಳುವರು.
[10] ಈಜಿಪ್ಟ್ ದೇಶದೊಳಗಿಂದ ಸಹ ಅವರನ್ನು ತಿರುಗಿ ತರುವೆನು. ಅಸ್ಸೀರಿಯದೊಳಗಿಂದ ಅವರನ್ನು ಕೂಡಿಸುವೆನು. ಗಿಲ್ಯಾದಿನ ಮತ್ತು ಲೆಬನೋನಿನ ದೇಶಕ್ಕೆ ಅವರನ್ನು ತರುವೆನು. ಅವರಿಗೆ ಸ್ಥಳ ಸಾಲದೆ ಇರುವುದು.
[11] ಅವರು ಕಷ್ಟವೆಂಬ ಕಡಲನ್ನು ದಾಟುವರು. ಸಮುದ್ರದಲ್ಲಿ ತೆರೆಗಳನ್ನು ಬಡಿಯುವರು. ನೈಲ್ ನದಿಯ ಅಗಾಧಗಳೆಲ್ಲಾ ಒಣಗುವುವು. ಅಸ್ಸೀರಿಯದ ಗರ್ವವು ತಗ್ಗಿಹೋಗುವುದು. ಈಜಿಪ್ಟಿನ ರಾಜದಂಡವು ಗತಿಸುವುದು.
[12] ಯೆಹೋವ ದೇವರಲ್ಲಿ ನಾನು ಅವರನ್ನು ಬಲಪಡಿಸುವೆನು. ದೇವರ ಹೆಸರಿನಲ್ಲಿ ಅವರು ಸುರಕ್ಷಿತರಾಗಿ ಬಾಳುವರು,” ಎಂದು ಯೆಹೋವ ದೇವರು ಹೇಳುತ್ತಾರೆ.