Skip to content
Opens in a new window
Listen to this chapter • 2:23

[1] ಆಗ ನಾನು ತಿರುಗಿಕೊಂಡು ನನ್ನ ಕಣ್ಣುಗಳನ್ನೆತ್ತಿ ನೋಡಲು, ಹಾರುವ ಸುರುಳಿ ಕಾಣಿಸಿತು.

[2] ಆಗ ದೂತನು ನನಗೆ, “ಏನು ನೋಡುತ್ತೀ?” ಎಂದಾಗ, ನಾನು, “ಹಾರುವ ಸುರುಳಿಯನ್ನು ನೋಡುತ್ತಿದ್ದೇನೆ. ಅದರ ಉದ್ದವು ಒಂಬತ್ತು ಮೀಟರ್, ಅದರ ಅಗಲವು ನಾಲ್ಕುವರೆ ಮೀಟರ್ ಇದೆ,” ಎಂದೆನು.

[3] ಆಗ ದೂತನು ನನಗೆ, “ಭೂಮಿಯ ಮೇಲೆಲ್ಲಾ ಹರಡುವ ಶಾಪವು ಇದೇ. ಈ ದಿಕ್ಕಿನಲ್ಲಿ ಬರೆದಿರುವ ಪ್ರಕಾರ ಕಳ್ಳತನ ಮಾಡುವವರೆಲ್ಲರನ್ನು ತೆಗೆದುಹಾಕಲಾಗುವುದು. ಸುಳ್ಳಾಣೆ ಇಡುವವರೆಲ್ಲರನ್ನು ಆ ಕಡೆಯಲ್ಲಿ ಬರೆದಿರುವ ಪ್ರಕಾರ ತೆಗೆದುಹಾಕಲಾಗುವುದು.

[4] ‘ನಾನು ಶಾಪವನ್ನು ಕಳುಹಿಸುತ್ತೇನೆ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರಿನಿಂದ ಸುಳ್ಳಾಗಿ ಆಣೆ ಇಡುವವನ ಮನೆಯಲ್ಲಿಯೂ ಪ್ರವೇಶಿಸಿ, ಅವನ ಮನೆಯಲ್ಲಿ ನಿಂತು, ಅದನ್ನೂ, ಅದರ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು.’ ”

[5] ಆಗ ನನ್ನ ಸಂಗಡ ಮಾತನಾಡುತ್ತಿದ್ದ ದೂತನು ಬಂದು, “ನಿನ್ನ ಕಣ್ಣೆತ್ತಿ ಹೊರಡುವಂಥದ್ದು ಏನೆಂದು ನೋಡು,” ಎಂದು ನನಗೆ ಹೇಳಿದನು.

[6] ನಾನು, “ಇದೇನು?” ಎಂದು ಕೇಳಿದಾಗ, ಅವನು, “ಇದು ಅಳೆಯುವ ಬುಟ್ಟಿ,” ಎಂದನು. ಇದಲ್ಲದೆ ಅವನು, “ಇದೇ ಸಮಸ್ತ ಭೂಮಿಯಲ್ಲಿಯ ಜನರ ಅಧರ್ಮವು,” ಎಂದನು.

[7] ಸೀಸದ ಮುಚ್ಚಳವು ತೆಗೆಯಲಾಯಿತು. ಆ ಬುಟ್ಟಿಯಲ್ಲಿ ಒಬ್ಬ ಸ್ತ್ರೀ ಕುಳಿತುಕೊಂಡಿದ್ದಳು.

[8] ಆತನು, “ಇದು ದುಷ್ಟತ್ವವು,” ಎಂದು ಹೇಳಿ ಆಕೆಯನ್ನು ಬುಟ್ಟಿಯಲ್ಲಿ ಪುನಃ ಅದುಮಿ, ಆ ಬುಟ್ಟಿಯ ಮುಚ್ಚಳವನ್ನು ಮುಚ್ಚಿದನು.

[9] ಆಗ ನಾನು ಕಣ್ಣೆತ್ತಿ ನೋಡಿದಾಗ, ಇಬ್ಬರು ಸ್ತ್ರೀಯರು ಇದ್ದರು. ಅವರ ರೆಕ್ಕೆಗಳು ರಭಸವಾಗಿದ್ದವು. ಅವರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳ ಹಾಗಿದ್ದವು. ಅವರು ಆಕಾಶ ಮತ್ತು ಭೂಮಿಯ ನಡುವೆ ಬುಟ್ಟಿಯನ್ನು ಎತ್ತಿದರು.

[10] ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ, “ಇವರು ಅಳತೆಯ ಬುಟ್ಟಿಯನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆ?” ಎಂದೆನು.

[11] ದೂತನು ನನಗೆ, “ಶಿನಾರ್ ದೇಶದಲ್ಲಿ ಅದಕ್ಕೆ ಮನೆ ಕಟ್ಟುವುದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಅದು ಸ್ಥಾಪಿತವಾಗಿ, ತನ್ನ ಸ್ಥಾನದಲ್ಲಿ ಇರಿಸಲಾಗುವುದು,” ಎಂದನು.

ಜೆಕರ್ಯ — Chapters