[1] ಯೆಹೋವ ದೇವರ ದಿನವು ಬರುತ್ತದೆ. ಓ ಯೆರೂಸಲೇಮೇ, ಆ ದಿನದಲ್ಲಿ ನಿನ್ನ ಐಶ್ವರ್ಯವು ಸೂರೆಯಾಗುವುದು. ಮತ್ತು ಸೂರೆಯಾದದ್ದೆಲ್ಲ ನಿನ್ನ ಗೋಡೆಗಳ ಮಧ್ಯದಲ್ಲಿ ಹಂಚಿಹೋಗುವುದು.
[2] ನಾನು ಜನಾಂಗಗಳನ್ನೆಲ್ಲಾ ಯೆರೂಸಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು. ಪಟ್ಟಣವನ್ನು ಆಕ್ರಮಿಸಿ, ಮನೆಗಳನ್ನು ಸೂರೆಮಾಡಲಾಗುವುದು. ಹೆಂಗಸರು ಅತ್ಯಾಚಾರಕ್ಕೆ ಒಳಗಾಗುವರು. ಪಟ್ಟಣದ ಅರ್ಧ ಜನರು ಸೆರೆಗೆ ಹೋಗುವರು. ಆದರೆ ಉಳಿದ ಜನರೆಲ್ಲರು ಪಟ್ಟಣದಲ್ಲೇ ಉಳಿಯುವರು.
[3] ಆಗ ಯೆಹೋವ ದೇವರು ಹೊರಟು, ಯುದ್ಧದ ದಿವಸದಲ್ಲಿ ಹೋರಾಟ ಮಾಡಿದ ಪ್ರಕಾರವೇ, ಆ ಜನಾಂಗಗಳ ಸಂಗಡ ಅವರು ಹೋರಾಟ ಮಾಡುವರು.
[4] ಆ ದಿವಸದಲ್ಲಿ ಆತನ ಪಾದಗಳು ಯೆರೂಸಲೇಮಿನ ಮುಂದೆ ಪೂರ್ವದಿಕ್ಕಿನಲ್ಲಿರುವ ಓಲಿವ್ ಮರಗಳ ಗುಡ್ಡದ ಮೇಲೆ ನಿಲ್ಲುವುವು. ಆ ಗುಡ್ಡವು, ಅದರ ನಡುವೆಯಿಂದ ಪೂರ್ವಕ್ಕೂ ಪಶ್ಚಿಮಕ್ಕೂ ಸೀಳಿ ಬಹುದೊಡ್ಡ ತಗ್ಗಾಗುವುದು. ಅರ್ಧ ಗುಡ್ಡವು ಉತ್ತರಕ್ಕೂ ಅರ್ಧ ದಕ್ಷಿಣಕ್ಕೂ ಸರಿದುಕೊಳ್ಳುವುದು.
[5] ನೀವು ಬೆಟ್ಟಗಳ ತಗ್ಗಿಗೆ ಓಡಿಹೋಗುವಿರಿ. ಏಕೆಂದರೆ ಬೆಟ್ಟಗಳ ತಗ್ಗು ಆಚೆಲಿನವರೆಗೂ ಮುಟ್ಟುವುದು. ಯೆಹೂದದ ಅರಸನಾದ ಉಜ್ಜೀಯನ ದಿವಸಗಳಲ್ಲಿ, ನೀವು ಭೂಕಂಪಕ್ಕೆ ಓಡಿ ಹೋದ ಹಾಗೆ, ಓಡಿಹೋಗುವಿರಿ. ನನ್ನ ದೇವರಾದ ಯೆಹೋವ ದೇವರು ಬರುವರು. ನಿಮ್ಮ ಸಂಗಡ ಪರಿಶುದ್ಧರೆಲ್ಲರು ಸಹ ಬರುವರು.
[6] ಆ ದಿವಸದಲ್ಲಿ, ಬೆಳಕು ಇಲ್ಲವೆ ಕತ್ತಲೆಯು ಸ್ಪಷ್ಟವಾಗಿರದು.
[7] ಆದರೆ ಅದು ಒಂದು ವಿಶಿಷ್ಟ ದಿವಸವಾಗಿರುವುದು. ಯೆಹೋವ ದೇವರಿಗೆ ಮಾತ್ರ ತಿಳಿದಿರುವ ಒಂದು ದಿನ ಇರುವುದು. ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಆದರೆ, ಸಾಯಂಕಾಲದ ಸಮಯದಲ್ಲಿ ಬೆಳಕು ಇರುವುದು.
[8] ಆ ದಿವಸದಲ್ಲಿ ಆಗುವುದೇನೆಂದರೆ: ಯೆರೂಸಲೇಮಿನೊಳಗಿಂದ ಜೀವವುಳ್ಳ ಪ್ರವಾಹವು ಹೊರಡುವುದು. ಅದರಲ್ಲಿ ಅರ್ಧಭಾಗವು ಪೂರ್ವದ ಉಪ್ಪು ಸಮುದ್ರಕ್ಕೆ ಮತ್ತು ಅರ್ಧಭಾಗವು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೆ ಹರಿಯುತ್ತದೆ. ಅದು ಬೇಸಿಗೆ ಕಾಲದಲ್ಲಿಯೂ, ಚಳಿಗಾಲದಲ್ಲಿಯೂ ಇರುವುದು.
[9] ಯೆಹೋವ ದೇವರು ಭೂಮಿಗೆಲ್ಲಾ ಅರಸನಾಗಿರುವರು. ಆ ದಿವಸದಲ್ಲಿ ಯೆಹೋವ ದೇವರು ಒಬ್ಬರೇ ಇರುವರು. ಆತನ ಹೆಸರು ಒಂದೇ ಹೆಸರಾಗಿರುವುದು.
[10] ಗೆಬ ಮೊದಲುಗೊಂಡು ಯೆರೂಸಲೇಮಿನ ದಕ್ಷಿಣದಲ್ಲಿರುವ ರಿಮ್ಮೋನಿನವರೆಗೂ ದೇಶವೆಲ್ಲಾ ಅರಾಬಾದ ಹಾಗೆ ಮಾರ್ಪಡುವುದು. ಯೆರೂಸಲೇಮ್ ತನ್ನ ಸ್ಥಳದಲ್ಲಿ ಬೆನ್ಯಾಮೀನನ ಬಾಗಿಲು ಮೊದಲುಗೊಂಡು, ಮೊದಲನೆಯ ಬಾಗಿಲಿನ ಸ್ಥಳದವರೆಗೂ, ಮೂಲೆ ಬಾಗಿಲಿನವರೆಗೂ, ಹನನೇಲನ ಗೋಪುರ ಮೊದಲುಗೊಂಡು ಅರಸನ ದ್ರಾಕ್ಷಿ ಆಲೆಗಳವರೆಗೂ ಎತ್ತರದಲ್ಲಿ ನಿವಾಸವಾಗುವುದು.
[11] ಅದರಲ್ಲಿ ಜನರು ವಾಸವಾಗಿರುವರು. ಅಲ್ಲಿ ಇನ್ನು ಮೇಲೆ ಸಂಪೂರ್ಣವಾದ ನಾಶವಿರದು. ಆದರೆ ಯೆರೂಸಲೇಮು ಭದ್ರವಾಗಿರುವುದು.
[12] ಯೆರೂಸಲೇಮಿಗೆ ವಿರೋಧವಾಗಿ ದಂಡು ಕಟ್ಟಿಕೊಂಡಿರುವ ಎಲ್ಲಾ ಜನರನ್ನು ಯೆಹೋವ ದೇವರು ವ್ಯಾಧಿಯಿಂದ ಬಾಧಿಸುವರು. ಹೀಗೆಯೇ, ಅವರು ನಿಂತಿರುವಾಗ, ಅವರ ಮಾಂಸವು ಕ್ಷಯಿಸಿ ಹೋಗುವುವು. ಅವರ ಕಣ್ಣುಗಳು ಕುಣಿಗಳಲ್ಲಿ ಇಂಗಿ ಹೋಗುವುವು. ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವುದು.
[13] ಆ ದಿವಸದಲ್ಲಿ, ಯೆಹೋವ ದೇವರಿಂದಾದ ದೊಡ್ಡ ಕೋಲಾಹಲದಿಂದ ಜನರು ಭಯಭೀತಿಗೆ ಒಳಗಾಗುವರು. ಆಗ ಒಬ್ಬೊಬ್ಬನು ತನ್ನ ತನ್ನ ನೆರೆಯವನ ಕೈಯನ್ನು ಹಿಡಿಯುವನು ಮತ್ತು ಒಬ್ಬರ ಮೇಲೊಬ್ಬರು ಕೈಯೆತ್ತುವರು.
[14] ಯೆಹೂದವೂ ಸಹ ಯೆರೂಸಲೇಮಿನಲ್ಲಿ ಯುದ್ಧಮಾಡುವುದು. ಸುತ್ತಲಿರುವ ಎಲ್ಲಾ ಜನಾಂಗಗಳ ಸಂಪತ್ತು, ಚಿನ್ನ, ಬೆಳ್ಳಿ ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲಾಗುವುದು.
[15] ಆ ಗುಡಾರಗಳಲ್ಲಿರುವ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳಿಗೆ ಈ ವ್ಯಾಧಿಯೇ ತಗಲುವದು.
[16] ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗಗಳಲ್ಲಿ ಉಳಿದವರೆಲ್ಲಾ ವರ್ಷ ವರ್ಷಕ್ಕೆ ಅರಸನಾದ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸುವುದಕ್ಕೂ, ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೂ ಹೋಗುವರು.
[17] ಭೂಮಿಯ ಜನಾಂಗಗಳಲ್ಲಿ ಅರಸನಾದ ಸೇನಾಧೀಶ್ವರ ಯೆಹೋವ ದೇವರನ್ನು ಆರಾಧಿಸುವುದಕ್ಕೆ ಯೆರೂಸಲೇಮಿಗೆ ಹೋಗದಿದ್ದರೆ, ಅವರ ಮೇಲೆ ಮಳೆ ಬರುವುದಿಲ್ಲ.
[18] ಈಜಿಪ್ಟಿನವರು ಹೋಗದಿದ್ದರೆ ಮತ್ತು ಹಬ್ಬವನ್ನು ಆಚರಿಸುವುದಕ್ಕೆ ಬರದಿದ್ದರೆ ಅವರಿಗೂ ಮಳೆ ಬರುವುದಿಲ್ಲ. ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೆ ಬಾರದ ಇತರ ಜನಾಂಗಗಳಿಗೆ ಯೆಹೋವ ದೇವರು ಬಾಧಿಸುವ ವ್ಯಾಧಿಯು ಅವರ ಮೇಲೆ ತಗಲುವುದು.
[19] ಇದೇ ಈಜಿಪ್ಟಿನ ದಂಡನೆಯೂ, ಗುಡಾರಗಳ ಹಬ್ಬವನ್ನು ಆಚರಿಸುವುದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವುದು.
[20] ಆ ದಿವಸದಲ್ಲಿ, ಕುದುರೆಗಳ ಘಂಟೆಗಳ ಮೇಲೆ ಯೆಹೋವ ದೇವರಿಗೆ ಪರಿಶುದ್ಧವು ಎಂದಿರುವುದು. ಯೆಹೋವ ದೇವರ ಆಲಯದ ಪಾತ್ರೆಗಳು ಬಲಿಪೀಠದ ಮುಂದಿನ ಪಾತ್ರೆಗಳ ಹಾಗಿರುವುವು.
[21] ಯೆರೂಸಲೇಮಿನಲ್ಲಿಯೂ, ಯೆಹೂದದಲ್ಲಿಯೂ ಇರುವ ಪ್ರತಿಯೊಂದು ಪಾತ್ರೆಯು ಸೇನಾಧೀಶ್ವರ ಯೆಹೋವ ದೇವರಿಗೆ ಪರಿಶುದ್ಧವಾಗಿರುವುವು. ಯಜ್ಞಗಳನ್ನು ಅರ್ಪಿಸುವವರೆಲ್ಲರು ಬಂದು ಅವುಗಳನ್ನು ತೆಗೆದುಕೊಂಡು ಅವುಗಳಲ್ಲಿ ಬೇಯಿಸುವರು. ಆ ದಿವಸದಲ್ಲಿ, ಕಾನಾನ್ಯನು ಸೇನಾಧೀಶ್ವರ ಯೆಹೋವ ದೇವರ ಆಲಯದಲ್ಲಿ ಇನ್ನು ಮೇಲೆ ಇರುವುದೇ ಇಲ್ಲ.