[1] ಆಗ ನನ್ನ ಸಂಗಡ ಮಾತನಾಡಿದ ದೇವದೂತನು ತಿರುಗಿಬಂದು,
[2] ನಿದ್ರೆ ಹತ್ತಿದವನಂತಿದ್ದ ನನ್ನನ್ನು ಎಬ್ಬಿಸಿದನು. ಅವನು ನನಗೆ, “ನೀನು ಏನು ನೋಡುತ್ತೀ?” ಎಂದು ಕೇಳಿದಾಗ ನಾನು, “ಏಳು ದೀಪಗಳುಳ್ಳ ಬಂಗಾರದ ದೀಪಸ್ತಂಭ ಒಂದನ್ನು ನೋಡುತ್ತಿದ್ದೇನೆ. ಅದರ ಮೇಲೆ ಎಣ್ಣೆಯ ಪಾತ್ರೆಗಳಿವೆ.
[3] ಅದರ ತಲೆಯ ಮೇಲಿರುವ ಏಳು ದೀಪಗಳಿಗೆ ಏಳು ಕೊಳವೆಗಳಿವೆ. ಅದರ ಬಳಿಯಲ್ಲಿ ಎರಡು ಹಿಪ್ಪೆಮರಗಳು, ಪಾತ್ರೆಯ ಬಲಗಡೆಯಲ್ಲಿ ಒಂದೂ, ಪಾತ್ರೆಯ ಎಡಗಡೆಯಲ್ಲಿ ಒಂದೂ ಇದ್ದವು,” ಎಂದನು.
[4] ಹೀಗೆ ನಾನು ಉತ್ತರಕೊಟ್ಟು ನನ್ನ ಸಂಗಡ ಮಾತನಾಡಿದ ದೂತನಿಗೆ, “ನನ್ನ ಒಡೆಯನೇ, ಇವೇನು?” ಎಂದೆನು.
[5] ಆಗ ನನ್ನ ಸಂಗಡ ಮಾತನಾಡಿದ ದೂತನು ಉತ್ತರಕೊಟ್ಟು ನನಗೆ, “ಇವೇನೆಂದು ಗೊತ್ತಿಲ್ಲವೋ?” ಎಂದು ಕೇಳಿದನು. ನಾನು, “ಇಲ್ಲ, ನನ್ನ ಒಡೆಯನೇ,” ಎಂದೆನು.
[6] ಆಗ ಅವನು, “ಜೆರುಬ್ಬಾಬೆಲನಿಗೆ ಯೆಹೋವ ದೇವರ ವಾಕ್ಯವು ಇದೇ: ‘ಪರಾಕ್ರಮದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ.
[7] “ಪರಾಕ್ರಮದ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬಯಲಾಗುವೆ. ಅವನು ಕಲಶದ ಕಲ್ಲನ್ನು ಸ್ಥಾಪಿಸಿ, ‘ದೇವರು ಇದನ್ನು ಆಶೀರ್ವದಿಸಲಿ! ದೇವರು ಇದನ್ನು ಆಶೀರ್ವದಿಸಲಿ!’ ಎಂದು ಘೋಷಿಸುವನು.”
[8] ಇದಲ್ಲದೆ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
[9] “ಜೆರುಬ್ಬಾಬೆಲನ ಕೈಗಳು ಈ ಆಲಯದ ಅಸ್ತಿವಾರವನ್ನು ಹಾಕಿವೆ, ಅವನ ಕೈಗಳೇ ಅದನ್ನು ಪೂರೈಸುವುವು. ಆಗ ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆಂದು ತಿಳಿಯುವಿರಿ.
[10] “ಆ ಏಳು ದೀಪಗಳು ಭೂಮಿಯಲ್ಲೆಲ್ಲಾ ಅತ್ತಿತ್ತ ಓಡಾಡುವ ಯೆಹೋವ ದೇವರ ಕಣ್ಣುಗಳು. ಜನರು ನೂಲುಗುಂಡನ್ನು ಜೆರುಬ್ಬಾಬೆಲನ ಕೈಯಲ್ಲಿ ನೋಡುವಾಗ ಸಂತೋಷಪಡುವರು. ಹೀಗಿರುವುದರಿಂದ ಅಲ್ಪ ಕಾರ್ಯಗಳ ದಿನವನ್ನು ತಿರಸ್ಕರಿಸಿದವರು ಯಾರು?”
[11] ಆಗ ನಾನು ದೇವದೂತನಿಗೆ, “ದೀಪಸ್ತಂಭದ ಎಡಬಲಗಳಲ್ಲಿರುವ ಈ ಎರಡು ಓಲಿವ್ ಮರಗಳು ಏನು?” ಎಂದೆನು.
[12] ಪುನಃ ನಾನು ಅವನಿಗೆ, “ಎರಡು ಚಿನ್ನದ ನಾಳಗಳಿಂದ ಚಿನ್ನದ ಎಣ್ಣೆಯನ್ನು ತಮ್ಮೊಳಗಿಂದ ಸುರಿಸುವ, ಈ ಎರಡು ಹಿಪ್ಪೆಕೊಂಬೆಗಳು ಏನು?” ಎಂದೆನು.
[13] ಅವನು ನನಗೆ, “ಇವು ಏನೆಂದು ತಿಳಿಯುವುದಿಲ್ಲವೋ?” ಎಂದನು. ನಾನು, “ನನ್ನ ಒಡೆಯನೇ, ಇಲ್ಲ,” ಎಂದೆನು.
[14] ಆಗ ಅವನು, “ಇವು ಸಮಸ್ತ ಭೂಮಿಯ ಕರ್ತ ಆಗಿರುವವರ ಸನ್ನಿಧಿಸೇವೆ ಮಾಡಲು ಅಭಿಷೇಕ ಹೊಂದಿರುವ ಇಬ್ಬರು ಸೇವಕರನ್ನು ಸೂಚಿಸುತ್ತದೆ,” ಎಂದನು.