Skip to content
Opens in a new window
Listen to this chapter • 5:18

[1] ಎಂತಹ ಸಂಕಟ ನನ್ನದು! ನಾನು ಬೇಸಿಗೆ ಕಾಲದ ಹಣ್ಣುಗಳನ್ನು ಕೂಡಿಸುವವರ ಹಾಗೆಯೂ ದ್ರಾಕ್ಷಿ ಸುಗ್ಗಿಯಲ್ಲಿ ಹಕ್ಕಲು ಆರಿಸುವವರ ಹಾಗೆಯೂ ಇದ್ದೇನೆ. ತಿನ್ನುವುದಕ್ಕೆ ಗೊಂಚಲೇ ಇಲ್ಲ. ನನಗೆ ಪ್ರಿಯವಾದ ಮೊದಲು ಮಾಗಿದ ಅಂಜೂರದ ಹಣ್ಣುಗಳೂ ಇಲ್ಲ.

[2] ನಿಷ್ಠಾವಂತರು ಭೂಮಿಯೊಳಗಿಂದ ನಾಶವಾಗಿದ್ದಾರೆ. ಮನುಷ್ಯರಲ್ಲಿ ಯಥಾರ್ಥನು ಒಬ್ಬನು ಉಳಿದಿಲ್ಲ; ಎಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾ, ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.

[3] ಕೆಟ್ಟದ್ದನ್ನು ಎರಡು ಕೈಗಳಿಂದ ಚೆನ್ನಾಗಿ ಮಾಡುವಂತೆ ಆಡಳಿತಗಾರರು ಉಡುಗೊರೆಗಳನ್ನು ಕೇಳುತ್ತಾರೆ. ನ್ಯಾಯಾಧಿಪತಿಗಳು ಲಂಚವನ್ನು ತೆಗೆದುಕೊಳ್ಳುತ್ತಾರೆ. ಶಕ್ತಿಶಾಲಿ ಮನುಷ್ಯನು ತನ್ನ ಕೇಡಿನ ಆಸೆಯನ್ನು ತಾನೇ ಹೇಳುತ್ತಾನೆ; ಅವರೆಲ್ಲರೂ ಒಟ್ಟಾಗಿ ಒಳಸಂಚುಮಾಡುತ್ತಾರೆ.

[4] ಅವರಲ್ಲಿ ಉತ್ತಮನು ದತ್ತೂರಿಯ ಹಾಗೆಯೂ ಬಹು ಯಥಾರ್ಥನು ಮುಳ್ಳಿನ ಬೇಲಿಯ ಹಾಗೆಯೂ ಇದ್ದಾನೆ. ದೇವರು ನಿನ್ನನ್ನು ಭೇಟಿಮಾಡುವ ದಿನ ಬಂದಿದೆ, ನಿನ್ನ ಕಾವಲುಗಾರರು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಾರೆ. ಈಗ ನೀವು ಭಯಭೀತರಾಗುವ ಸಮಯ.

[5] ನೆರೆಯವನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸೆ ಇಡಬೇಡಿರಿ; ನಿನ್ನ ಎದೆಯಲ್ಲಿ ಮಲಗುವವಳಿಗೆ ನಿನ್ನ ಬಾಯಿಯ ಬಾಗಿಲುಗಳನ್ನು ಕಾಯಿ.

[6] ಏಕೆಂದರೆ ಮಗನು ತನ್ನ ತಂದೆಯನ್ನು ಅವಮಾನ ಮಾಡುತ್ತಾನೆ. ಮಗಳು ತನ್ನ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ ವಿರೋಧವಾಗಿ ಏಳುತ್ತಾರೆ. ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.

[7] ಆದರೆ ನಾನು ಯೆಹೋವ ದೇವರನ್ನು ಎದುರು ನೋಡುವೆನು. ನನ್ನ ರಕ್ಷಣೆಯ ದೇವರಿಗೋಸ್ಕರ ಕಾದುಕೊಳ್ಳುವೆನು. ನನ್ನ ದೇವರು ನನ್ನ ಕಡೆಗೆ ಕಿವಿಗೊಡುವರು.

[8] ನನ್ನ ಶತ್ರುವೇ, ನನ್ನ ಮೇಲೆ ಸಂತೋಷ ಪಡಬೇಡ, ನಾನು ಬಿದ್ದಿದ್ದರೂ ತಿರುಗಿ ಏಳುವೆನು. ನಾನು ಕತ್ತಲೆಯಲ್ಲಿ ಕುಳಿತುಕೊಂಡರೂ ಯೆಹೋವ ದೇವರೇ ನನಗೆ ಬೆಳಕಾಗಿರುವರು.

[9] ನಾನು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದರಿಂದ ಅವರು ನನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡೆಸುವ ತನಕ ಅವರ ಕೋಪವನ್ನು ತಾಳುವೆನು. ಆತನು ನನ್ನನ್ನು ಬೆಳಕಿಗೆ ತರುವನು. ಆತನ ನೀತಿಯನ್ನು ನೋಡುವೆನು.

[10] ಆಗ ನನ್ನ ಶತ್ರು ಇದನ್ನು ನೋಡುವನು. ಅವನ ಮುಖವನ್ನು ಅವಮಾನದಿಂದ ಮುಚ್ಚಿಕೊಳ್ಳುವನು, “ನಿನ್ನ ಯೆಹೋವ ದೇವರು ಎಲ್ಲಿ?” ಎಂದು ನನ್ನನ್ನು ಜರೆದವರೇ ನಾಚಿಕೆಪಡುವರು. ಇದನ್ನು ನಾನು ಕಣ್ಣಾರೆ ಕಾಣುವೆನು. ಆ ಶತ್ರುಗಳಾದರೋ ಬೀದಿಯ ಕಸದಂತೆ ದಾರಿಹೋಕರ ತುಳಿತಕ್ಕೆ ಈಡಾಗುವರು.

[11] ನಿನ್ನ ಗೋಡೆಗಳು ಪುನಃ ಕಟ್ಟುವ ಆ ದಿವಸ ಬರುವುದು. ಮತ್ತು ನಿಮ್ಮ ಮಿತಿಗಳನ್ನು ಹೆಚ್ಚಿಸುವ ದಿನ ಬರುತ್ತದೆ.

[12] ಆ ದಿವಸದಲ್ಲಿ ಅಸ್ಸೀರಿಯರಿಂದಲೂ ಈಜಿಪ್ಟ್ ಪಟ್ಟಣಗಳಿಂದಲೂ ಯೂಫ್ರೇಟೀಸ್ ನದಿಯವರೆಗೂ ಸಮುದ್ರದಿಂದ ಸಮುದ್ರದವರೆಗೂ ಬೆಟ್ಟದಿಂದ ಬೆಟ್ಟದವರೆಗೂ ಜನರೆಲ್ಲರು ನಿನ್ನ ಬಳಿಗೆ ಬರುವರು.

[13] ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವುದು.

[14] ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆಯನ್ನೂ ನಿನ್ನ ಕೋಲಿನಿಂದ ಮೇಯಿಸು. ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.

[15] ನೀನು ಈಜಿಪ್ಟ್ ದೇಶದೊಳಗಿಂದ ಹೊರಡುವ ದಿವಸಗಳ ಹಾಗೆ ಅವರಿಗೆ ಆಶ್ಚರ್ಯವಾದವುಗಳನ್ನು ತೋರಿಸುವೆನು.

[16] ಜನಾಂಗಗಳು ನೋಡಿ ನಾಚಿಕೊಳ್ಳುವರು ತಮ್ಮ ತಮ್ಮ ಶಕ್ತಿಗೆ ವಂಚಿತರಾಗಿ ನಾಚಿಕೆಪಡುವರು. ತಮ್ಮ ಕೈಗಳನ್ನು ಬಾಯಿಯ ಮೇಲೆ ಇಡುವರು; ಅವರ ಕಿವಿಗಳು ಕಿವುಡಾಗಿ ಹೋಗುವುವು.

[17] ಅವರು ಹಾವಿನಂತೆ, ನೆಲದ ಮೇಲೆ ತೆವಳುವ ಜೀವಿಗಳಂತೆ ಧೂಳನ್ನು ನೆಕ್ಕುತ್ತಾರೆ. ಅವರು ರಂಧ್ರಗಳಿಂದ ಹೊರಗೆ ಬರುವರು. ನಮ್ಮ ದೇವರಾದ ಯೆಹೋವ ದೇವರಿಗೆ ಅವರು ಹೆದರುವರು. ನಿನಗೆ ಭಯಪಡುವರು.

[18] ಪಾಪಗಳನ್ನು ಮತ್ತು ಅಪರಾಧಗಳನ್ನು ಮನ್ನಿಸುವವನೂ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ಲಕ್ಷಿಸದವನೂ, ನಿನ್ನ ಹಾಗೆ ಇರುವ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವುದಿಲ್ಲ. ಏಕೆಂದರೆ ನೀವು ಕರುಣೆಯಲ್ಲಿ ಸಂತೋಷಪಡುತ್ತೀರಿ.

[19] ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ನಮ್ಮ ಪಾಪಗಳನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವನು.

[20] ನೀನು ಪುರಾತನ ಕಾಲದಿಂದಲೂ ನಮ್ಮ ಪಿತೃಗಳಿಗೆ ಪ್ರಮಾಣಮಾಡಿರುವಂತೆ ಯಾಕೋಬನ ವಂಶದವರಿಗೆ ಸತ್ಯಪರನಾಗಿಯೂ, ಅಬ್ರಹಾಮನ ವಂಶದವರಿಗೆ ಪ್ರೀತಿಪರನಾಗಿಯೂ ನಡೆಯುವಿ.

ಮೀಕ — Chapters