Skip to content
Opens in a new window
Listen to this chapter • 3:49

[1] ನಿನೆವೆಯ ವಿಷಯವಾದ ಪ್ರವಾದನೆ: ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು.

[2] ಯೆಹೋವ ದೇವರು ಅಸೂಯೆಪಡುವ ಮತ್ತು ಸೇಡು ತೀರಿಸಿಕೊಳ್ಳುವ ದೇವರು. ಅವರು ತಮ್ಮನ್ನು ಎದುರಿಸುವವರನ್ನು ಎದುರಿಸುತ್ತಾರೆ. ಯೆಹೋವ ದೇವರು ರೋಷದಿಂದ ಮುಯ್ಯಿಗೆ ಮುಯ್ಯಿ ತೀರಿಸುತ್ತಾರೆ. ಯೆಹೋವ ದೇವರು ತಮ್ಮ ವೈರಿಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸಿ, ತಮ್ಮ ಶತ್ರುಗಳ ಮೇಲೆ ಕೋಪವನ್ನು ಪ್ರಕಟಿಸಿಕೊಳ್ಳುತ್ತಾರೆ.

[3] ಯೆಹೋವ ದೇವರು ಕೋಪಗೊಳ್ಳುವುದರಲ್ಲಿ ಶಾಂತಿಸ್ವರೂಪರು. ಆದರೂ ಶಕ್ತಿಯಲ್ಲಿ ಮಹತ್ತಾದವರು. ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ಶಿಕ್ಷಿಸದೆ ಇರರು. ಯೆಹೋವ ದೇವರ ಮಾರ್ಗವು ಸುಳಿಗಾಳಿಯಲ್ಲಿಯೂ, ಬಿರುಗಾಳಿಯಲ್ಲಿಯೂ ಇದೆ. ಮೇಘಗಳು ಅವರ ಕಾಲುಗಳ ಧೂಳೇ.

[4] ಅವರು ಸಮುದ್ರವನ್ನು ಗದರಿಸಿ, ಅದನ್ನು ಒಣಗುವಂತೆ ಮಾಡುತ್ತಾರೆ. ಸಕಲನದಿಗಳನ್ನು ಬತ್ತಿಸುತ್ತಾರೆ. ಬಾಷಾನು, ಕರ್ಮೆಲು ಬಾಡಿ ಹೋಗುತ್ತವೆ ಮತ್ತು ಲೆಬನೋನಿನ ಹೂವು ಬಾಡಿ ಹೋಗುತ್ತದೆ.

[5] ಬೆಟ್ಟಗಳು ಅವರ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ, ಲೋಕವೂ, ಅದರ ನಿವಾಸಿಗಳೆಲ್ಲವೂ ಅವರ ಮುಂದೆ ನಡುಗುತ್ತವೆ.

[6] ಅವರ ರೌದ್ರದ ಎದುರಿಗೆ ಯಾರು ನಿಲ್ಲುವರು? ಅವರ ರೋಷಾಗ್ನಿಯಲ್ಲಿ ಯಾರು ನಿಂತುಕೊಳ್ಳುವರು? ಅವರ ಕೋಪಾಗ್ನಿ ಬೆಂಕಿಯ ಹಾಗೆ ಸುರಿಸಲಾಗಿದೆ; ಬಂಡೆಗಳು ಆತನ ಮುಂದೆ ಕೆಡವಲಾಗಿವೆ.

[7] ಯೆಹೋವ ದೇವರು ಒಳ್ಳೆಯವರು. ಇಕ್ಕಟ್ಟಿನ ದಿವಸದಲ್ಲಿ ಆಶ್ರಯದಾತರಾಗಿದ್ದಾರೆ. ತಮ್ಮಲ್ಲಿ ನಂಬಿಕೆ ಇಡುವವರನ್ನು ಅವರು ಪರಿಪಾಲಿಸುತ್ತಾರೆ.

[8] ಆದರೆ ಮೇರೆ ಮೀರುವ ಪ್ರಳಯದಿಂದ ನಿನೆವೆಯನ್ನು ಮುಗಿಸಿಬಿಡುವರು. ಕತ್ತಲೆ ಅವರ ಶತ್ರಗಳನ್ನು ಹಿಂದಟ್ಟುವುದು.

[9] ಯೆಹೋವ ದೇವರಿಗೆ ವಿರೋಧವಾಗಿ ಅವರು ಏನೇನು ಯೋಚಿಸಿರುವರೋ, ಅದನ್ನು ಅವರು ಅಂತ್ಯಗೊಳಿಸುವರು. ತೊಂದರೆಯು ಎರಡು ಸಾರಿ ಏಳದು.

[10] ಅವರು ಮುಳ್ಳುಗಳಲ್ಲಿ ಸಿಕ್ಕಿಕೊಳ್ಳುವರು, ತಮ್ಮ ದ್ರಾಕ್ಷಾರಸದಿಂದ ಮತ್ತರಾಗುವರು. ಪೂರ್ಣವಾಗಿ ಒಣಗಿದ ಕೂಳೆಯಂತೆ ಅವರು ಸುಟ್ಟು ಹೋಗುವರು.

[11] ನಿನೆವೆಯೇ ಯೆಹೋವ ದೇವರಿಗೆ ವಿರೋಧವಾಗಿ ದುರಾಲೋಚನೆ ಮಾಡಿ, ಕೇಡನ್ನು ಯೋಚಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.

[12] ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರೊಂದಿಗೆ ಒಪ್ಪಂದ ಮಾಡಿಕೊಂಡವರಿದ್ದರೂ, ಅವರು ಬಹುಮಂದಿಯಾಗಿದ್ದರೂ ನಾಶಕ್ಕೆ ಒಳಗಾಗುವರು. ಯೆಹೂದವೇ, ನಾನು ನಿನ್ನನ್ನು ಕಷ್ಟಪಡಿಸಿದಾಗ್ಯೂ, ಇನ್ನು ಮೇಲೆ ಕಷ್ಟಪಡಿಸೆನು.

[13] ನಾನು ಈಗ ನಿನ್ನ ಮೇಲಿನ ಅವರ ನೊಗವನ್ನು ಮುರಿದು, ನಿನ್ನ ಬಂಧನಗಳನ್ನು ಹರಿದುಬಿಡುವೆನು.

[14] ನಿನೆವೆಯೇ, ನಿನ್ನ ವಿಷಯವಾಗಿ ಯೆಹೋವ ದೇವರು ಆಜ್ಞಾಪಿಸುವುದೇನೆಂದರೆ: ಹೆಸರೆತ್ತಲು ನಿನಗೆ ಸಂತಾನವಿಲ್ಲದಂತೆ ಮಾಡುವೆನು. ನಿನ್ನ ದೇವರ ಮಂದಿರದಲ್ಲಿರುವ ಕೆತ್ತಿದ ವಿಗ್ರಹವನ್ನೂ, ಎರಕ ಬೊಂಬೆಯನ್ನೂ ನಾಶಮಾಡುವೆನು. ನೀನು ತುಚ್ಛನಾದದ್ದರಿಂದ ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು.

[15] ಇಗೋ, ಪರ್ವತಗಳ ಮೇಲೆ ಶುಭಸಮಾಚಾರವನ್ನು ತಂದು, ಸಮಾಧಾನವನ್ನು ತಿಳಿಸುವವನ ಪಾದಗಳನ್ನು ನೋಡು. ಯೆಹೂದವೇ, ನಿನ್ನ ಪರಿಶುದ್ಧ ಹಬ್ಬಗಳನ್ನು ನಡೆಸು, ನಿನ್ನ ಹರಕೆಗಳನ್ನು ಸಲ್ಲಿಸು. ಏಕೆಂದರೆ ಇನ್ನು ಮೇಲೆ ದುಷ್ಟರು ನಿನ್ನ ಮೇಲೆ ಮುತ್ತಿಗೆ ಹಾಕರು. ಅವರು ಸಂಪೂರ್ಣವಾಗಿ ನಾಶವಾಗುವರು.

ನಹೂಮ — Chapters