[1] ಯೆಹೋವ ದೇವರು ಹೇಳುವುದನ್ನು ಈಗ ಕೇಳಿರಿ, ಎದ್ದೇಳು, ಬೆಟ್ಟಗಳ ಮುಂದೆ ವ್ಯಾಜ್ಯವಾಡು; ನೀನು ಹೇಳುವುದನ್ನು ಗುಡ್ಡಗಳು ಕೇಳಲಿ.
[2] ಬೆಟ್ಟಗಳೇ, ಯೆಹೋವ ದೇವರ ಆಪಾದನೆಯನ್ನು ಕೇಳಿರಿ. ಭೂಮಿಯ ಶಾಶ್ವತವಾದ ಅಸ್ತಿವಾರಗಳೇ ಕಿವಿಗೊಡಿರಿ. ಏಕೆಂದರೆ ಯೆಹೋವ ದೇವರಿಗೆ ತಮ್ಮ ಜನರ ವಿರುದ್ಧ ವ್ಯಾಜ್ಯವಿದೆ, ಅವರು ಇಸ್ರಾಯೇಲಿನ ವಿರುದ್ಧ ಆರೋಪಿಸುತ್ತಾರೆ.
[3] ನನ್ನ ಜನರೇ, ನಾನು ನಿಮಗೆ ಏನು ಮಾಡಿದ್ದೇನೆ? ನಾನು ನಿಮ್ಮ ಮೇಲೆ ಭಾರ ಹಾಕಿದ್ದೇನೋ? ನನಗೆ ಉತ್ತರಕೊಡಿರಿ.
[4] ನಾನು ಈಜಿಪ್ಟ್ ದೇಶದೊಳಗಿಂದ ನಿನ್ನನ್ನು ಮೇಲೆ ಬರಮಾಡಿ, ದಾಸತ್ವದ ದೇಶದೊಳಗಿಂದ ನಿನ್ನನ್ನು ವಿಮೋಚಿಸಿ, ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ನಿನಗೆ ನಾಯಕರನ್ನಾಗಿ ಕಳುಹಿಸಿದೆನು.
[5] ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಯೋಚಿಸಿದ್ದನ್ನೂ ಬೆಯೋರನ ಮಗ ಬಿಳಾಮನು ಅವನಿಗೆ ಉತ್ತರವಾಗಿ ಹೇಳಿದ್ದನ್ನೂ ಶಿಟ್ಟೀಮು ಮೊದಲುಗೊಂಡು ಗಿಲ್ಗಾಲಿನ ವರೆಗೆ ಆದ ನಿಮ್ಮ ಪ್ರಯಾಣವನ್ನೂ ಈಗ ಜ್ಞಾಪಕಮಾಡಿಕೊಳ್ಳಿರಿ. ಆಗ ಯೆಹೋವ ದೇವರ ನೀತಿಯ ಕೃತ್ಯಗಳನ್ನು ತಿಳಿದುಕೊಳ್ಳುವಿರಿ.
[6] ನಾನು ಯಾವುದರೊಂದಿಗೆ ಯೆಹೋವ ದೇವರ ಮುಂದೆ ಬಂದು, ಯಾವುದರೊಂದಿಗೆ ಉನ್ನತವಾದ ದೇವರ ಮುಂದೆ ಅಡ್ಡಬೀಳಲಿ? ದಹನಬಲಿಗಳ ಮತ್ತು ಒಂದು ವರ್ಷದ ಕರುಗಳ ಸಂಗಡ ಆತನ ಮುಂದೆ ಹೋಗಲೇ?
[7] ಯೆಹೋವ ದೇವರು ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಮೆಚ್ಚುವರೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನೂ ಕೊಡಲೋ?
[8] ಮನುಷ್ಯನೇ, ಒಳ್ಳೆಯದೇನೆಂದು ನಿನಗೆ ದೇವರು ತೋರಿಸಿದ್ದಾರೆ. ಹೌದು, ನ್ಯಾಯವನ್ನು ಕೈಗೊಳ್ಳುವದೂ ಕರುಣೆಯನ್ನು ಪ್ರೀತಿಸುವುದೂ ನಿನ್ನ ದೇವರ ಮುಂದೆ ನಮ್ರನಾಗಿ ನಡೆದುಕೊಳ್ಳುವದೂ ಇದನ್ನೇ ಹೊರತು ಯೆಹೋವ ದೇವರು ನಿನ್ನಿಂದ ಇನ್ನೇನನ್ನು ಅಪೇಕ್ಷಿಸುತ್ತಾರೆ?
[9] ಕೇಳು! ಯೆಹೋವ ದೇವರು ಪಟ್ಟಣವನ್ನು ಕರೆಯುತ್ತಿದ್ದಾರೆ. ನಿಮ್ಮ ನಾಮಕ್ಕೆ ಭಯಪಡುವುದು ಜ್ಞಾನ. ಕೋಲು ಮತ್ತು ಅದನ್ನು ನೇಮಿಸಿದ ವ್ಯಕ್ತಿಯನ್ನು ಎಚ್ಚರಿಕೆಯಿಂದ ಆಲಿಸಿರಿ.
[10] ದುಷ್ಟಮನೆತನವೇ ನೀನು ಕೆಟ್ಟದ್ದಾಗಿ ಸಂಪಾದಿಸಿದ್ದನ್ನು ಶಾಪಗ್ರಸ್ತರಾದ ಕಡಿಮೆ ಅಳತೆಯನ್ನು ನಾನು ಮರೆಯಬೇಕೋ?
[11] ನಾನು ದುಷ್ಟತ್ವದ ತಕ್ಕಡಿಗಳುಳ್ಳವರನ್ನು ಮೋಸವಾದ ಕಲ್ಲುಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
[12] ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿದ್ದಾರೆ. ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವರಾಗಿದ್ದಾರೆ. ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.
[13] ಆದ್ದರಿಂದ ನಾನು ಸಹ ನಿನ್ನನ್ನು ಹೊಡೆದು ನಿನ್ನ ಪಾಪಗಳ ನಿಮಿತ್ತ ನಿನ್ನನ್ನು ಹಾಳುಮಾಡುವೆನು.
[14] ನೀನು ಉಂಡರೂ ತೃಪ್ತಿಯಾಗದೆ ಇರುವೆ; ನಿನ್ನೊಳಗೆ ಹಸಿವೆಯು ಇರುವುದು; ನೀವು ಸಂಗ್ರಹಿಸುತ್ತೀರಿ ಆದರೆ ಏನನ್ನೂ ಉಳಿಸುವುದಿಲ್ಲ, ಏಕೆಂದರೆ ನೀವು ಉಳಿಸುವದನ್ನು ನಾನು ಕತ್ತಿಗೆ ಕೊಡುತ್ತೇನೆ.
[15] ನೀನು ಬೀಜ ಬಿತ್ತಿ ಕೊಯ್ಯದೆ ಇರುವೆ; ಹಿಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವೆ; ದ್ರಾಕ್ಷಾರಸಮಾಡಿ ಕುಡಿಯದೆ ಇರುವೆ.
[16] ಏಕೆಂದರೆ ಒಮ್ರಿಯ ನಿಯಮಗಳನ್ನೂ ಕೈಕೊಳ್ಳುತ್ತೀರಿ. ಅಹಾಬ್ ಮನೆತನದ ದುರಾಚಾರಗಳನ್ನೂ ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ನಿಮ್ಮ ಜನರನ್ನು ಅಪಹಾಸ್ಯಕ್ಕೆ ಗುರಿಮಾಡುವೆನು. ಆದ್ದರಿಂದ ನೀವು ನನ್ನ ಜನರ ನಿಂದೆಯನ್ನು ಹೊರುವಿರಿ.