Skip to content
Opens in a new window
Listen to this chapter • 3:31

[1] ಅಪರಾಧವನ್ನು ಯೋಚಿಸಿ ಅಪರಾಧವನ್ನು ಕಲ್ಪಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡೆಸುವವರಿಗೆ ಕಷ್ಟ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ. ಏಕೆಂದರೆ ಅದು ಅವರ ಕೈಶಕ್ತಿಯಲ್ಲಿದೆ.

[2] ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತೆಗೆದುಕೊಳ್ಳುತ್ತಾರೆ. ಮನೆಗಳನ್ನೂ ಸಹ ತೆಗೆದುಕೊಳ್ಳುತ್ತಾರೆ. ಮನುಷ್ಯನಿಗೂ ಅವನ ಮನೆಗೂ ಇತರರಿಗೂ ಅವನ ಸ್ವಾಸ್ತ್ಯವನ್ನು ಕಸಿದುಕೊಳ್ಳುತ್ತಾರೆ.

[3] ಆದ್ದರಿಂದ ಯೆಹೋವ ದೇವರು ಹೀಗೆನ್ನುತ್ತಾರೆ, “ಇಗೋ, ನಾನು ಈ ವಂಶಕ್ಕೆ ವಿರೋಧವಾಗಿ ನಾಶನವನ್ನು ಯೋಚಿಸುತ್ತೇನೆ. ಇದರಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲಾರಿರಿ. ಅಹಂಕಾರವಾಗಿ ನಡೆಯದೆ ಇರುವಿರಿ. ಇದು ವಿಪತ್ತಿನ ಕಾಲವೇ,

[4] ಆ ದಿನದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡುವರು. ‘ನಾವು ಸಂಪೂರ್ಣವಾಗಿ ಹಾಳಾಗಿದ್ದೇವೆ. ನನ್ನ ಪ್ರಜೆಗಳ ಆಸ್ತಿ ವಿಭಾಗವಾಗಿದೆ. ಆತನು ಅದನ್ನು ನನ್ನಿಂದ ತೆಗೆದುಕೊಳ್ಳುವನು. ಆತನು ನಮ್ಮ ಹೊಲಗಳನ್ನು ದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ,’ ” ಎಂಬ ದುಃಖದಾಯಕ ಸಂಗೀತದಿಂದ ಹಾಸ್ಯಮಾಡುವರು.

[5] ಆದ್ದರಿಂದ ಚೀಟುಹಾಕಿ ದೇಶವನ್ನು ಹಂಚುವದಕ್ಕೆ ಯೆಹೋವ ದೇವರ ಸಭೆಯಲ್ಲಿ ನಿನಗೆ ಯಾರೂ ಇರುವುದಿಲ್ಲ.

[6] “ಪ್ರವಾದಿಸಬೇಡ, ಈ ಸಂಗತಿಗಳ ಬಗ್ಗೆ ಪ್ರವಾದನೆ ಹೇಳಬೇಡ. ಅವಮಾನ ನಮ್ಮ ಮೇಲೆ ಬರುವುದೇ ಇಲ್ಲ,” ಎಂದು ಅವರ ಪ್ರವಾದಿಗಳು ಹೇಳುತ್ತಾರೆ.

[7] ಯಾಕೋಬಿನ ಮನೆತನದವರೇ, “ಯೆಹೋವ ದೇವರ ಆತ್ಮವು ಕೋಪಗೊಂಡಿದೆಯೇ? ಅವರು ಇಂಥ ಕಾರ್ಯ ಮಾಡುವರೋ?” “ಯಥಾರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೆಯದನ್ನು ಮಾಡುವುದಿಲ್ಲವೋ?

[8] ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ. ಯುದ್ಧದಿಂದ ತಿರುಗಿಕೊಂಡು ನಿರ್ಭಯವಾಗಿ ಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊಳ್ಳುತ್ತೀರಿ.

[9] ನನ್ನ ಜನರ ಸ್ತ್ರೀಯರನ್ನು ಅವರ ರಮ್ಯವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ. ಅವರ ಮಕ್ಕಳಿಂದ ನನ್ನ ಆಶೀರ್ವಾದವನ್ನು ಎಂದೆಂದಿಗೂ ತೆಗೆದಿದ್ದೀರಿ.

[10] ಎದ್ದು ಹೋಗಿರಿ; ಇದು ನಿಮ್ಮ ವಿಶ್ರಾಂತಿಯ ಸ್ಥಳವಲ್ಲ, ಏಕೆಂದರೆ ಇದಕ್ಕೆ ಹೊಲಸು ಅಂಟಿಕೊಂಡು, ಯಾವ ಸುಧಾರಣೆಗೂ ಒಳಗಾಗದಂತೆ ಹಾಳಾಗಿ ಹೋಗಿಬಿಟ್ಟಿದೆ.

[11] ಒಬ್ಬ ಸುಳ್ಳುಗಾರನೂ ಮೋಸಗಾರನೂ ಬಂದು, ‘ನಿನಗೆ ದ್ರಾಕ್ಷಾರಸವೂ ಮದ್ಯಪಾನವೂ ಯಥೇಚ್ಛವಾಗಿ ದೊರೆಯುವುದೆಂದು ನಾನು ಪ್ರವಾದಿಸುವೆನು,’ ಎಂದು ಹೇಳಿದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.

[12] “ಯಾಕೋಬೇ, ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು. ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು. ಬೊಚ್ರದ ಕುರಿಗಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆಯಂತೆಯೂ ಅವರನ್ನು ಒಟ್ಟಾಗಿ ಕೂಡಿಸುವೆನು. ಹುಲ್ಲುಗಾವಲಿನ ಕುರಿಮಂದೆಯಂತೆ, ಸ್ಥಳವು ಜನರಿಂದ ತುಂಬಿ ತುಳುಕುವುದು.

[13] ಮಾರ್ಗ ತೆರೆಯುವಾತನು ಅವರ ಮುಂದೆ ಹೋಗುವನು. ಅವರು ಬಾಗಿಲು ತೆರೆದು ಹೊರಗೆ ಹೋಗುವರು. ಅವರ ಅರಸನು ಅವರ ಮುಂದೆ ಹಾದು ಹೋಗುತ್ತಾನೆ. ಯೆಹೋವ ದೇವರು ಅವರ ಮುಂದಾಳತ್ವವನ್ನು ವಹಿಸುವರು.”

ಮೀಕ — Chapters