[1] ಯೆಹೂದದ ಅರಸರಾದ ಯೋತಾಮನ ಆಹಾಜನ, ಹಿಜ್ಕೀಯನ, ದಿವಸಗಳಲ್ಲಿ ಮೊರೇಷೆತಿನವನಾದ ಮೀಕನಿಗೆ ಬಂದ ಯೆಹೋವ ದೇವರ ವಾಕ್ಯವು. ಅವನು ಸಮಾರ್ಯ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡ ದರ್ಶನ.
[2] ಎಲ್ಲಾ ಜನಗಳೇ ಕೇಳಿರಿ, ಭೂಮಿಯೇ, ಅದರಲ್ಲಿರುವವರೆಲ್ಲರೇ, ಕಿವಿಗೊಡಿರಿ. ಸಾರ್ವಭೌಮ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದೊಳಗಿಂದ ನಿಮಗೆ ವಿರೋಧವಾಗಿ ಸಾಕ್ಷಿ ಹೇಳುವರು.
[3] ಯೆಹೋವ ದೇವರು ತಮ್ಮ ವಾಸಸ್ಥಾನದಿಂದ ಇಳಿದು ಬರುತ್ತಾರೆ. ಅವರು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ಸಂಚರಿಸುತ್ತಾರೆ.
[4] ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ರಭಸವಾಗಿ ಹರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವುವು; ತಗ್ಗುಗಳು ಸೀಳುವುವು.
[5] ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೇ ಇಸ್ರಾಯೇಲಿನ ಮನೆತನದವರ ಪಾಪದಿಂದಲೇ, ಯಾಕೋಬನ ಅಪರಾಧವೇನು? ಅದು ಸಮಾರ್ಯವಲ್ಲವೇ? ಯೆಹೂದದ ಉನ್ನತ ಪೂಜಾಸ್ಥಳ ಯಾವುದು? ಅದು ಯೆರೂಸಲೇಮು ಅಲ್ಲವೋ?
[6] ಹೀಗಿರುವುದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬವನ್ನಾಗಿಯೂ ದ್ರಾಕ್ಷಿಬಳ್ಳಿ ನೆಡುವ ಸ್ಥಳವನ್ನಾಗಿಯೂ ಮಾಡುವೆನು. ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು, ಅದರ ಅಸ್ತಿವಾರಗಳನ್ನು ಹೊರಗೆಡಹುವೆನು.
[7] ಅದರ ವಿಗ್ರಹಗಳೆಲ್ಲಾ ತುಂಡುಗಳಾಗುವಂತೆ ಮಾಡುವೆನು. ಅದರ ಆಲಯದ ಕಾಣಿಕೆಗಳೆಲ್ಲಾ ಬೆಂಕಿಯಿಂದ ಸುಟ್ಟುಹೋಗುವುದು. ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು. ಅದು ವೇಶ್ಯಾವೃತ್ತಿಯ ಕೂಲಿಯಿಂದ ಕೂಡಿಸಿಕೊಂಡವು. ವೇಶ್ಯಾವೃತ್ತಿಯ ಕೂಲಿಯನ್ನಾಗಿಯೇ ಅವುಗಳನ್ನು ಉಪಯೋಗಿಸಬೇಕಾಗುತ್ತದೆ.
[8] ಆದ್ದರಿಂದ ನಾನು ಗೋಳಾಡಿ ಅರಚುವೆನು. ಬರಿಗಾಲಿನಲ್ಲಿಯೂ ಬೆತ್ತಲೆಯಾಗಿಯೂ ಹೋಗುವೆನು. ನರಿಗಳ ಹಾಗೆ ಕೂಗುವೆನು, ಉಷ್ಟ್ರಪಕ್ಷಿಯಂತೆ ನರಳುವೆನು.
[9] ಸಮಾರ್ಯದ ಗಾಯವು ಗುಣವಾಗದಂಥದ್ದು, ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಿಲಿಗೂ ಯೆರೂಸಲೇಮಿನವರೆಗೂ ಅದು ತಲುಪಿತು.
[10] ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಬೇತ್ ಒಫ್‌ರಾಹದಲ್ಲಿ ಧೂಳಿನಲ್ಲಿ ಹೊರಳಾಡು.
[11] ಶಾಫೀರಿನ ನಿವಾಸಿಯೇ, ನಗ್ನತೆಯಿಂದಲೂ ನಾಚಿಕೆಯಿಂದಲೂ ಹಾದುಹೋಗಿರಿ, ಚಾನಾನಿನಲ್ಲಿ ವಾಸಿಸುವವರು ಹೊರಗೆ ಬರುವುದಿಲ್ಲ, ಬೇತ್ ಎಚೆಲು ನರಳುತ್ತಿದೆ. ಅದು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದಿಲ್ಲ.
[12] ಕೇಡು ಯೆಹೋವ ದೇವರಿಂದ ಇಳಿದು ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ ಮಾರೋತಿನವರು ಮೇಲುಂಟಾಗುವುದಿಲ್ಲವೋ ಎಂದು ವೇದನೆ ಪಡುತ್ತಾರೆ.
[13] ಲಾಕೀಷಿನ ನಿವಾಸಿಗಳೇ, ಕುದುರೆಗಳನ್ನು ರಥಕ್ಕೆ ಕಟ್ಟಿರಿ, ಚೀಯೋನ್ ಮಗಳ ಪಾಪವು ನಿನ್ನಿಂದ ಪ್ರಾರಂಭವಾಯಿತು ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿ ಬಂದವು.
[14] ಹೀಗಿರುವುದರಿಂದ ಮೋರೆಶತ್ ಗತ್ ಊರಿಗೆ ಅಗಲಿ ಹೋಗುವ ಕಾಣಿಕೆಗಳನ್ನು ಕೊಡುವೆ. ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಮೋಸಮಾಡುವುವು.
[15] ಮಾರೇಷದ ನಿವಾಸಿಯೇ, ನಿನಗೆ ವಿರೋಧವಾಗಿ ಜಯಶಾಲಿಗಳನ್ನು ನಾನು ತರುವೆನು. ಇಸ್ರಾಯೇಲಿನ ಮಹಿಮೆಯಾದಾತನು ಅದುಲ್ಲಾಮಿನ ಮಟ್ಟಿಗೂ ಬರುವನು.
[16] ನಿನ್ನ ಮುದ್ದುಮಕ್ಕಳಿಗೋಸ್ಕರ ತಲೆ ಬೋಳಿಸಿಕೊಂಡು ಕ್ಷೌರಮಾಡಿಸಿಕೋ. ನಿನ್ನ ಬೋಳುತನವನ್ನು ಹದ್ದಿನಂತೆ ಮಾಡಿಕೋ. ಏಕೆಂದರೆ ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗುವರು.