Skip to content
Opens in a new window
Listen to this chapter • 3:35

[1] ಬೇತ್ಲೆಹೇಮಿನಿಂದ ಒಬ್ಬ ಅಧಿಪತಿಯು ಸೈನ್ಯಗಳ ಪಟ್ಟಣವೇ, ಗುಂಪುಗಳಾಗಿ ಕೂಡಿಕೊಳ್ಳಿರಿ. ನಮ್ಮ ಮೇಲೆ ಮುತ್ತಿಗೆ ಹಾಕಿದ್ದಾರೆ. ಇಸ್ರಾಯೇಲಿನ ಅಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ.

[2] ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಮೂಲವು ಪೂರ್ವದಿಂದಲೂ ಅನಾದಿ ಕಾಲದಿಂದಲೂ ಆದದ್ದು.

[3] ಆದ್ದರಿಂದ ಹೆರುವವಳು ಒಬ್ಬ ಮಗನನ್ನು ಹೆರುವ ಕಾಲದವರೆಗೂ ಇಸ್ರಾಯೇಲನ್ನು ಕೈಬಿಡಲಾಗುವುದು. ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲರ ಬಳಿಗೆ ಹಿಂದಿರುಗುವರು.

[4] ಆತನು ಯೆಹೋವ ದೇವರ ಬಲದಲ್ಲಿಯೂ ತನ್ನ ದೇವರಾದ ಯೆಹೋವ ದೇವರ ಹೆಸರಿನ ಘನತೆಯಲ್ಲಿಯೂ ನಿಂತುಕೊಂಡು ತನ್ನ ಮಂದೆಯನ್ನು ಮೇಯಿಸುವನು. ಅವರು ನೆಲೆಯಾಗಿರುವರು, ಆತನ ಘನತೆಯು ಭೂಮಿಯ ಅಂತ್ಯಗಳ ಮಟ್ಟಿಗೂ ತಲುಪುವುದು.

[5] ಆತನೇ ಅವರ ಸಮಾಧಾನವಾಗಿರುವನು. ಅಸ್ಸೀರಿಯದವನು ನಮ್ಮ ನಾಡಿಗೆ ಮುತ್ತಿಗೆ ಹಾಕುವಾಗ ನಮ್ಮ ಕೋಟೆಗಳ ಮೂಲಕ ಸೈನ್ಯವಾಗಿ ಹೋಗುವಾಗ ನಾವು ಅವನಿಗೆ ವಿರೋಧವಾಗಿ ಏಳು ಕುರುಬರನ್ನೂ ಎಂಟು ಸೇನಾಪತಿಗಳನ್ನೂ ಎಬ್ಬಿಸುವೆವು.

[6] ಅವರು ಅಸ್ಸೀರಿಯ ದೇಶವನ್ನು ಖಡ್ಗದಿಂದಲೂ ನಿಮ್ರೋದನ ದೇಶವನ್ನು ಹಿಡಿದ ಖಡ್ಗದಿಂದಲೂ ಆಳುವರು. ಅಸ್ಸೀರಿಯವು ನಮ್ಮ ದೇಶದಲ್ಲಿ ಬಂದು ನಮ್ಮ ಪ್ರದೇಶವನ್ನು ಮುತ್ತಿಗೆ ಹಾಕಿ ಪ್ರಾಂತಗಳಲ್ಲಿ ನಡೆಯುವಾಗ ಆತನು ನಮ್ಮನ್ನು ತಪ್ಪಿಸುವನು.

[7] ಇದಲ್ಲದೆ ಯಾಕೋಬನ ಶೇಷವು ಅನೇಕ ಜನಾಂಗಳ ಮಧ್ಯದಲ್ಲಿ ಯೆಹೋವ ದೇವರಿಂದ ಬಂದ ಮಂಜಿನ ಹಾಗೆಯೂ ಹುಲ್ಲಿನ ಮೇಲೆ ಜಡಿಮಳೆಯ ಹಾಗೆಯೂ ಇರುವುದು. ಅದು ಮನುಷ್ಯರಿಗೋಸ್ಕರ ಆತುಕೊಳ್ಳುವುದಿಲ್ಲ, ಮನುಷ್ಯ ಮಕ್ಕಳಿಗಾಗಿ ಕಾದುಕೊಳ್ಳುವುದಿಲ್ಲ.

[8] ಯಾಕೋಬನ ಜನಶೇಷವು ದೇಶದೇಶಗಳೊಳಗೆ ಅನೇಕ ಜನಾಂಗಗಳ ಮಧ್ಯದಲ್ಲಿ, ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವುದು. ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸಲಾರರು,

[9] ನಿನ್ನ ಕೈ ನಿನ್ನ ವೈರಿಗಳೆಲ್ಲರ ಮೇಲೆ ಉನ್ನತವಾಗಿರುವುದು. ನಿನ್ನ ಶತ್ರುಗಳೆಲ್ಲರು ನಾಶಹೊಂದುವರು.

[10] ಯೆಹೋವ ದೇವರು ಹೀಗೆ ಘೋಷಿಸುತ್ತಾರೆ: “ಆ ದಿವಸದಲ್ಲಿ, ನಾನು ನಿನ್ನ ಮಧ್ಯದೊಳಗಿರುವ ನಿನ್ನ ಕುದುರೆಗಳನ್ನು ಕಡಿದುಬಿಟ್ಟು ನಿನ್ನ ರಥಗಳನ್ನು ನಾಶಮಾಡುವೆನು.

[11] ನಿನ್ನ ದೇಶದ ಪಟ್ಟಣಗಳನ್ನು ನಾಶಮಾಡಿಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.

[12] ನಿನ್ನ ಮಂತ್ರತಂತ್ರವನ್ನು ನಾಶಮಾಡುವೆನು; ಕಣಿ ಹೇಳುವವರು ನಿನಗೆ ಇನ್ನು ಇರುವುದಿಲ್ಲ.

[13] ನಿನ್ನ ಕೆತ್ತಿದ ವಿಗ್ರಹಗಳನ್ನೂ ನಿಂತಿರುವ ನಿನ್ನ ಪ್ರತಿಮೆಗಳನ್ನೂ ಸಹ ನಿನ್ನ ಮಧ್ಯದೊಳಗಿಂದ ಕಡಿದುಬಿಡುವೆನು. ಇನ್ನು ನಿನ್ನ ಸ್ವಂತ ಕೈಗಳು ರೂಪಿಸಿದ್ದನ್ನು ನೀನು ಆರಾಧಿಸದಂತೆ ಮಾಡುವೆನು.

[14] ನಿನ್ನ ಅಶೇರ ಸ್ತಂಭಗಳನ್ನು ನಿನ್ನ ಮಧ್ಯದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶಮಾಡುವೆನು.

[15] ನನಗೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿಗೆ ಮುಯ್ಯಿತೀರಿಸುವೆನು.”

ಮೀಕ — Chapters